ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲಾ ಕಾಲುವೆಗಳಿಗೆ ಕೃಷಿ ಚಟುವಟಿಕೆಗಾಗಿ ಜುಲೈ 8 ರಿಂದ 120 ದಿನಗಳ ಕಾಲ ಮುಂಗಾರು ಹಂಗಾಮಿಗೆ ನೀರು ಹರಿಸಲು ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ)ಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ (ಐಸಿಸಿ) ನಿರ್ಣಯಿಸಲಾಗಿದೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಮಂಗಳವಾರ ಅಬಕಾರಿ ಸಚಿವರೂ ಆದ ಐಸಿಸಿ ಅಧ್ಯಕ್ಷ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಜುಲೈನಲ್ಲೇ ಕಾಲುವೆಗೆ ನೀರು ಬಿಡಲಾಗುತ್ತಿದೆ.
ಒಳಹರಿವು ಇರುವವರೆಗೆ ನೀರು:
ಎರಡು ಜಲಾಶಯಗಳ ಒಳಹರಿವು ಕಡಿಮೆಯಾದ ನಂತರ ಕಾಲುವೆಗೆ 14 ದಿನ ಚಾಲು, 10 ದಿನ ಬಂದ್ ಅವಧಿಯ ವಾರಾಬಂಧಿ ಅಳವಡಿಸಲು ಸಭೆ ತೀರ್ಮಾನಿಸಿದೆ. ಹೀಗಾಗಿ ಎಲ್ಲಿಯವರೆಗೆ ಮುಂಗಾರು ಹಂಗಾಮಿಗೆ ನೀರು ಹರಿಸಲಾಗುವುದು ಎಂದು ಸದ್ಯಕ್ಕೆ ಹೇಳಲು ಬರುವುದಿಲ್ಲ, ಒಟ್ಟಾರೇ 120 ದಿನಗಳ ಕಾಲ ನೀರು ಹರಿಸಲಾಗುತ್ತದೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಮುಂದಿನ ಒಂದು ವಾರಗಳ ಕಾಲ ಕಾಲುವೆಗಳ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು, ಏತ ನೀರಾವರಿ ಯೋಜನೆಗಳಿದ್ದರೆ, ಅವುಗಳ ಪಂಪ್ ಸೆಟ್ ದುರಸ್ತಿ ಮತ್ತಿತರ ನಿರ್ವಹಣೆಯ ಕಾರ್ಯ ಕೈಗೊಳ್ಳಬೇಕು, ಜುಲೈ 8 ರೊಳಗೆ ಕಾಲುವೆಗೆ ನೀರು ಹರಿಸಲು ಕಾಲುವೆಗಳನ್ನು ಸಿದ್ಧಗೊಳಿಸಿಕೊಳ್ಳಬೇಕು, ರೈತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಸೂಚಿಸಿದರು.
ಸದ್ಯ ಆಲಮಟ್ಟಿ ಜಲಾಶಯದಲ್ಲಿ 87 ಟಿಎಂಸಿ ಅಡಿ ಹಾಗೂ ನಾರಾಯಣಪುರ ಜಲಾಶಯ 26 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಎರಡು ಜಲಾಶಯಗಳಲ್ಲಿ ಬಳಕೆ ಯೋಗ್ಯ 91 ಟಿಎಂಸಿ ಅಡಿ ನೀರಿದೆ. ಸದ್ಯಕ್ಕೆ ಮುಂಗಾರು ಹಂಗಾಮಿಗೆ ನೀರು ಹರಿಸಲು ಯಾವುದೇ ತೊಂದರೆಯಿಲ್ಲ ಎಂದು ಸಭೆಗೆ ಅಧಿಕಾರಿಗಳು ತಿಳಿಸಿದರು.
ಮುಂಗಾರು ಮಳೆಯ ಅಬ್ಬರ ಹೆಚ್ಚಾಗಿದ್ದು, ಜಲಾಶಯಕ್ಕೆ ಒಳಹರಿವು ನಿತ್ಯವೂ ಇದೆ. ಹೀಗಾಗಿ ಕಾಲುವೆಗೆ ಸದ್ಯಕ್ಕೆ ಯಾವುದೇ ವಾರಾಬಂಧಿ ಇಲ್ಲದೇ ನಿರಂತರ ನೀರು ಹರಿಸಲು ನಿರ್ಧರಿಸಲಾಗಿದೆ. ನೀರಿನ ಮಿತವ್ಯಯ ಬಳಕೆಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಚಿವ ಶರಣಬಸಪ್ಪ ದರ್ಶನಾಪುರ, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ ಧರ್ಮಸಿಂಗ್, ಶಾಸಕರಾದ ಜೆ.ಟಿ.ಪಾಟೀಲ, ಚೆನ್ನಾರೆಡ್ಡಿ ತುನ್ನೂರ, ರಾಜಾವೇಣುಗೋಪಾಲ ನಾಯಕ, ಮಾನಪ್ಪ ವಜ್ಜಲ, ವಿಠ್ಠಲ ಕಟಕದೋಂಡ, ಕರಿಯಮ್ಮ ನಾಯಕ, ಅಶೋಕ ಮನಗೂಳಿ, ರಾಜುಗೌಡ ಪಾಟೀಲ, ಕೆಬಿಜೆಎನ್ ಎಲ್ ಎಂಡಿ ಕೆ.ಪಿ.ಮೋಹನರಾಜ್, ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ, ಐಸಿಸಿ ಸದಸ್ಯ ಕಾರ್ಯದರ್ಶಿ ಪ್ರೇಮಸಿಂಗ್, ಡಿ.ಬಸವರಾಜ, ಆರ್. ಮಂಜುನಾಥ, ರವಿಶಂಕರ, ವಿ.ಆರ್. ಹಿರೇಗೌಡರ, ಬಿ.ಎಸ್. ಪಾಟೀಲ, ಐಸಿಸಿ ಸದಸ್ಯ ರೈತ ಎಂ.ಆರ್. ಖಾಜಿ ಸಭೆಯಲ್ಲಿ ಇದ್ದರು.
ಒಳಹರಿವು ಇರುವವರೆಗೆ ಕಾಲುವೆಗಳಿಗೆ ನೀರು ಜುಲೈ 8 ರೊಳಗೆ ಕಾಲುವೆ ಸಿದ್ಧಗೊಳಿಸಲು ಸೂಚನೆ ರೈತರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ
ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲಾ ಕಾಲುವೆಗಳ ಕೊನೆಯ ಭಾಗಕ್ಕೆ ನೀರು ಹರಿಸಲು ಆದ್ಯತೆ ನೀಡಬೇಕುಆರ್.ಬಿ. ತಿಮ್ಮಾಪುರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.