ಮುದ್ದೇಬಿಹಾಳ: ‘ತಮ್ಮ ಹೆಸರಿನಲ್ಲಿ ಬಸವಣ್ಣನವರನ್ನು ಇಟ್ಟುಕೊಂಡು ಕೀಳುಮಟ್ಟದ ಹೇಳಿಕೆ ನೀಡುವ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಸ್ಲಿಮರನ್ನು ನಿಂದಿಸುತ್ತಿದ್ದಾರೆ. ಪ್ರವಾದಿ ಮಹ್ಮದ ಪೈಗಂಬರ್ ಕುರಿತು ಯತ್ನಾಳ ಹಗುರವಾಗಿ ಮಾತನಾಡಿರುವುದನ್ನು ಖಂಡಿಸುತ್ತೇವೆ ಎಂದು ಮುದ್ದೇಬಿಹಾಳ ಮುಸ್ಲಿಂ ಫೋರಂ ಅಧ್ಯಕ್ಷ ಮಹೆಬೂಬ ಗೊಳಸಂಗಿ ಹೇಳಿದರು.
ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಮಾತೆತ್ತಿದರೆ ಜಾಳಿಗೆ ಟೋಪಿ ಹಾಕೊಂಡವರ ಮನಿಗೆ ಬರಬೇಡ್ರಿ, ಗಡ್ಡಾ ಬಿಟ್ಟವರ ಮನಿಗೆ ಬರಬೇಡ್ರಿ, ಬುರ್ಖಾ ಹಾಕೊಂಡವರ ಮನಿಗೆ ಬರಬೇಡ್ರಿ ಎಂದು ಹೇಳುತ್ತಾನೆ. ಅವಶ್ಯಕತೆ ಇದ್ದಾಗ ಮುಸ್ಲಿಮರ ಬೆಂಬಲ ತೆಗೆದುಕೊಳ್ಳುವುದು,ಅವಶ್ಯಕತೆ ಇಲ್ಲದಾಗ ಮುಸ್ಲಿಮರಿಗೆ ಬೈಯ್ಯುವ ಕೆಟ್ಟ ಚಾಳಿ ಯತ್ನಾಳಗಿದೆ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
‘ಯತ್ನಾಳರ ತಾಯಿಯವರ ಬಗ್ಗೆ ಖಾದ್ರಿ ವಕೀಲ ಮಾತನಾಡಿರುವುದನ್ನು ಖಂಡಿಸುತ್ತೇವೆ. ಮಗ ಮಾಡಿದ ತಪ್ಪಿದೆ ತಾಯಿಯನ್ನು ಮಧ್ಯೆ ಎಳೆದು ತಂದಿರುವುದನ್ನು ಸಹಿಸಲಾಗದು. ನಮ್ಮ ಧರ್ಮದಲ್ಲಿ ಮತ್ತೊಬ್ಬರನ್ನು ನಿಂದಿಸುವುದನ್ನು ಹೇಳಿಕೊಟ್ಟಿಲ್ಲ’ ಎಂದು ಹೇಳಿದರು.
‘ಮುಂಬರುವ ದಿನಗಳಲ್ಲಿ ಯತ್ನಾಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
ವಕೀಲ ಎನ್.ಆರ್.ಮೊಕಾಶಿ ಮಾತನಾಡಿ, ‘ಯತ್ನಾಳರಿಗೆ ಈಗ ಯಾವ ನೆಲೆಯೂ ಇಲ್ಲ. ಬಾಯಿ ಚಪಲಕ್ಕಾಗಿ ಮುಸ್ಲಿಮರ ವಿರುದ್ಧ ಮಾತನಾಡುತ್ತಿದ್ದಾರೆ. ಅವರು ವರ್ತನೆ ತಿದ್ದಿಕೊಳ್ಳಬೇಕು. ವಿಜಯಪುರದಲ್ಲಿ ನಡೆದ ಮುಸ್ಲಿಂ ಮುಖಂಡರ ಸಭೆಯಲ್ಲಿ ಯತ್ನಾಳರನ್ನು ಮುಗಿಸುವುದಾಗಿ ಎಲ್ಲೂ ಹೇಳಿಲ್ಲ.ಅವರ ಹೇಳಿಕೆಯನ್ನು ಖಂಡಿಸಲಾಗಿದೆಯೇ ಹೊರತು ಅವರನ್ನು ಮುಗಿಸುವುದಾಗಿ ಹೇಳಿಲ್ಲ. ಆದರೆ ಯತ್ನಾಳರ ಕಡೆಯವರೇ ಅದನ್ನು ಹರಿಬಿಟ್ಟು ಗೊಂದಲ ಮೂಡಿಸುತ್ತಿದ್ದಾರೆ’ ಎಂದು ಹೇಳಿದರು.
ಮುಖಂಡ ಎಚ್.ಬಿ.ಸಾಲಿಮನಿ ಮಾತನಾಡಿದರು. ಮೌಲಾನಾ ಹುಸೇನ್ ಉಮರಿ, ಇರ್ಫಾನ್ ಕೂಡಗಿ,ಅಂಜುಮನ್ ಮಾಜಿ ಅಧ್ಯಕ್ಷ ಅಲ್ಲಾಭಕ್ಷ ನಾಯ್ಕೋಡಿ, ಫಾರೂಕ್ ಚೌದ್ರಿ, ಮಲಿಕ್ ನದಾಫ್, ಸಿರಾಜ್ ಮೋಮಿನ್, ಸಮೀರ್ ಹುಣಸಗಿ,ಹುಸೇನ್ ಮುಲ್ಲಾ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.