ಸೊಲ್ಲಾಪುರ: ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ಯಾವುದೇ ಮೂಲೆಗೆ ಹೋದರೂ ಸೋಲಾಪುರ ಚಾದರ ಬಳಸುವುದನ್ನು ನೋಡಬಹುದು. ‘ಸೊಲ್ಲಾಪುರದ ಚಾದರದ ಬಗ್ಗೆ ತಿಳಿಯದ ಒಬ್ಬ ವ್ಯಕ್ತಿಯೂ ನಿಮಗೆ ಸಿಗುವುದಿಲ್ಲ’ ಎಂಬ ಮಾತು ಸೊಲ್ಲಾಪುರದಲ್ಲಿ ಜನಜನಿತ.
ಸೊಲ್ಲಾಪುರ ಚಾದರಕ್ಕೆ ಭಾರತ ಮಾತ್ರವಲ್ಲದೆ ರಷ್ಯಾ, ಯುರೋಪ್, ಶ್ರೀಲಂಕಾ, ಗಲ್ಫ್ ರಾಷ್ಟ್ರಗಳಿಂದಲೂ ಬೇಡಿಕೆ ಇದೆ. ಮಹಾರಾಷ್ಟ್ರದಲ್ಲಿ ಭೌಗೋಳಿಕ ಮಾನ್ಯತೆ (ಜಿಐ) ಪಡೆದುಕೊಂಡ ಮೊದಲ ಹಾಗೂ ಏಕೈಕ ಉತ್ಪಾದನಾ ವಸ್ತು ಸೊಲ್ಲಾಪುರ ಚಾದರವಾಗಿದೆ.
‘ಸೊಲ್ಲಾಪುರ ಚಾದರ ಬ್ರ್ಯಾಂಡ್ ವಿಶ್ವ ಪ್ರಸಿದ್ಧವಾಗಿದೆ. ಈ ಚಾದರವನ್ನು ಬ್ರ್ಯಾಂಡ್ ಆಗಿ ರೂಪಿಸುವಲ್ಲಿ ಹಾಗೂ ವಿಶ್ವದಾದ್ಯಂತ ಮನ್ನಣೆ ಗಳಿಸುವಲ್ಲಿ ಪುಲಗಮ್ ಕುಟುಂಬವು ಮಹತ್ವದ ಪಾತ್ರ ವಹಿಸಿದೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು’ ಎಂದು ಅನಿಲ ಚವ್ಹಾಣ ಹಾಗೂ ರಾಮಯ್ಯ ಪುಲಗಮ್ ಹೇಳುತ್ತಾರೆ.
ಸೊಲ್ಲಾಪುರ ಚಾದರದ ಇತಿಹಾಸ: ಮೊಘಲರ ಆಡಳಿತದ ಸಮಯದಲ್ಲಿ ಮೋಮಿನ್ ಎಂಬ ಮುಸ್ಲಿಂ ನೇಕಾರ ಸೊಲ್ಲಾಪುರಕ್ಕೆ ಬಂದು ವಾಸಿಸಿದ್ದ. ನಂತರ ಪೇಶ್ವೆಗಳ ಕಾಲದಲ್ಲಿ ಮಾಧವರಾವ್ ಪೇಶ್ವೆಯು ಸೊಲ್ಲಾಪುರದ ಮಾಧವ ಪೇಠ ಎಂಬ ಮಾರುಕಟ್ಟೆ ಸ್ಥಾಪಿಸಿದರು. ಮಾರುಕಟ್ಟೆ ನಿರ್ವಹಿಸುವ ಜವಾಬ್ದಾರಿಯನ್ನು ಕರ್ನಾಟಕದಿಂದ ಬಂದಿದ್ದ ಜೋಶಿ ಕುಟುಂಬಕ್ಕೆ ವಹಿಸಿದ್ದರು. 1758ರಲ್ಲಿ ಪೇಶ್ವೆಗಳ ಕಾಲದಲ್ಲಿ ಸೊಲ್ಲಾಪುರದಲ್ಲಿ ಕೈಮಗ್ಗ ಕೆಲಸ ವಿಸ್ತಾರಗೊಂಡಿತು.
ಅದೇ ಸಮಯದಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಬಂದ ಪದ್ಮಶಾಲಿ ಸಮುದಾಯದ ನೇಕಾರರು ಕೈ ಮಗ್ಗದಲ್ಲಿ ಸೀರೆ ಹಾಗೂ ಧೋತರಗಳನ್ನು ನೇಯಲು ಪ್ರಾರಂಭಿಸಿದರು. ಇಲ್ಲಿನ ನೇಕಾರರು ತಯಾರಿಸಿದ ಬಟ್ಟೆಗಳು ದೇಶದಲ್ಲೆಡೆ ಮಾರಾಟವಾದವು.
ಆ ನಂತರ ಬ್ರಿಟಿಷರ ಕಾಲದಲ್ಲಿ ಕೈಮಗ್ಗ ಉದ್ಯಮಕ್ಕೆ ಆರ್ಥಿಕ ಸಹಾಯ ಸಿಕ್ಕಿದ್ದರಿಂದ ಕೈಮಗ್ಗ ಉದ್ಯಮ ಬೆಳವಣಿಗೆ ಹೊಂದಿತು. ಆ ಕಾಲದಲ್ಲಿ ಸೊಲ್ಲಾಪುರದಲ್ಲಿ ಮೊದಲು ಜವಳಿ ಗಿರಣಿ ‘ಸೊಲ್ಲಾಪುರ ನೂಲುವ ಮತ್ತು ನೇಯ್ಗೆ ಕಂಪನಿ’ಯು 1877 ಸ್ಥಾಪನೆಯಾಯಿತು.
ನಂತರದ ಅವಧಿಯಲ್ಲಿ ಈ ಸ್ಥಳದಲ್ಲಿ ಅಧಿಕ ಪ್ರಮಾಣದಲ್ಲಿ ಧೋತರ ಹಾಗೂ ಸೀರೆಗಳನ್ನು ಉತ್ಪಾದಿಸಲಾಯಿತು. ಕ್ರಮೇಣ ಧೋತರ ಹಾಗೂ ಸೀರೆಗಳಿಗೆ ಬೇಡಿಕೆ ಹೆಚ್ಚಾಯಿತು. ಜವಳಿ ಉದ್ಯಮವು ಅಭಿವೃದ್ಧಿಯತ್ತ ಮುನ್ನಡೆಯಿತು. ದಿನದಿಂದ ದಿನಕ್ಕೆ ಆಧುನಿಕತೆ ಅಳವಡಿಸಿಕೊಂಡಿತು. ಇದೇ ಪರಿಸರದಲ್ಲಿ ಅನೇಕ ಜವಳಿ ಗಿರಣಿಗಳು ಪ್ರಾರಂಭಗೊಂಡವು. ಉದ್ಯೋಗ ಅರಸಿ ಬರುವವರ ಸಂಖ್ಯೆ ಹೆಚ್ಚಾಗುತ್ತಾ ಬಂದಿತು. ಕೆಲವರು ಇಲ್ಲಿಯೇ ನೆಲೆಸಿದರು.
ಪುಲಗಮ್ ಬ್ರ್ಯಾಂಡ್ ಪ್ರಸಿದ್ಧಿ
ಕೈಮಗ್ಗದ ಮೇಲೆ ಕೆಲಸ ಮಾಡುವ ನೇಕಾರನು ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯ ಮೇಡ್ಕ್ ಗ್ರಾಮದಿಂದ ಕುಟುಂಬ ಸಮೇತ ಸೊಲ್ಲಾಪುರಕ್ಕೆ ಬಂದನು. ಉದ್ಯೋಗದ ಕಾರಣಕ್ಕೆ ಈ ನೇಕಾರ ಸೊಲ್ಲಾಪುರದಲ್ಲೇ ನೆಲೆಸಿದನು. ಈತನ ಹೆಸರು ಯಂಬಯ್ಯ ಮಾಲ್ಯ ಪುಲಗಮ್. ಈತ ಮೊದಲು ಬೇರೆಯವರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಸ್ವಲ್ಪ ಹಣ ಹೂಡಿ 1949ರಲ್ಲಿ ಸ್ವತಃ ಕೈ ಮಗ್ಗ ಸ್ಥಾಪಿಸಿದರು.
ಪ್ರಾರಂಭದಲ್ಲಿ ಫರಸಪೇಠಿ ಜಪಾನಿ ದಡಿ ಹೊಂದಿದ ಸೀರೆ ತಯಾರಿಸಿದರು. ‘ಲಕ್ಷ್ಮೀನಾರಾಯಣ ಛಾಪ್ ಲುಗಡಿ’ ಹೆಸರಿನ ನೌವಾರಿ ಸೀರೆಗೆ ಹೆಚ್ಚಿನ ಬೇಡಿಕೆ ಬಂದಿತು. 1964ರಲ್ಲಿ ರಾಮಯ್ಯ ಪುಲಗಮ್ ಕೈ ಮಗ್ಗದ ಮೇಲೆ ಚಾದರ ಉತ್ಪಾದನೆ ಪ್ರಾರಂಭಿಸಿದರು. ಮಯೂರ ಪಂಖ ಛಾಪ ಚಾದರಗೆ ಉತ್ತಮ ಸ್ಪಂದನೆ ದೊರಕಿದ್ದರಿಂದ ಪುಲಗಮ್ ಪ್ರಸಿದ್ಧಿ ಪಡೆದರು.
ಟವೆಲ್ ಬೆಡ್ ಶೀಟ್ ಉತ್ಪಾದನೆಯನ್ನೂ ಪ್ರಾರಂಭಿಸಿದರು. ನಗರಕ್ಕೆ ಬೇರೆ ಬೇರೆ ಊರುಗಳಿಂದ ಜನರು ಚಾದರ ಖರೀದಿಗಾಗಿಯೇ ಬರಲಾರಂಭಿಸಿದರು.
ಪುಲಗಮ್ ಅವರ ವಿಶೇಷವಾದ ಮಯೂರ ಪಂಖ ಛಾಪ ಚಾದರಗೆ ಸೊಲ್ಲಾಪುರದಲ್ಲಿ ಪ್ರಖ್ಯಾತಿ ಹೆಚ್ಚಿತು. ನಂತರ ಪುಲಗಮ್ ಎಂ.ಐ.ಡಿ.ಸಿ.ಯಲ್ಲಿ ಅತ್ಯಾಧುನಿಕ ಕಾರ್ಖಾನೆ ಪ್ರಾರಂಭಿಸಿದರು. ಸದ್ಯ ನಗರದ ದಾಜಿಪೇಠದಲ್ಲಿರುವ ಶೋರೂಂಗೆ ಚಾದರ ಖರೀದಿಸಲು ಕರ್ನಾಟಕ ಆಂಧ್ರಪ್ರದೇಶ ತೆಲಂಗಾಣ ತಮಿಳುನಾಡು ಗುಜರಾತ್ ಮಹಾರಾಷ್ಟ್ರ ರಾಜ್ಯದಾದ್ಯಂತ ಜನರು ಬರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.