ವಿಜಯಪುರ: ಉತ್ತರ ಕರ್ನಾಟಕ ಭಾಗದಲ್ಲಿ ದಿನದಿಂದ ದಿನಕ್ಕೆ ಬಿರು ಬಿಸಿಲು ಏರುತ್ತಿದೆ. ನದಿ, ಕೆರೆ ಒಡಲು ಒಣಗುತ್ತಿವೆ. ಬೇಸಿಗೆ ಇನ್ನೂ ಎರಡೂವರೆ ತಿಂಗಳು ಬಾಕಿ ಇದೆ. ಈ ಭಾಗಕ್ಕೆ ಕುಡಿಯಲು ಮತ್ತು ಕೃಷಿಗೆ ಆಸರೆಯಾಗಿರುವ ಕೃಷ್ಣೆಯಲ್ಲಿ ಸದ್ಯ ಇರುವ ನೀರು ಸಾಕಾಗುವುದೇ ಎಂಬ ಪ್ರಶ್ನೆ ಕಾಡತೊಡಗಿದೆ.
ಆಲಮಟ್ಟಿ ಜಲಾಶಯದ ವಾಸ್ತವ ಅಂಕಿ ಅಂಶ ಗಮನಿಸಿದಾಗ ತೆಲಂಗಾಣಕ್ಕೆ ಒಂದು ವಾರದಲ್ಲಿ ಸುಮಾರು 7 ಟಿಎಂಸಿ ಅಡಿ ನೀರು ಹರಿದು ಹೋಗಿದೆ ಎಂದು ಕೃಷ್ಣಾ ತೀರದ ರೈತರ ಗಂಭೀರ ಆರೋಪವಾಗಿದೆ. ಆದರೆ, ಸರ್ಕಾರ ಕೇವಲ 1.27 ಟಿಎಂಸಿ ಅಡಿ ನೀರು ಹರಿಸಲಾಗುತ್ತದೆ ಎಂದು ಹೇಳುತ್ತಿದೆ.
ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ತೆಲಂಗಾಣಕ್ಕೆ ಸಾಕಷ್ಟು ನೀರು ಹರಿಸಲಾಗಿದೆ. ಜತೆಗೆ ನಾರಾಯಣಪುರ ಜಲಾಶಯದ ಗೇಟ್ ತೆರೆದೂ ನದಿ ಮೂಲಕವೂ ನೀರು ಹರಿಸಲಾಗಿದೆ. ಹೀಗಾಗಿ ತೆಲಂಗಾಣ ರಾಜ್ಯ ಬೇಡಿಕೆ ಇಟ್ಟಿದ್ದ 5 ಟಿಎಂಸಿ ಅಡಿಗೂ ಹೆಚ್ಚಿನ ನೀರನ್ನು ಹರಿಸಲಾಗಿದೆ ಎಂಬುದು ರೈತರ ವಾದವಾಗಿದೆ.
ನೀರಿನ ಸಂಗ್ರಹ: ಸದ್ಯ ಆಲಮಟ್ಟಿ ಜಲಾಶಯದಲ್ಲಿ 35.56 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಅದರಲ್ಲಿ ಬಳಕೆಯೋಗ್ಯ 17.943 ಟಿಎಂಸಿ ಅಡಿ ನೀರು ಮಾತ್ರ ಇದೆ. ಇದೇ ನೀರಲ್ಲಿ ಇನ್ನೂ 7 ದಿನಗಳ ಕಾಲ ನೀರಾವರಿಗೆ ಕಾಲುವೆಗೆ ನೀರು ಹರಿಸಬೇಕಿದೆ. ಇನ್ನುಳಿಯುವ ನೀರಲ್ಲಿ ಉತ್ತರ ಕರ್ನಾಟಕದ ಐದು ಜಿಲ್ಲೆಗಳ ಬೇಸಿಗೆಯ ಅಗತ್ಯವನ್ನು ನಿಭಾಯಿಸಬೇಕಿದೆ. ಜತೆಗೆ ಕೈಗಾರಿಕೆ, ಭಾಷ್ಪಿಭವನ, ಉಷ್ಣ ವಿದ್ಯುತ್ ಸ್ಥಾವರ ಮೊದಲಾದವುಗಳಿಗೆ ನೀರು ಹರಿಸಬೇಕಿದೆ.
ಸದ್ಯದ ಸ್ಥಿತಿ ಗಮನಿಸಿದರೆ ಆಲಮಟ್ಟಿ ಹಾಗೂ ನಾರಾಯಣಪುರದ ಡೆಡ್ ಸ್ಟೋರೇಜ್ ನೀರನ್ನು ಬಳಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಹೀಗಾಗಿ ಸದ್ಯಕ್ಕೆ ನೀರಾವರಿಗೆ ಹೆಚ್ಚಿನ ಅವಧಿಗೆ ನೀರು ಹರಿಸುವುದು ಕನಸಿನ ಮಾತು.
ಒಂದು ವೇಳೆ ತೆಲಂಗಾಣಕ್ಕೆ ನೀರು ಬಿಡದಿದ್ದರೆ ಸುಮಾರು 7 ಟಿಎಂಸಿ ಅಡಿ ನೀರು ಉಳಿಯುತ್ತಿತ್ತು. ಇದರಿಂದ ನೀರಾವರಿಗೂ ನೀರು ಹರಿಸಿ, ಕೆರೆ ಭರ್ತಿ ಮಾಡಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ತಡೆಗಟ್ಟಬಹುದಿತ್ತು ಎಂಬುದು ರೈತರ ಅಭಿಪ್ರಾಯವಾಗಿದೆ.
ಜನಪ್ರತಿನಿಧಿಗಳ ಅಸಮಾದಾನ:
ಅವಳಿ ಜಿಲ್ಲೆಯ ಜನಪ್ರತಿನಿಧಿಗಳ ಅಭಿಪ್ರಾಯ ಕೇಳದೇ ತೆಲಂಗಾಣಕ್ಕೆ ನೀರು ಹರಿಸಲಾಗಿರುವುದು ಸರ್ಕಾರದ ಮಟ್ಟದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ತೆಲಂಗಾಣಕ್ಕೆ ನೀರು ಹರಿಸುವ ಮುನ್ನ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದ ಅಧಿಕಾರಿಗಳಿಗೆ ನೀರು ಹರಿಸುವ ಕುರಿತು ಸರ್ಕಾರ ಸ್ಪಷ್ಟ ಅಭಿಪ್ರಾಯ ಕೇಳಿತ್ತು. ಆಗ ಎರಡೂ ಜಲಾಶಯದ ಅಧಿಕಾರಿಗಳು ಕಡಿಮೆಯಿರುವ ನೀರಿನ ಪರಿಸ್ಥಿತಿ, ಬೇಸಿಗೆಯಲ್ಲಿ ಅಗತ್ಯವಿರುವ ನೀರಿನ ಮಾಹಿತಿ ಸೇರಿ ತೆಲಂಗಾಣಕ್ಕೆ ಸದ್ಯದ ಸ್ಥಿತಿಯಲ್ಲಿ ನೀರು ಹರಿಸುವುದು ಅಗತ್ಯವಿಲ್ಲ ಎಂದೇ ಪತ್ರ ಬರೆದಿದ್ದರು. ಇಷ್ಟಾದರೂ ಅಧಿಕಾರಿಗಳ ಅಭಿಪ್ರಾಯ ತಿರಸ್ಕರಿಸಿ ತೆಲಂಗಾಣಕ್ಕೆ ನೀರು ಹರಿಸಿ ರಾಜ್ಯದ ರೈತರ ಹಾಗೂ ಜನರ ಹಿತಾಸಕ್ತಿ ಕಡೆಗಣಿಸಲಾಗಿದೆ ಎಂಬುದು ರೈತರ ಅರೋಪವಾಗಿದೆ.
ನೀರಿನ ಕೊರತೆಯ ಕಾರಣ ತುರ್ತಾಗಿ ಭರ್ತಿ ಮಾಡಬೇಕಿದ್ದ ಜಿಲ್ಲೆಯ ಸುಮಾರು 108 ಕೆರೆಗಳ ಭರ್ತಿ ಮತ್ತಷ್ಟು ತಡವಾಗಿದೆ. ಕೆರೆ ಭರ್ತಿಯಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತಿತ್ತು.
ಮಳೆಗಾಲದಲ್ಲಿ ಸಾಗರೋಪಾದಿಯಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ಸದ್ಯ ರಾಜ್ಯ ಸರ್ಕಾರ ಮತ್ತು ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಒಂದೊಂದು ಹನಿಗೂ ಲೆಕ್ಕ ಇಡಬೇಕಾದ ಸ್ಥಿತಿ ಬಂದೊದಗಿದೆ.
Quote - ತೆಲಂಗಾಣಕ್ಕೆ ನೀರು ನೀಡಿದ ರಾಜ್ಯ ಸರ್ಕಾರದ ಎಡವಿಟ್ಟಿನಿಂದ ಕೃಷ್ಣಾ ತೀರದಲ್ಲಿ ಮುಂದಿನ ಎರಡೂವರೆ ತಿಂಗಳು ಬೇಸಿಗೆ ಸರಿದೂಗಿಸುವುದು ಕಷ್ಟವಾಗಿದೆ ಅರವಿಂದ ಕುಲಕರ್ಣಿ ರಾಜ್ಯ ಕಾರ್ಯದರ್ಶಿ ಅಖಂಡ ಕರ್ನಾಟಕ ರೈತ ಸಂಘ
Quote - ವಿಜಯಪುರ ಬಾಗಲಕೋಟೆ ಜಿಲ್ಲೆಗಳಲ್ಲಿರುವ ಕೆರೆ ಕಟ್ಟೆಗಳಿಗೆ ಆಲಮಟ್ಟಿ ಜಲಾಶಯದಿಂದ ಭರ್ತಿ ಮಾಡಬೇಕು. ಬೇಸಿಗೆಯಲ್ಲಿ ಕುಡಿಯುವ ನೀರು ಬೆಳೆಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು ಸಂಗಮೇಶ ಸಗರ ಜಿಲ್ಲಾ ಘಟಕದ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.