ADVERTISEMENT

ಯೋಗಥಾನ್: ಗಿನ್ನೀಸ್ ದಾಖಲೆ ಬರೆಯಲು ಸಿದ್ಧತೆ

ಜಿಲ್ಲಾಧಿಕಾರಿ ವಿಜಯಮಹಾಂತೇಶ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 15:57 IST
Last Updated 9 ಸೆಪ್ಟೆಂಬರ್ 2022, 15:57 IST
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅಧ್ಯಕ್ಷತೆಯಲ್ಲಿ ಯೋಗಥಾನ್‌ ಪೂರ್ವ ಸಿದ್ಧತಾ ಸಭೆ ನಡೆಯಿತು
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅಧ್ಯಕ್ಷತೆಯಲ್ಲಿ ಯೋಗಥಾನ್‌ ಪೂರ್ವ ಸಿದ್ಧತಾ ಸಭೆ ನಡೆಯಿತು   

ವಿಜಯಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿಸೆಪ್ಟೆಂಬರ್‌ 17ರಂದು ವಿಜಯಪುರ ನಗರದಲ್ಲಿ ಆಯೋಜಿಸಲಾಗುತ್ತಿರುವ ಯೋಗಥಾನ್-2022 ಗಿನ್ನಿಸ್‌ವಿಶ್ವದಾಖಲೆ ಬರೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಯೋಗಥಾನ್ ಗಿನ್ನೀಸ್ ದಾಖಲೆ ಮಾಡುವ ನಿಟ್ಟಿಯಲ್ಲಿ ಯೋಗಪಟುಗಳ ನೋಂದಣಿ ಮತ್ತು ಯೋಗ ಶಿಕ್ಷಕರ ನೋಂದಣಿ ಪ್ರಕ್ರಿಯೆ ತೀವ್ರಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ADVERTISEMENT

ನಗರದ ಸೈನಿಕ‌ ಶಾಲೆಯ ಆವರಣದಲ್ಲಿ ಈ ಕಾರ್ಯಕ್ರಮ ನಡೆಸಲಾವುದು. ಇಲ್ಲಿಗೆ ಸಾರಿಗೆ ವ್ಯವಸ್ಥೆ, ಮೈದಾನದ ಸ್ವಚ್ಚತೆ, ಮೈದಾನಕ್ಕೆ ಕಾರ್ಪೆಟ್, ಕುಡಿಯುವ ನೀರಿನ ವ್ಯವಸ್ಥೆ, ಮೊಬೈಲ್ ಟಾಯ್ಲೆಟ್ ಸೇರಿದಂತೆ ಎಲ್ಲಾ ಅಗತ್ಯ ವ್ಯವಸ್ಥೆ ಮಾಡಲು ನಿರ್ದೇಶನ ನೀಡಿದರು.

ಕಾರ್ಯಕ್ರಮ ಹಿನ್ನೆಲೆಯಲ್ಲಿ ಮೈದಾನದ ಸುತ್ತಲು ಭದ್ರತಾ ವ್ಯವಸ್ಥೆ ಮಾಡಬೇಕು. ಜಿಲ್ಲಾ ಕೇಂದ್ರದಲ್ಲಿ ಸಂಚಾರ ದಟ್ಟಣೆಯಾಗದಂತೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಯೋಗಪಟುಗಳ ತುರ್ತು ವೈದ್ಯಕೀಯ ಸೇವೆ ಅಂಗವಾಗಿ ಸುಸಜ್ಜಿತವಾದ 108 ಮೊಬೈಲ್ ಅಂಬುಲೆನ್ಸ್‌ಗಳು, ವೈದ್ಯಾಧಿಕಾರಿಗಳು ಮತ್ತು ಶುಶ್ರೂಷಕರನ್ನು ಸೇವೆ ನಿಯೋಜನೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಯೋಗಥಾನ್ ನಿಮಿತ್ತ ಮಳಿಗೆಗಳ ನಿರ್ಮಾಣ, ಆಯುಷ್ ಆರೋಗ್ಯ ಕ್ಯಾಂಪ್ ಮತ್ತು ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆಯ ಬಗ್ಗೆ ಚರ್ಚಿಸಲಾಯಿತು.

ಯೋಗಥಾನ್‌ನಲ್ಲಿ ಭಾಗವಹಿಸಲು ಈಗಾಗಲೇ42 ಸಾವಿರ ಜನರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಯುವಸಬಲೀಕರಣ‌ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಎಸ್.ಜಿ.ಲೋಣಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ವಿಜಯಪುರ ವಿಭಾಗದ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಡಿವೈಎಸ್‌ಪಿ ಸಿದ್ದೇಶ್ವರ, ಸಿಪಿಐ ಸಿದ್ದೇಶ, ಜಿಲ್ಲಾ ವಿಶೇಷ ಘಟಕದ ಇನ್‌ಸ್ಪೆಕ್ಟರ್ ಎನ್. ಎಸ್. ಜನಗೊಂಡ, ಅಗ್ನಿಶಾಮಕ ಇಲಾಖೆಯ ಅಧಿಕಾರಿ ಪ್ರಕಾಶ ಪವಾರ, ಆಹಾರ ಇಲಾಖೆಯ ಉಪ ನಿರ್ದೇಶಕಸಿದ್ರಾಮ ಮಾರಿಹಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಬಿ.ನಾಗರಾಜ, ಎನ್ನೆಸ್ಸೆಸ್ ಅಧಿಕಾರಿಗಳಾದ ಬಿ.ಎಂ.ಕೊರಬು, ನೆಹರೂ ಯುವ ಕೇಂದ್ರದ ಅಧಿಕಾರಿ ರಾಹುಲ್ ಡೊಂಗ್ರೆ, ಕಾಯಕಯೋಗಿ ಗ್ರಾಮೀಣ ಸಂಸ್ಥೆಯ ಬಸನಗೌಡ ಹರನಾಳ ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.