ADVERTISEMENT

ಆಯುಷ್ ಆರೋಗ್ಯ ಮೇಳ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 6:22 IST
Last Updated 24 ಡಿಸೆಂಬರ್ 2013, 6:22 IST

ಯಾದಗಿರಿ: ಆಯುಷ್‌ ಇಲಾಖೆ ಹಾಗೂ ಶಿರಸಿಯ ನಿಸರ್ಗ ಟ್ರಸ್ಟ್‌ಗಳ ಸಹಯೋಗದಲ್ಲಿ ನಗರದಲ್ಲಿ ಮೂರು ದಿನ ನಡೆದ ಆಯುಷ್‌ ಆರೋಗ್ಯ ಮೇಳ ಯಶಸ್ವಿಯಾಗಿ ನಡೆಯಿತು.

ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ಮೇಳದಲ್ಲಿ ಒಟ್ಟು 995 ಜನರು ರೋಗಗಳಿಗೆ ಮತ್ತು ಸಮಸ್ಯೆಗಳಿಗೆ ಚಿಕಿತ್ಸೆ ಮತ್ತು ಪರಿಹಾರವನ್ನು ಕಂಡುಕೊಂಡರು.

ಮೇಳದಲ್ಲಿ ಆಯುರ್ವೆದ, ಹೋಮಿ­ಯೋಪತಿ, ಯುನಾನಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಅಲ್ಲದೇ ಮನೆಮದ್ದು ಬಗ್ಗೆ ಮಾಹಿತಿ ನೀಡಲಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಮೇಳದ ಪ್ರಯೋಜನ ಪಡೆದರು. ಜಿಲ್ಲೆಯಲ್ಲಿನ ಆಯುಷ್ ಇಲಾಖೆಯ ವೈದ್ಯರು ಸಕ್ರಿಯವಾಗಿ ಪಾಲ್ಗೊಂಡು ರೋಗಿಗಳಿಗೆ ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ ಪದ್ಧತಿಗಳಲ್ಲಿ ಔಷಧ ಹಾಗೂ ಸ್ನೇಹನ ಮತ್ತು ಸ್ವೇಧನ ಹಾಗೂ ಕಪ್ಪಿಂಗ್ ಥೆರಪಿ ಮೂಲಕ ಉಚಿತ ಚಿಕಿತ್ಸೆ ಹಾಗೂ ಔಷಧಿಗಳನ್ನು ವಿತರಿಸಿದರು.

ಮಧುಮೇಹಿಗಳಿಗೆ ಉಚಿತವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತು ರಕ್ತದ ಒತ್ತಡವನ್ನು ಪರೀಕ್ಷಿಸ­ಲಾ­ಯಿತು. ಇಲಾಖೆಯ ವಿವಿಧ ಪದ್ಧತಿಗಳ ಮಾಹಿತಿ ಇರುವ ಚಾರ್ಟ್‌ಗಳನ್ನು ವಿತರಿಸಲಾಯಿತು.

ನಿಸರ್ಗ ಟ್ರಸ್ಟ್‌ನ ಡಾ.ವೆಂಕಟರಮಣ ಹೆಗಡೆ, ತಜ್ಞ ವೈದ್ಯ ಡಾ.ಪ್ರವೀಣ ಜಾಕೋಬ ಇವರು ಮಧುಮೇಹಿ ರೋಗಿಗಳು ಹಾಗೂ ಹೃದ್ರೋಗಿಗಳು  ಅನುಸರಿಸಬೇಕಾದ ಆಹಾರ ಕ್ರಮ ಮತ್ತು ವಿಹಾರದ ಬಗ್ಗೆ ಪ್ರಾತ್ಯಕ್ಷತೆ­ಯೊಂದಿಗೆ ಉಪನ್ಯಾಸ ನೀಡಿದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ. ವಂದನಾ ಗಾಳಿ ನೇತೃತ್ವದಲ್ಲಿ ಆಯುಷ್‌ ವೈದ್ಯರಾದ ಡಾ.ಎ.ಡಿ. ಗಂಗ­ನಾಳ, ಡಾ.ಪ್ರಕಾಶ ರಾಜಾಪುರ, ಡಾ.ರಮೇಶ ಸಜ್ಜನ, ಡಾ. ಪ್ರಮೋದ ಕುಲಕರ್ಣಿ, ಡಾ.ಪ್ರೇಮಾ ರಾಜಾಪುರ, ಡಾ.ಸುನಂದಾ ಕುದರಿ, ಡಾ.ರಾಮ­ರಡ್ಡಿ, ಡಾ.ಮೀರಾ ಜೋಶಿ, ಡಾ.ದೀಪಾ ರಾಠೋಡ, ಡಾ.ಹಣಮಂತ, ಡಾ.ವಜೀರ್‌, ಡಾ.ಮಂಜುನಾಥ, ಡಾ. ಸಂಜಯ ಕುಲಕರ್ಣಿ, ಡಾ.ಗಂಗಾಧರ ಸರಾಫ್‌, ಡಾ.ಶಿವಲಿಂಗಪ್ಪ, ಡಾ.ಶಫಿ, ಡಾ.ರಾಜೇಶ್ವರಿ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.