
ವಿಜಯಪುರ: ನಗರದ ಆರಾಧ್ಯ ದೈವ ಸಿದ್ದೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವದ 3ನೇ ದಿನವಾದ ಮಂಗಳವಾರ ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ಸಪ್ತ ನಂದಿಕೋಲುಗಳೊಂದಿಗೆ ಶ್ವೇತ ವಸ್ತ್ರಧಾರಿ ಭಕ್ತರು ಹಾಗೂ ಪಂಚ ಕಮಿಟಿ ಸದಸ್ಯರು ಸಿದ್ಧರಾಮನ ಯೋಗ ದಂಡಕ್ಕೆ ನಮಿಸಿದರು. ಅಕ್ಷತಾರ್ಪಣೆ ಭೋಗಿ ಕಾರ್ಯಕ್ರಮವನ್ನು ಶ್ರದ್ಧಾ–ಭಕ್ತಿ ನೆರವೇರಿಸಿದರು.
ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸಿದ್ಧರಾಮನ ಯೋಗ ದಂಡದೊಂದಿಗೆ ಕುಂಬಾರ ಕನ್ಯೆ ಗುಂಡಮ್ಮಳಿಗೆ ಅಕ್ಷತಾರ್ಪಣೆ ಮಾಡಲಾಯಿತು.
ಅರ್ಚಕ ಮುರಗಯ್ಯ ಗಚ್ಚಿನಮಠ ಅವರು ಶಿವಯೋಗಿ ಸಿದ್ದರಾಮೇಶ್ವರ ಚರಿತ್ರೆ ಪಾರಾಯಣ ಮಾಡಿದರು. ಮಾಂಗಲ್ಯ ಧಾರಣೆ, ಅಕ್ಷತಾರ್ಪಣೆ ನಡೆಯಿತು. ಕುಂಬಾರ ಗುಂಡಮ್ಮನ ಮದುವೆ ಬಳಿಕ ಮಹಿಳೆಯರು ಪರಸ್ಪರ ಅರಿಸಿನ-ಕುಂಕುಮ ನೀಡಿದರು.
ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಶಾಸಕ ಬಸನಗೌಡ ಪಾಟೀಲ ಯತ್ನಾಳ ದಂಪತಿ, ಸಿದ್ದೇಶ್ವರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ರಾಮನಗೌಡ ಪಾಟೀಲ ಯತ್ನಾಳ ಅವರು ಗೋವುಗಳ ಉತ್ಪನ್ನಗಳಿಂದ ತಯಾರಿಸಿದ ಕುಂಕುಮ-ಅರಿಸಿನ ಕಿಟ್ ಅನ್ನು ಮಹಿಳೆಯರಿಗೆ ನೀಡಿದರು.
ಮೇಯರ್ ಎಂ.ಎಸ್. ಕರಡಿ, ಸಂಸ್ಥೆಯ ಉಪಾಧ್ಯಕ್ಷ ಸಂಗು ಸಜ್ಜನ, ಚೇರ್ಮನ್ ಬಸಯ್ಯ ಹಿರೇಮಠ, ಪದಾಧಿಕಾರಿಗಳಾದ ಸದಾನಂದ ದೇಸಾಯಿ, ಬಿ.ಎಸ್.ಸುಗೂರ, ಎಂ.ಎಂ.ಸಜ್ಜನ, ಶಿವಾನಂದ ನೀಲಾ, ರಮೇಶ ಹಳ್ಳದ, ಜಾತ್ರಾ ಸಮಿತಿಯ ಗುರು ಗಚ್ಚಿನಮಠ, ಪ್ರೇಮಾನಂದ ಬಿರಾದಾರ, ಎಸ್.ಎಂ.ಪಾಟೀಲ, ಸುರೇಶ ಇಟ್ಟಗಿ, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.