
ಇಂಡಿ: ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಸಬಲೀಕರಣಕ್ಕೆ ಜ್ಞಾನ ವಿಕಾಸ ಯೋಜನೆ ಜಾರಿಗೆ ತಂದಿದ್ದು, ಇದರಿಂದ ಲಕ್ಷಾಂತರ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ’ ಎಂದು ಹಿರಿಯ ಶ್ರೇಣಿ ದಿವಾನಿ ನ್ಯಾಯಾಧೀಶ ಕೋಟೆಪ್ಪ ಕಾಂಬಳೆ ಹೇಳಿದರು.
ತಾಲ್ಲೂಕಿನ ಹಿರೇರೂಗಿ ಗ್ರಾಮದ ಶ್ರೀ ಜಟ್ಟಿಂಗೇಶ್ವರ ದೇವಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಮಹಿಳೆಯರು ಶಿಕ್ಷಣದಿಂದ ವಂಚಿತರಾಗಬಾರದು. ಮಹಿಳೆಯರು ಶಿಕ್ಷಣವಂತರಾದರೆ ಮಾತ್ರ ಸಮಾಜದಲ್ಲಿ ಇರುವ ಅಂಕುಡೊಂಕು ತಿದ್ದಲು ಸಾಧ್ಯ. ಲಿಂಗ ಪತ್ತೆ, ಬಾಲ್ಯವಿವಾಹ ಮಾಡುವುದು ಅಪರಾಧ’ ಎಂದರು.
ಧರ್ಮಸ್ಥಳದ ಯೋಜನಾಧಿಕಾರಿ ನಟರಾಜ ಎಲ್. ಎಂ. ಮಾತನಾಡಿ, ‘ಗ್ರಾಮೀಣ ಭಾಗದ ಮಹಿಳೆಯರಿಗೆ ಶಿಕ್ಷಣ, ಆರೋಗ್ಯ, ಪೌಷ್ಠಿಕ ಅಹಾರ, ಕಾನೂನು ಅರಿವು, ಕೌಟುಂಬಿಕ ಸಾಮರಸ್ಯ ಅರಿವು ಮೂಡಿಸುವ ಜತೆಗೆ ಅಧ್ಯಯನ ಪ್ರವಾಸದ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.
ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಭಾಗ್ಯಜ್ಯೋತಿ ಭಗವಂತಗೌಡರ ಮಾತನಾಡಿದರು.
ವಿವಿಧ ಯೋಜನೆಯ ಫಲಾನುಭವಿಗಳಿಗೆ ಸಹಾಯಧನ ನೀಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋಮವ್ವ ಹೊಸಮನಿ, ವಕೀಲ ಜೆ.ಬಿ.ಬೇವನೂರ, ಜಯಶ್ರೀ ಎಸ್.ಎಂ, ಮೇಲ್ವಿಚಾರಕಿಯರಾದ ಅಶ್ವಿನಿ ಹಾಗೂ ಚನ್ನವೀರ ಮತ್ತು ಸೇವಾ ಪ್ರತಿನಿಧಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.