ADVERTISEMENT

ವಾರಾಂತ್ಯ ಕರ್ಫ್ಯೂ; ಜನ ಸ್ಪಂದನೆ

ಗಡಿ ಜಿಲ್ಲೆಯಲ್ಲಿ ಕೋವಿಡ್‌ ತಡೆಗೆ ಮುನ್ನೆಚ್ಚರಿಕೆ; ಮಧ್ಯಾಹ್ನದ ಬಳಿಕ ವ್ಯಾಪಾರ, ವಹಿವಾಟು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 14:00 IST
Last Updated 7 ಆಗಸ್ಟ್ 2021, 14:00 IST
ವಿಜಯಪುರ ನಗರದಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಾದ ಪರಿಣಾಮ   ಜನ, ವಾಹನ ಸಂಚಾರವಿಲ್ಲದೇ ಎಂ.ಜಿ.ರಸ್ತೆಯಲ್ಲಿ ಬಿಕೋ ಎನ್ನುತ್ತಿತ್ತು–ಪ್ರಜಾವಾಣಿ ಚಿತ್ರ/ಸಂಜೀವ ಅಕ್ಕಿ
ವಿಜಯಪುರ ನಗರದಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಾದ ಪರಿಣಾಮ   ಜನ, ವಾಹನ ಸಂಚಾರವಿಲ್ಲದೇ ಎಂ.ಜಿ.ರಸ್ತೆಯಲ್ಲಿ ಬಿಕೋ ಎನ್ನುತ್ತಿತ್ತು–ಪ್ರಜಾವಾಣಿ ಚಿತ್ರ/ಸಂಜೀವ ಅಕ್ಕಿ   

ವಿಜಯಪುರ: ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಮತ್ತು ಭಾನುವಾರ ವಾರಾಂತ್ಯ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ.

ಶುಕ್ರವಾರ ರಾತ್ರಿ 9ರಿಂದಲೇ ಜಾರಿಯಾದವಾರಂತ್ಯ ಕರ್ಫ್ಯೂ ಸೋಮವಾರ ಬೆಳಿಗ್ಗೆ 5ರ ವರೆಗೆ ಜಾರಿಯಲ್ಲಿರಲಿದ್ದು, ಜಿಲ್ಲೆಯ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ವಿಜಯಪುರ ನಗರದ ಪ್ರಮುಖ ಮಾರ್ಗ ಹಾಗೂ ವೃತ್ತಗಳಲ್ಲಿ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿ ವಾಹನಗಳ ತಪಾಸಣೆ ಮಾಡಿದರು. ಅನಗತ್ಯವಾಗಿ ಸಂಚರಿಸುವವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.

ADVERTISEMENT

ಅಗತ್ಯ ವಸ್ತುಗಳಾದ ಆಹಾರ, ದಿನಸಿ, ಹಾಲು, ಹಣ್ಣು, ತರಕಾರಿ, ಮೀನು, ಮಾಂಸದ ಅಂಗಡಿಗಳು, ಬೀದಿ ಬದಿ ವ್ಯಾಪಾರಸ್ಥರಿಗೆ ಬೆಳಿಗ್ಗೆ 5ರಿಂದ ಮಧ್ಯಾಹ್ನ 2ರ ವರೆಗೆ ವ್ಯಾಪಾರ, ವಹಿವಾಟಿಗೆ ಅವಕಾಶ ಕಲ್ಪಿಸಲಾಗಿತ್ತು. ಮದ್ಯದ ಅಂಗಡಿಗಳಿಗೂ ಮಧ್ಯಾಹ್ನ 2ರ ವರೆಗೆ ಅವಕಾಶ ಕಲ್ಪಿಸಲಾಗಿತ್ತು. 2ರ ಬಳಿಕವೂ ಬೀದಿ ಬದಿ ವ್ಯಾಪಾರ ವಹಿವಾಟು ನಡೆಸುತ್ತಿದ್ದವರನ್ನು ಪೊಲೀಸರು ತೆರವುಗೊಳಿಸಿದರು.

ನಗರದ ಬಡಾವಣೆಗಳ ಒಳಗೆ ಕೆಲವು ಅಂಗಡಿಗಳು ಎಂದಿನಂತೆ ಬಾಗಿಲು ತೆರೆದು ವ್ಯಾಪಾರದಲ್ಲಿ ತೊಡಗಿದ್ದರು. ಮೊದಲ ದಿನವಾದ ಕಾರಣ ಪೊಲೀಸರು ಕಠಿಣ ಕ್ರಮಕೈಗೊಂಡಿಲ್ಲದಿರುವುದು ಕಂಡುಬಂದಿತು.

ಬಸ್‌, ಆಟೋ, ಟಂಟಂ ಸೇರಿದಂತೆ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅವಕಾಶವಿತ್ತು. ಮಧ್ಯಾಹ್ನದ ಬಳಿಕ ಜನ ಸಂಚಾರ ವಿರಳವಾಗಿತ್ತು. ಅನಗತ್ಯ ವಾಹನಗಳ ಸಂಚಾರಕ್ಕೆ ಪೊಲೀಸರು ನಿರ್ಬಂಧ ವಿಧಿಸಿದ್ದರು.

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಪಾರ್ಸೆಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಹಾಗೂ ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ರಾಜ್ಯದ ಗಡಿ ಭಾಗದ ಧೂಳಖೇಡ, ಕನಕನಾಳ, ಉಮರಜ, ಉಮರಾಣಿ, ಉಮದಿ ಕ್ರಾಸ್‌, ಶಿರಡೋಣ, ಕನಮಡಿ, ಸಿದ್ಧಾಪುರ, ಯತ್ನಾಳ, ಅಳಗಿನಾಳ, ಹಿಂಗಣಿ ಚೆಕ್‌ ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ.

ರೈಲು, ಬಸ್‌ ಹಾಗೂ ಖಾಸಗಿ ವಾಹನಗಳಲ್ಲಿ ಜಿಲ್ಲೆಗೆ ಬರುವವರ ಮೇಲೆ ಕಣ್ಗಾವಲು ವಹಿಸಲಾಗಿದೆ.72 ಗಂಟೆಗಳ ಒಳಗೆ ಮಾಡಿಸಿರುವ ಆರ್‌ಟಿಪಿಸಿಆರ್‌ ನೆಗೆಟಿವ್‌ ಪರೀಕ್ಷೆಯ ವರದಿ ಅಥವಾ ಕನಿಷ್ಠ ಒಂದು ಡೋಸ್‌ ಕೋವಿಡ್‌ ಲಸಿಕೆ ಪಡೆದಿರುವ ಕುರಿತು ಪ್ರಮಾಣಪತ್ರವನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.