ADVERTISEMENT

`ಅನುಕಂಪ ಬೇಡ ಅವಕಾಶ ಕೊಡಿ'

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 6:18 IST
Last Updated 4 ಡಿಸೆಂಬರ್ 2012, 6:18 IST

ಚಿಂಚೋಳಿ: ವಿಕಲ ಚೇತನ ಮಕ್ಕಳ ಬಗ್ಗೆ ಕೇವಲ ಅನುಕಂಪದ ಮಾತನಾಡುವುದು, ಬಾಯಿ ಮಾತಿನಲ್ಲಿ ಅನುಕಂಪ ತೋರುವುದು ವ್ಯರ್ಥ ಬದಲಾಗಿ ಅಂತಹ ಮಕ್ಕಳಿಗೆ ಅವಕಾಶಗಳನ್ನು ಒದಗಿಸಬೇಕೆಂದು ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ ಕೊರವಿ ತಿಳಿಸಿದರು.

ಸೋಮವಾರ ಇಲ್ಲಿನ ಕೇಂದ್ರ ಪ್ರಾಥಮಿಕ ಶಾಲೆಯಲ್ಲಿ ಚಿಂಚೋಳಿ ಸಮೂಹ ಸಂಪನ್ಮೂಲ ಕೇಂದ್ರ ಹಮ್ಮಿಕೊಂಡ ವಿಶ್ವ ವಿಕಲ ಚೇತನ ಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮಾ ಚಿತ್ರಶೇಖರ ಪಾಟೀಲ ಸಮಾರಂಭ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಭಾಷ್ ಶೀಲವಂತ ಮಾತನಾಡಿ ಜ್ಯೋತಿಷಿಗಳು ಹಸ್ತ ನೋಡಿ ಹೇಳುವುದರಲ್ಲಿ ಯಾವ ಭವಿಷ್ಯವೂ ಇಲ್ಲ. ಬದಲಾಗಿ ಪ್ರತಿಯೊಬ್ಬರು ನಡೆಸುವ ಪ್ರಯತ್ನದಲ್ಲಿ ಮಾತ್ರ ಅವರ ಭವಿಷ್ಯವಿದೆ. ವಿಕಲ ಚೇತನ ಮಕ್ಕಳು ಕೀಳರಿಮೆ ತೊರೆದು ಆತ್ಮವಿಶ್ವಾಸದಿಂದ ನಿರಂತರ ಪ್ರಯತ್ನ ನಡೆಸಿದರೆ ಸ್ವಯಂ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯವಿದೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಬಾಷೀತ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನಿರ್ದೇಶಕ ಚಿತ್ರಶೇಖರ ಪಾಟೀಲ, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಗನ್ನಾಥರೆಡ್ಡಿ ರಂಜೋಳ್ ಇದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮೂಹ ಸಂಪನ್ಮೂಲ ವ್ಯಕ್ತಿ ಅಮೃತಪ್ಪ  ಕೆರೋಳ್ಳಿ ವಿಕಲ ಚೇತನ ಮಕ್ಕಳನ್ನು ವಿಶೇಷ ಅಗತ್ಯತೆಯುಳ್ಳ ಮಕ್ಕಳು ಎಂದು ಕರೆಯಲಾಗುತ್ತದೆ ಆದರೆ ವಾಸ್ತವವಾಗಿ ಇವರನ್ನು ವಿಶೇಷ ಸಾಮರ್ಥ್ಯವುಳ್ಳು ಮಕ್ಕಳು ಎಂದು ಕರೆಯುವುದು ಸೂಕ್ತ ಎಂದರು. ವೀರಣ್ಣಾ ಸುಗಂಧಿ ಸ್ವಾಗತಿಸಿದರು. ಈಶ್ವರಪ್ಪ ಕೊಳ್ಳೂರು ನಿರೂಪಿಸಿದರು. ರಾಧಾಕೃಷ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.