ADVERTISEMENT

ಮಹಿಳಾ ವಿ.ವಿ; ಶಿಬಿರ 26ರಿಂದ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 20:28 IST
Last Updated 23 ಜುಲೈ 2019, 20:28 IST

ವಿಜಯಪುರ: ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಜುಲೈ 26ರಿಂದ ಮೂರು ದಿನ ‘ಕನಕದಾಸರನ್ನು ನಾನೇಕೆ ಓದಬೇಕು?’ ವಿಷಯದ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ವಿಶ್ವವಿದ್ಯಾಲಯದ ಜ್ಞಾನಶಕ್ತಿ ಆವರಣದ ಕನ್ನಡ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಶಿಬಿರ ಜರುಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಉದ್ಘಾಟಿಸುವರು. ಕುಲಪತಿ ಪ್ರೊ.ಸಬಿಹಾ ಅಧ್ಯಕ್ಷತೆ ವಹಿಸುವರು. ಶಿಬಿರದ ನಿರ್ದೇಶಕರಾದ ಪ್ರೊ.ಎ.ಎಂ.ಶಿವಸ್ವಾಮಿ ಮತ್ತು ಡಾ.ಡಿ.ಪುರುಷೋತ್ತಮ ಭಾಗವಹಿಸುವರು.

ಮೊದಲ ಗೋಷ್ಠಿಯಲ್ಲಿ ನಗರದ ಸುಷ್ಮಲತಾ ಅವರು ‘ತಿಮ್ಮಪ್ಪನಿಂದ ಕನಕದಾಸರಾಗುವ ಏರುಘಟ್ಟಗಳ ಪರಿವರ್ತನಾಶೀಲತೆಯ ಪರಿಣಾಮಗಳು’, ಗದಗನ ಶಿಲ್ಪಾ ಮ್ಯಾಗೇರಿ, ‘ಕನಕರ ಸುತ್ತ ಹೆಣೆದುಕೊಂಡ ಕಥೆಗಳ ಸಾಂಸ್ಕೃತಿಕ, ಸಾಂಕೇತಿಕ, ಸಮಾಜಮುಖಿ ವಿಚಾರಗಳು (ಐತಿಹ್ಯಗಳು)’, ಹಾವೇರಿಯ ಮಮತಾ ಇಟಗಿ, ‘ಕನ್ನಡ ಹರಿದಾಸ ಸಾಹಿತ್ಯ ಪರಂಪರೆಯಲ್ಲಿ ಕನಕದಾಸರ ಸ್ಥಾನ: ಕವಿ-ಕೀರ್ತನಕಾರ- ದಾರ್ಶನಿಕ ನೆಲೆಯಲ್ಲ’ ಕುರಿತು ಉಪನ್ಯಾಸ ನೀಡುವರು.

ADVERTISEMENT

ಎರಡನೇ ಗೋಷ್ಠಿಯಲ್ಲಿ ಮೈಸೂರಿನ ರೋಜಾಮಣಿ, ‘ಮೋಹನ ತರಂಗಿಣಿಯ ವಿಶಿಷ್ಟತೆ: ಪುರಾಣ ಮತ್ತು ಸಮಕಾಲೀನ ಸನ್ನಿವೇಶಗಳ ಹಿನ್ನೆಲೆಯಲ್ಲಿ’, ಬೆಳಗಾವಿಯ ಆಶಾ ವಸಂತ ಮದಭಾವಿಕರ್, ‘ನಳಚರಿತೆಯ ದಮಯಂತಿ’, ಹಾಸನದ ಎಂ.ಎಸ್.ಪವಿತ್ರ, ‘ಹರಿಭಕ್ತಿಸಾರದಲ್ಲಿ ಭಕ್ತಿಯ ಸಾಮಾಜಿಕತೆ’, ಕಲಬುರ್ಗಿಯ ನಿರ್ಮಲಾ ಕಿಶನ್, ‘ರಾಮಧ್ಯಾನ ಚರಿತದಲ್ಲಿ ವರ್ತಮಾನದ ಪ್ರಶ್ನೆ; ಉತ್ತರ’, ಮೈಸೂರಿನ ಟಿ.ಎಂ.ಆಶಾ, ‘ಕನಕ ಕೀರ್ತನೆಗಳ ಆಶಯ’ ಕುರಿತು ಮಾತನಾಡುವರು.

ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ ಶಿವಮೊಗ್ಗದ ವಿಸ್ಮಿತ, ‘ಕನಕದಾಸರು ಕಂಡ ಆದಿಕೇಶವ ಯಾರು?’, ಮೈಸೂರಿನ ತನುಜಾ, ‘ಕನಕದಾಸದ ಭಕ್ತಿಯ ಸ್ವರೂಪ ಯಾವುದು?’, ಬೆಂಗಳೂರಿನ ರಮ್ಯ, ‘ಕನಕದಾಸರ ದೃಷ್ಟಿಯಲ್ಲಿ ಧರ್ಮ ಅಂದರೆ ಯಾವುದು? ಅದರ ಪ್ರತಿಪಾದನೆಯ ಸ್ವರೂಪ’, ನಂಜನಗೂಡಿನ ಎಂ.ಮೇಘಶ್ರೀ, ‘ಕನಕದಾಸರು ಪ್ರತಿಪಾದಿಸಿದ ಮೋಕ್ಷ ಯಾವುದು?’ ವಿಷಯಗಳ ಕುರಿತು ಉಪನ್ಯಾಸ ನೀಡುವರು.

ಎರಡನೇ ಗೋಷ್ಠಿಯಲ್ಲಿ ಮೈಸೂರಿನ ವೈ.ಶಾಲಿನಿ, ‘ಆಲಯದೊಳಗೆ ಇರಿಸಿ ಪೂಜಿಸಲ್ಪಟ್ಟ ಹರಿಯ ದರ್ಶನಕ್ಕೆ ಹೋರಾಟ ನಡೆಸಿದ ಕನಕರ ಉದ್ದೇಶ ಏನು?-ಸಾಮಾಜಿಕ, ಧಾರ್ಮಿಕ ಹಿನ್ನೆಲೆಯಲ್ಲಿ ವಿಫಲತೆ- ಸಫಲತೆಗಳು’, ಕೊಪ್ಪಳದ ಶ್ರುತಿ ಕೊಂಡೇನಹಳ್ಳಿ, ‘ಭಾರತೀಯ ಭಕ್ತಿ ಚಳವಳಿಯ ಪುನರುತ್ಥಾನದ ಚರಿತ್ರೆಯಲ್ಲಿ ಕನಕದಾಸರ ನಡೆ’, ಚಿತ್ರದುರ್ಗದ ಚಂದ್ರಪ್ರಭಾ ಅರಸ್, ‘ಕನಕದಾಸರ ಪ್ರಭುತ್ವ ಮತ್ತು ಯುದ್ಧ ವಿರೋಧಿ ನಿಲುವುಗಳು’, ನಗರದ ಸುಜ್ಞಾನಿ ಶಿಂಗೆ, ‘ಕನಕದಾಸರ ವೈಚಾರಿಕ ದೃಷ್ಟಿ-ಧೋರಣೆ’, ದಾವಣಗೆರೆಯ ಶಿಲ್ಪಬಾಯಿ, ‘ವಿಘಟನೆಗೊಳ್ಳುತ್ತಿರುವ ವರ್ತಮಾನದ ಕುಟುಂಬ ಸ್ಥಿತಿಗತಿಗೆ ಕನಕರು ನಿರೂಪಿಸುವ ಕುಟುಂಬ ಸ್ವರೂಪದ ಬಗೆ’ ವಿಷಯಗಳ ಕುರಿತು ಮಾತನಾಡುವರು.

ಮೂರನೇ ದಿನ ಮೊದಲ ಗೋಷ್ಠಿಯಲ್ಲಿ ಮೈಸೂರಿನ ಎಸ್.ಮಮತಾ, ‘ಕನಕದಾಸರ ಸಾಹಿತ್ಯದಲ್ಲಿ ಕಂಡರಿಸಿರುವ ಮಣ್ಣು, ನೆಲ, ಭೂಮಿ ಇತ್ಯಾದಿ’, ಶಿವಮೊಗ್ಗದ ಕೆ.ಎಸ್.ರಂಜಿತಾ, ‘ಕನಕರ ಕಾವ್ಯಗಳಲ್ಲಿ ಮಹಿಳಾ ಜಗತ್ತು’, ಬಳ್ಳಾರಿಯ ಎಸ್.ಪ್ರೇಮಾ, ‘ಕನಕದಾಸರ ಕಾವ್ಯದರ್ಶನದಲ್ಲಿ ವ್ಯಕ್ತಗೊಳ್ಳುವ ನಿಸರ್ಗ ವಿವೇಕ’, ಹಾಸನದ ಡಿ.ಪ್ರಿಯದರ್ಶಿನಿ, ‘ತಳಸಮುದಾಯಗಳ ಸಾಂಸ್ಕೃತಿಕ ಚರಿತ್ರೆಯ ಪುನರುತ್ಥಾನಕ್ಕೆ ಕನಕರ ಮರು ವ್ಯಾಖ್ಯಾನಗಳು’, ಮೈಸೂರಿನ ಆಶಾ, ‘ಕನಕದಾಸರನ್ನು ಯಾಕೆ ಓದಬೇಕು?’ ಎಂಬ ವಿಷಯಗಳ ಕುರಿತು ಉಪನ್ಯಾಸ ನೀಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.