ADVERTISEMENT

ಜಿಲ್ಲಾ ಪಂಚಾಯ್ತಿ ಅಧಿಕಾರವಧಿ ಮುಕ್ತಾಯ ಇಂದು

ಬಹುಮತ ಇದ್ದರೂ ಅಧಿಕಾರ ಅನುಭವಿಸದ ಬಿಜೆಪಿ; ಐದು ವರ್ಷದಲ್ಲಿ ಆಡಳಿತ ನಡೆಸಿದ ಮೂವರು ಅಧ್ಯಕ್ಷರು

ಬಸವರಾಜ ಸಂಪಳ್ಳಿ
Published 5 ಮೇ 2021, 15:32 IST
Last Updated 5 ಮೇ 2021, 15:32 IST

ವಿಜಯಪುರ: ಹಾಲಿ ಜಿಲ್ಲಾ ಪಂಚಾಯ್ತಿ ಅಧಿಕಾರವಧಿ ಮೇ 6ರಂದು ಮುಕ್ತಾಯವಾಗಲಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯನ್ನು ರಾಜ್ಯ ಸರ್ಕಾರ ಆರು ತಿಂಗಳು ಮುಂದೂಡಿದೆ.

ವಿಜಯಪುರ ಜಿಲ್ಲಾ ಪಂಚಾಯ್ತಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಂದೀಪ್‌ ಅವರನ್ನು ಆಡಳಿತಾಧಿಕಾರಿಯನ್ನಾಗಿಈಗಾಗಲೇ ನೇಮಿಸಲಾಗಿದೆ.

ಹಾಲಿ ಇದ್ದ ಜಿಲ್ಲಾ ಪಂಚಾಯ್ತಿ 42 ಕ್ಷೇತ್ರಗಳನ್ನು ಪುನರ್ವಿಂಗಡೆ ಮಾಡಲಾಗಿದ್ದು, 50ಕ್ಕೆ ಏರಿಕೆಯಾಗಿದೆ. ಕ್ಷೇತ್ರ ಪುನರ್ವಿಂಗಡಣೆಯಿಂದಾಗಿ ಬಹಳಷ್ಟು ಹಾಲಿ ಸದಸ್ಯರು ಕ್ಷೇತ್ರಗಳನ್ನು ಕಳೆದುಕೊಂಡಿದ್ದಾರೆ. ಮತ್ತೆ ಕೆಲವು ಕ್ಷೇತ್ರಗಳ ವ್ಯಾಪ್ತಿಯಿಂದ ಗ್ರಾಮಗಳು ಕೈಬಿಟ್ಟು ಬೇರೆ ಕ್ಷೇತ್ರಕ್ಕೆ ಸೇರ್ಪಡೆಯಾಗಿವೆ. ಇದರಿಂದಾಗಿ ಮುಂಬರುವ ಚುನಾವಣೆಗೆ ಸಿದ್ಧತೆ ನಡೆಸತೊಡಗಿರುವ ಆಕಾಂಕ್ಷಿಗಳು ಕ್ಷೇತ್ರಗಳ ಹುಡುಕಾಟ, ಲೆಕ್ಕಾಚಾರದಲ್ಲಿ ನಿರತವಾಗಿದ್ದಾರೆ. ಆದರೆ,ಕೋವಿಡ್‌ ಎಲ್ಲದಕ್ಕೂ ಅಡಚಣೆಯಾಗಿದೆ.

ADVERTISEMENT

ಸಫಲ, ವಿಫಲ:

ಗುರುವಾರಕ್ಕೆ ಆಡಳಿತಾವಧಿ ಮುಕ್ತಾಯವಾಗುತ್ತಿರುವ ಪ್ರಸ್ತುತ ಅವಧಿಯ ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿ 20, ಕಾಂಗ್ರೆಸ್‌ 18, ಜೆಡಿಎಸ್‌ 3 ಮತ್ತು ಒಬ್ಬ ಪಕ್ಷೇತರರು ಸೇರಿದಂತೆ ಒಟ್ಟು 42 ಸದಸ್ಯ ಬಲವನ್ನು ಒಳಗೊಂಡಿತ್ತು. ಬಿಜೆಪಿ ಬಹುಮತ ಇದ್ದರೂ ಒಮ್ಮೆಯೂ ಅಧ್ಯಕ್ಷ ಗಾದಿ ಏರಲು ಸಾಧ್ಯವಾಗಲಿಲ್ಲ. ಬಿಜೆಪಿ ಒಡಕಿನ ಲಾಭ ಪಡೆದ ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ ಹಾಗೂ ಬಿಜೆಪಿ ಬಂಡಾಯ ಸದಸ್ಯರ ಬೆಂಬಲದೊಂದಿಗೆ ಐದು ವರ್ಷ ಆಡಳಿತ ನಡೆಸುವಲ್ಲಿ ಸಫಲವಾಯಿತು.

ಕಾಂಗ್ರೆಸ್‌ನ ನೀಲಮ್ಮ ಮೇಟಿ(32 ತಿಂಗಳು), ಶಿವಯೋಗಪ್ಪ ನೇದಲಗಿ (17 ತಿಂಗಳು) ಹಾಗೂ ಸುಜಾತಾ ಕಳ್ಳಿಮನಿ(10 ತಿಂಗಳು) ಅವರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಬಿಜೆಪಿಯ ಪ್ರಭುಗೌಡ ದೇಸಾಯಿ ಉಪಾಧ್ಯಕ್ಷರಾಗಿ ಐದು ವರ್ಷ ಪೂರ್ಣಗೊಳಿಸಿದರು.

ಐದು ವರ್ಷಗಳ ಆಡಳಿತಾವಧಿಯಲ್ಲಿ ಹತ್ತು, ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅದರಲ್ಲೂ ಪ್ರಮುಖವಾಗಿ ನರೇಗಾ ಯೋಜನೆಯಡಿ ಚೆಕ್‌ಡ್ಯಾಂ ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಜಲಜೀವನ ಮಿಷನ್‌ ಯೋಜನೆಯಡಿ ಮನೆಮನೆಗೆ ನೀರು ಪೂರೈಕೆ ಯೋಜನೆಗಳು ಹೆಚ್ಚು ಯಶಸ್ವಿಯಾಗಿ ಅನುಷ್ಠಾನವಾಗಿವೆ.

‘ಕೊನೆಯ 10 ತಿಂಗಳ ಆಡಳಿತಾವಧಿಯಲ್ಲಿ ಎದುರಾದ ಗ್ರಾಮ ಪಂಚಾಯ್ತಿ ಚುನಾವಣೆ, ಕೋವಿಡ್‌ ವಿಷಯ ಪರಿಸ್ಥಿತಿಯಲ್ಲೇ ಹೆಚ್ಚು ಸಮಯ ಕಳೆದುಹೋಯಿತು. ಅಲ್ಪಾವಧಿಯಲ್ಲೇ ಗ್ರಾಮ ವಾಸ್ತವ್ಯ, ಪ್ರಗತಿಪರ ಕೆಲಸಗಳನ್ನು ಮಾಡಿದ ತೃಪ್ತಿ ಇದೆ’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸ್ಥಾನದಿಂದ ನಿರ್ಗಮಿಸುತ್ತಿರುವ ಸುಜಾತಾ ಕಳ್ಳಿಮನಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

***

ತಾ.ಪಂ.ಗಳಿಗೆ ಆಡಳಿತಾಧಿಕಾರಿಗಳ ನೇಮಕ

ವಿಜಯಪುರ: ಮೇ 5ರಿಂದ 26ರ ವರಗೆ ಅಧಿಕಾರವಧಿ ಮುಕ್ತಾಯಗೊಳ್ಳಲಿರುವ ಜಿಲ್ಲೆಯ ವಿವಿಧ ತಾಲ್ಲೂಕು ಪಂಚಾಯ್ತಿಗಳಿಗೆ ವಿಶೇಷ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಆಡಳಿತಾವಧಿ ಮುಕ್ತಾಯವಾದ ಮರುದಿನವೇ ಆಡಳಿತಾಧಿಕಾರಿಗಳು ಆಯಾ ತಾಲ್ಲೂಕು ಪಂಚಾಯ್ತಿ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

ವಿಜಯಪುರ, ಇಂಡಿ ತಾ.ಪಂ.ಗೆ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ, ತಿಕೋಟಾ ತಾ.ಪಂ.ಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ, ಬಬಲೇಶ್ವರ ಮತ್ತು ಆಲಮೇಲ ತಾ.ಪಂ.ಗೆ ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ, ಬಸವನ ಬಾಗೇವಾಡಿ ತಾ.ಪಂ.ಗೆ ಮುಳವಾಡ ಏತನೀರಾವರಿ ವೃತ್ತದ ಅಧೀಕ್ಷಕ ಎಂಜಿನಿಯರ್‌, ಕೊಲ್ಹಾರ ತಾ.ಪಂ.ಗೆ ಕೆಬಿಜಿಎನ್‌ಎಲ್‌ ಆಲಮಟ್ಟಿಯ ಪ್ರಧಾನ ಲೆಕ್ಕಾಧಿಕಾರಿ, ನಿಡಗುಂದಿ ತಾ.ಪಂ.ಗೆ ಆಲಮಟ್ಟಿ ಅಣೆಕಟ್ಟೆ ವೃತ್ತ ಅಧೀಕ್ಷಕ ಎಂಜಿನಿಯರ್‌, ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾ.ಪಂ.ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ, ಸಿಂದಗಿ ಮತ್ತು ದೇವರಹಿಪ್ಪರಗಿ ತಾ.ಪಂ.ಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಹಾಗೂ ಚಡಚಣ ತಾ.ಪಂ.ಗೆ ಜಿಲ್ಲಾ ಕೈಗಾರಿಕೆ ಜಂಟಿ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.