ADVERTISEMENT

ಇಂಡಿ ಕ್ಷೇತ್ರದಲ್ಲಿ ಎಂ.ಬಿ.ಪಾಟೀಲ ಹಸ್ತಕ್ಷೇಪ: ಯಶವಂತರಾಯಗೌಡ ಪಾಟೀಲ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 13:26 IST
Last Updated 10 ಜುಲೈ 2021, 13:26 IST
ಯಶವಂತರಾಯಗೌಡ ಪಾಟೀಲ
ಯಶವಂತರಾಯಗೌಡ ಪಾಟೀಲ   

ವಿಜಯಪುರ:ಇಂಡಿ ಭಾಗದ 16 ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಮುಖ್ಯಮಂತ್ರಿಗಳು ಅನುಮೋದನೆ, ಅನುದಾನ ನೀಡಿರುವುದು ತಮ್ಮಿಂದಲೇ ಎಂಬಂತೆ ಬಿಂಬಿಸಿಕೊಂಡಿರುವ ಶಾಸಕ ಎಂ.ಬಿ.ಪಾಟೀಲ ವಿರುದ್ಧ ಶಾಸಕ ಯಶವಂತರಾಯಗೌಡ ಹರಿಹಾಯ್ದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಇಂಡಿ ಕ್ಷೇತ್ರದ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಹಳ ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡ ಹೇರುತ್ತಾ ಬಂದಿದ್ದೇನೆ. ಪರಿಣಾಮವಾಗಿ ಇದೀಗ ಸರ್ಕಾರ ಯೋಜನೆಗೆ ಅನುಮೋದನೆ ನೀಡಿದೆ ಎಂದು ಹೇಳಿದರು.

ಹಾಗಂತ, ನನ್ನ ಒತ್ತಾಯದಿಂದಲೇ ಕೆರೆ ತುಂಬುವ ಯೋಜನೆಗೆ ಅನುಮೋದನೆ ಸಿಕ್ಕಿದೆ ಎಂದಲ್ಲ. ಈ ಭಾಗದವೇ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೇರಿದಂತೆ ಬಿಜೆಪಿ ಸಚಿವರು, ಶಾಸಕರು ಅಥವಾ ರೈತ ಸಂಘಟನೆಗಳ ಒತ್ತಡದಿಂದ ಅನುಮೋದನೆ ನೀಡಿರಬಹುದು. ಒಟ್ಟಾರೆ ಕ್ಷೇತ್ರದ ಜನತೆಗೆ ಅನುಕೂಲವಾಗಿದೆ. ಇದರ ಲಾಭ ಪಡೆಯಲು ಹವಣಿಸುವುದು ಸರಿಯಲ್ಲ ಎಂದರು.

ADVERTISEMENT

ಈ ಯೋಜನೆಗೆ ಸರ್ಕಾರ ಶುಕ್ರವಾರ ಅನುಮೋದನೆ ನೀಡಿರುವುದನ್ನು ಇಲಾಖೆ ಮೂಲಗಳಿಂದ ಮೊದಲೇ ತಿಳಿದುಕೊಂಡು, ಯೋಜನೆ ನನ್ನಿಂದಲೇ ಅನುಷ್ಠಾನವಾಗುತ್ತಿದೆ ಎಂದು ಬಿಂಬಿಸಿಕೊಳ್ಳಲು ಎಂ.ಬಿ.ಪಾಟೀಲರು ಮುಖ್ಯಮಂತ್ರಿ ಭೇಟಿಯನ್ನು ವೇದಿಕೆಯಾಗಿ ಬಳಿಸಿಕೊಳ್ಳುವ ಮೂಲಕ ಸಣ್ಣತನದ ರಾಜಕೀಯ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಮೂಲಕ ಕ್ಷೇತ್ರದ ಜನತೆಗೆ ತಪ್ಪು ಸಂದೇಶ ರವಾನಿಸಲು ಯತ್ನಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ತಮಗೆ ಸಂಬಂಧಪಡದ ಕ್ಷೇತ್ರದಲ್ಲಿ ಮಧ್ಯಪ್ರವೇಶ ಮಾಡಿರುವುದು ಸರಿಯಲ್ಲ. 30 ವರ್ಷಗಳಿಂದ ಜಿಲ್ಲೆಯಲ್ಲಿ ರಾಜಕಾರಣ ಮಾಡುತ್ತಿದ್ದೇನೆ. ಇನ್ನೊಬ್ಬರ ಕ್ಷೇತ್ರದಲ್ಲಿ ಎಂದಿಗೂ ತಲೆತೂರಿಸಿಲ್ಲ. ನನ್ನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೇರೆಯವರೂ ತಲೆ ತೂರಿಸುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಆರಂಭವಾದಲ್ಲಿಂದ ಇಲ್ಲಿಯ ವರೆಗೆ ಬಹಳಷ್ಟು ಜನಪ್ರತಿನಿಧಿಗಳು, ಅಧಿಕಾರಿಗಳು ಅವರವರ ಕಾಲದಲ್ಲಿ ಶ್ರಮಿಸಿದ್ದಾರೆ ಎಂಬುದನ್ನು ಯಾರೂ ಮರೆಯಬಾರದು ಎಂದರು.

ನಾನು ಮತ್ತು ನೀವು ಸದ್ಯ ವಿರೋಧ ಪಕ್ಷದಲ್ಲಿ ಇದ್ದೇವೆ. ಆಡಳಿತ ನಡೆಸುತ್ತಿರುವ ಸರ್ಕಾರದ ಪ್ರತಿನಿಧಿಗಳಲ್ಲ. ನೀವು ಸರ್ಕಾರದ ವಕ್ತಾರರೂ ಅಲ್ಲ. ಹೀಗಿರುವಾಗ ಸರ್ಕಾರ ಇಂಡಿ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ ನೀಡಿರುವುದು ನನ್ನಿಂದಲೇ ಎಂದು ಬಿಂಬಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದರು.

ನಿಮ್ಮ ಮನವಿ ಮೇರೆಗೆ ಮುಖ್ಯಮಂತ್ರಿ ಅವರು ಯೋಜನೆಗೆ ಅನುಮೋದನೆ ನೀಡಿರುವುದೇ ನಿಜವಾದರೆ, ಮುಖ್ಯಮಂತ್ರಿ ಅವರು ನಿಮ್ಮ ಮಾತನ್ನು ಅಷ್ಟೊಂದು ಕೇಳುತ್ತಾರೆ ಎಂದಾದರೆ ರೇವಣಸಿದ್ಧೇಶ್ವರ ಏತನೀರಾವರಿ ಯೋಜನೆಗೂ ಅನುಮೋದನೆ ಕೊಡಿಸಿಕೊಂಡು ಬನ್ನಿ. ಆಗ ನೀವು ಹೇಳಿದಂತೆ ಕೇಳುತ್ತೇನೆ ಎಂದು ಸವಾಲು ಹಾಕಿದರು.

ಎಂ.ಬಿ.ಪಾಟೀಲರು ನೀರಾವರಿ ಮಂತ್ರಿಗಿರಿ ಗುಂಗಿನಿಂದ ಇನ್ನೂ ಹೊರಬಂದಂತಿಲ್ಲ. ನಿಮ್ಮ ಸ್ಥಾನದ ಪರಿಮಿತಿಯಲ್ಲಿ ವ್ಯವದಾನದಿಂದ ವ್ಯವಹರಿಸಿ, ಸದ್ಯ ನಾನು, ನೀವು ಯಾವುದೇ ಯೋಜನೆ ಅನುಷ್ಠಾನ ಮಾಡುವ ಹಂತದಲ್ಲಿಲ್ಲ. ವಿರೋಧ ಪಕ್ಷದಲ್ಲಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು. ತಮ್ಮ ರಾಜಕೀಯ ನಡೆಯನ್ನು ಬದಲಿಸಿಕೊಳ್ಳಬೇಕು ಎಂದು ತಿಳಿ ಹೇಳಿದರು.

ಇಂಡಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಶಾಸಕ ಎಂ.ಬಿ.ಪಾಟೀಲ ವಿರುದ್ಧ ಪಕ್ಷದ ನಾಯಕರಿಗೆ ದೂರು ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯ ಜನ ಬಹಳ ಮುಗ್ದರೇ ಹೊರತು ಮೂರ್ಖರಲ್ಲ.ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದನ್ನು ಅರಿತುಕೊಂಡು ರಾಜಕಾರಣ ಮಾಡಬೇಕು.ವರ್ಷಗಳು ಕಳೆದಂತೆ ಮಾಗಿದ ರಾಜಕಾರಣ ಮಾಡಬೇಕೇ ಹೊರತು ಪ್ರಚಾರ ಗಿಟ್ಟಿಸಲು ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ಇಂಡಿ ಮತ್ತು ಚಡಚಣ ತಾಲ್ಲೂಕಿನ ಸಾವಿರಾರು ಎಕರೆಗೆ ನೀರಾವರಿ ಸೌಲಭ್ಯ ಒದಗಿಸಲಿರುವ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕು. ಯೋಜನೆ ಅನುಷ್ಠಾನ ವಿಳಂಬವಾದಷ್ಟು ಯೋಜನಾ ವೆಚ್ಚ ಹೆಚ್ಚಳವಾಗುತ್ತದೆ ಎಂದು ಹೇಳಿದರು.

***

ಇಂಡಿ ಭಾಗದ 16 ಕೆರೆಗಳಿಗೆ ನೀರು ತುಂಬುವ ₹140 ಕೋಟಿ ಮೊತ್ತದ ಯೋಜನೆಗೆ ಮುಖ್ಯಮಂತ್ರಿ ಅವರು ಅನುಮೋದನೆ ನೀಡಿರುವುದಕ್ಕೆ ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ

–ಯಶವಂತರಾಯಗೌಡ ಪಾಟೀಲ

ಶಾಸಕ, ಇಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.