ADVERTISEMENT

ಅಲೆಮಾರಿಗಳ ಬಿಡಾರಗಳಿಗೆ ನುಗ್ಗಿದ ನೀರು

ಬದುಕು ಅಸ್ತವ್ಯಸ್ತ, ಶಾಶ್ವತ ಸೂರು ಕಲ್ಪಿಸಲು ಒತ್ತಾಯ

ಪಿಟಿಐ
Published 9 ಜೂನ್ 2018, 8:42 IST
Last Updated 9 ಜೂನ್ 2018, 8:42 IST
ಯಾದಗಿರಿಯ ಎಪಿಎಂಸಿ ಹಿಂಭಾಗ ನಿರಂತರ ಮಳೆಯಿಂದಾಗಿ ಅಲೆಮಾರಿಗಳ ಬಿಡಾರಗಳಲ್ಲಿ ನೀರು ನುಗ್ಗಿರುವುದು
ಯಾದಗಿರಿಯ ಎಪಿಎಂಸಿ ಹಿಂಭಾಗ ನಿರಂತರ ಮಳೆಯಿಂದಾಗಿ ಅಲೆಮಾರಿಗಳ ಬಿಡಾರಗಳಲ್ಲಿ ನೀರು ನುಗ್ಗಿರುವುದು   

ಯಾದಗಿರಿ: ನಿರಂತರವಾಗಿ ಮಳೆಯಿಂದಾಗಿ ನಗರದ ಎಪಿಎಂಸಿ ಮಾರುಕಟ್ಟೆ ಹಿಂಭಾಗದ ನೆಲೆಸಿರುವ ಅಲೆಮಾರಿಗಳ ಬಿಡಾರಗಳಲ್ಲಿ ನೀರು ನುಗ್ಗಿದ್ದು, ಬದುಕು ಅಸ್ತವ್ಯಸ್ತಗೊಂಡಿದೆ.

ನಗರದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣ, ಮಾತಾಮಾಣಿಕೇಶ್ವರಿ, ಭಾರತಿ ಕಾಲೊನಿ ಸೇರಿದಂತೆ ಹಲವು ಕಡೆಗಳಲ್ಲಿ ಅಲೆಮಾರಿ ಕುಟುಂಬಗಳು ಬಿಡಾರಗಳಲ್ಲಿ ನೆಲೆಸಿದ್ದಾರೆ. ಎರಡು ವರ್ಷಗಳ ಹಿಂದೆ ಈ ಅಲೆಮಾರಿಗಳಿಗೆ ಸರ್ಕಾರ ಶಾಶ್ವತ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಸಮೀಪದ ಹೊಸಳ್ಳಿ ಗ್ರಾಮದ ಬಳಿ ಎರಡು ಎಕರೆ ಪ್ರದೇಶ ಗುರುತಿಸಿ 90ಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಿದೆ. ಆದರೆ, ನಗರದಲ್ಲಿ ಇನ್ನೂ 50ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳಿಗೆ ನಿವೇಶನ ಹಂಚಿಕೆಯಾಗಿಲ್ಲ.

ನಿವೇಶನ ಸಿಗದ 30ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ನಗರದ ಎಪಿಎಂಸಿ ಹಿಂಭಾಗದ ಖಾಸಗಿ ನಿವೇಶನಗಳಲ್ಲಿ ಬಿಡಾರ ಹಾಕಿಕೊಂಡಿದ್ದಾರೆ. ಅವರಿಗೆ ನಿವೇಶನ ನೀಡುವ ಭರವಸೆಯನ್ನು ಜಿಲ್ಲಾಡಳಿತ ನೀಡಿರುವುದರಿಂದ ನಿವೇಶನದ ನಿರೀಕ್ಷೆಯಲ್ಲಿ ಅಲೆಮಾರಿಗಳು ಬದುಕು ಸಾಗಿಸುತ್ತಿದ್ದಾರೆ. ನಿತ್ಯ ಊರೂರು ಅಲೆದು ಪ್ಲಾಸಿಕ್‌ ಕೊಡಗಳನ್ನು ಮಾರಾಟ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಶಾಶ್ವತ ಸೂರು ಇಲ್ಲದೇ ಇರುವುದರಿಂದ ಅವರಿಗೆ ಮಳೆಗಾಲ ಎಂದರೆ ಭೀತಿ ಆವರಿಸುತ್ತದೆ.

ADVERTISEMENT

ಗುರುವಾರ ಮತ್ತು ಶುಕ್ರವಾರ ನಿರಂತರ ಮಳೆಗೆ ಅಲೆಮಾರಿಗಳ ಕೆಲ ಬಿಡಾರಗಳು ನೆಲಸಮವಾಗಿವೆ. ಕೆಲವು ಬಿಡಾರಗಳಿಗೆ ನೀರು ನುಗ್ಗಿದ್ದು, ದವಸ–ಧಾನ್ಯ ನೀರುಪಾಲಾಗಿದೆ. ಆಧಾರ್ ಕಾರ್ಡ್, ಬಿಪಿಎಲ್‌ ಕಾರ್ಡು ಇದ್ದರೂ, ಒಂದಿಬ್ಬರಿಗೆ ಮಾತ್ರ ಅಡುಗೆ ಸಿಲಿಂಡರ್ ಸೌಲಭ್ಯ ಸಿಕ್ಕಿದೆ. ಸೌದೆ ನೀರಿನಲ್ಲಿ ತೊಯ್ದು ಹೋಗಿದ್ದರಿಂದ ಒಲೆ ಉರಿಸಲು ಅಲೆಮಾರಿ ಮಹಿಳೆಯರು
ಪಡಿಪಾಟಲು ಬೀಳುತ್ತಿದ್ದ ದೃಶ್ಯ ಕಂಡುಬಂತು.

‘ನಿವೇಶನ ಮತ್ತು ಶಾಶ್ವತ ಸೂರು ಕಲ್ಪಿಸುವ ಕುರಿತು ಜಿಲ್ಲಾಡಳಿತ ಭರವಸೆ ನೀಡಿ ಎರಡು ವರ್ಷ ಕಳೆದಿದೆ. ಇದುವರೆಗೂ ಉಳಿದ ಅಲೆಮಾರಿಗಳಿಗೆ ನಿವೇಶನ ನೀಡುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿಲ್ಲ. ನಿವೇಶನ ಕೊಟ್ಟರೆ ತಗಡಿನ ಮನೆಯನ್ನಾದರೂ ನಿರ್ಮಿಸಿಕೊಂಡು ಬದುಕು ರಕ್ಷಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಗಮನ ಹರಿಸಬೇಕು’ ಎಂದು ಜಿಲ್ಲಾ ಅಲೆಮಾರಿ
ಸಂಘದ ಅಧ್ಯಕ್ಷ ಆಂಜನೇಯ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.