ADVERTISEMENT

ಜ್ಞಾನ ಸಂಪತ್ತು ಎಲ್ಲಕ್ಕಿಂತ ಅಮೂಲ್ಯ

ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 12:59 IST
Last Updated 11 ಸೆಪ್ಟೆಂಬರ್ 2019, 12:59 IST
ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ಹಾಗೂ ಆರ್ಯಭಟ ಕರಿಯರ್ ಅಕಾಡೆಮಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಸ್ವಾಮೀಜಿಗಳು ಉದ್ಘಾಟಿಸಿದರು
ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ಹಾಗೂ ಆರ್ಯಭಟ ಕರಿಯರ್ ಅಕಾಡೆಮಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಸ್ವಾಮೀಜಿಗಳು ಉದ್ಘಾಟಿಸಿದರು   

ವಿಜಯಪುರ: ‘ಜಗತ್ತಿನಲ್ಲಿ ಜ್ಞಾನಿಯೇ ಶ್ರೇಷ್ಠ ವ್ಯಕ್ತಿ. ವಿದ್ಯೆ ಜಗತ್ತನ್ನು ಆಳುತ್ತದೆಯೇ ಹೊರತು ಸಂಪತ್ತು ಅಲ್ಲ. ಜ್ಞಾನ ಸಂಪತ್ತು ಎಲ್ಲಕ್ಕಿಂತ ಅಮೂಲ್ಯವಾದುದು’ ಎಂದು ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ಹಾಗೂ ಆರ್ಯಭಟ ಕರಿಯರ್ ಅಕಾಡೆಮಿ ವತಿಯಿಂದ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಭಾಷಣದ 126ನೇ ವಾರ್ಷಿಕೋತ್ಸವ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಯುವಕರು ಜ್ಞಾನಾರ್ಜನೆಯತ್ತ ಗಮನಹರಿಸಬೇಕು. ಜ್ಞಾನದ ಹಸಿವನ್ನು ನೀಗಿಸಿಕೊಳ್ಳಲು ಆಸಕ್ತಿ ತೋರಿಸಬೇಕು’ ಎಂದು ಸಲಹೆ ನೀಡಿದರು.

‘ಆಗಸ್ಟ್ 15 ಭಾರತ ಗುಲಾಮಗಿರಿಯಿಂದ ಮುಕ್ತವಾದ ದಿನವಾದರೆ, ಇಡೀ ವಿಶ್ವವನ್ನೇ ಗೆದ್ದು, ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ದಿನ ಸೆ.11. ಆದ್ದರಿಂದ ಇಂದಿನ ಯುವ ಸಮುದಾಯವು ಸ್ವಾಮಿ ವಿವೇಕಾನಂದರ ಚಿಂತನೆ, ವಿಚಾರಧಾರೆಗಳನ್ನು ಅವಲೋಕಿಸುವ ಜತೆಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಅಂದು ವಿವೇಕಾನಂದರ ತತ್ವಗಳಿಗೆ ಇಡೀ ಜಗತ್ತೇ ತಲೆ ಬಾಗಿತ್ತು. ಅದಕ್ಕೆ ಕಾರಣ ಹಣ ಸಂಪತ್ತು ಅಲ್ಲ. ಅವರದಲ್ಲಿದ್ದ ಜ್ಞಾನದ ಸಂಪತ್ತು. ದೇಶವನ್ನು ಕಾಡುತ್ತಿರುವ ಅಜ್ಞಾನದ ಪಿಡುಗನ್ನು ತೊಡೆದು ಹಾಕಲು ಶಿಕ್ಷಣವೊಂದೇ ಮೂಲಮಂತ್ರವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಭಾರತೀಯ ಯುವಕ, ಯುವತಿಯರಲ್ಲಿ ಜ್ಞಾನದ ಶಕ್ತಿ ಅವರ ರಕ್ತದಲ್ಲೇ ಅಡಗಿದೆ. ಆತ್ಮವಿಶ್ವಾಸದ ಕೊರತೆ ಇಂದಿನ ಯುವ ಸಮುದಾಯದ ಯಶಸ್ಸಿಗೆ ತೊಡಕಾಗಿದೆ. ಆದ್ದರಿಂದ, ಯುವಸಮುದಾಯ ಏಕಾಗ್ರತೆ ಹಾಗೂ ಸಕಾರಾತ್ಮಕ ಚಿಂತನೆಗಳಿಂದ ತಮ್ಮ ಬದುಕನ್ನು ಸಾಕಾರಗೊಳಿಸಿಕೊಳ್ಳಬೇಕು. ಆ ಮೂಲಕ ಉತ್ತಮ ದೇಶ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಕರೆ ನೀಡಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ನರೇಶಾನಂದ ಸ್ವಾಮೀಜಿ, ಕೃಪಾ ಮಾಹಿ ಶಾರದಾಶ್ರಮದ ಕೈವಲ್ಯ ಮಾಹಿ, ಆರ್ಯಭಟ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಶೋಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.