ಯಾದಗಿರಿ: ತಾಲ್ಲೂಕಿನಲ್ಲಿ ಈಚೆಗೆ ಸುರಿದ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯಿಂದ ಹಾನಿಗೊಳಗಾದ ಮನೆಗಳ ಫಲಾನುಭವಿಗಳಿಗೆ ಸಹಾಯಕ ಆಯುಕ್ತ ಬಿ.ಪಿ.ವಿಜಯ್ ನೇತೃತ್ವದಲ್ಲಿ ಸೋಮವಾರ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪರಿಹಾರ ಧನದ ಚೆಕ್ ಅನ್ನು ವಿತರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ್ ಚಿಂಚನಸೂರ, ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ನಿರ್ದೇಶನದಂತೆ ಸಹಾಯಕ ಆಯುಕ್ತ ಬಿ.ಪಿ. ವಿಜಯ್ ಮತ್ತು ತಹಶೀಲ್ದಾರ್ ಗುರು ಪಾಟೀಲ ನೇತೃತ್ವದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ನಿರೀಕ್ಷಕರ ತಂಡಗಳನ್ನು ರಚಿಸಿ, ಈ ತಂಡದ ಮೂಲಕ ಅರ್ಹ ಫಲಾನುಭವಿಗಳಿಗೆ ಪರಿಹಾರ ಧನ ವಿತರಿಸಲಾಯಿತು.
ತಾಲ್ಲೂಕಿನ ಕೊಂಕಲ್ ವಲಯ, ಗುರುಮಠಕಲ್ ವಲಯ, ಬಳಿಚಕ್ರ ವಲಯ, ಯಾದಗಿರಿ ವಲಯಗಳಲ್ಲಿ ಹಾನಿಗೊಳಗಾದ ಫಲಾನುಭವಿಗಳಿಗೆ ಪರಿಹಾರ ಧನ ಚೆಕ್ ವಿತರಿಸಲಾಯಿತು. ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಸಂಪೂರ್ಣ ಮನೆ ಹಾನಿಗೆ ಪರಿಹಾರ, ತೀವ್ರ ಮನೆ ಹಾನಿಯಡಿ ಪಕ್ಕಾ ಮನೆಗಳಿಗೆ ₨12,600-, ಕಚ್ಚಾ ಮನೆಗಳಿಗೆ ₨3,800, ಭಾಗಶಃ ಮನೆ ಹಾನಿಗೆ ₨ 1,900,- ಪಕ್ಕಾ ಮನೆ ಹಾನಿಯಾದಲ್ಲಿ ₨ 3,800-, ಕಚ್ಚಾ ಮನೆ ಹಾನಿಗೆ ₨2,300 ಸೇರಿದಂತೆ ವಿವಿಧ ರೀತಿಯಲ್ಲಿ ಹಾನಿಗೆ ಒಳಗಾದ ಸುಮಾರು 405 ಮನೆಗಳ ಹಾನಿಗೆ ಸಂಬಂಧಪಟ್ಟಂತೆ ಫಲಾನುಭವಿಗಳಿಗೆ ಪರಿಹಾರ ಧನದ ಚೆಕ್ ವಿತರಿಸಲಾಯಿತು.
ಕೊಂಕಲ್ ವಲಯದಲ್ಲಿ ಸುಮಾರು 108, ಗುರುಮಠಕಲ್ ವಲಯದಲ್ಲಿ 35, ಬಳಿಚಕ್ರ ವಲಯದಲ್ಲಿ 252, ಯಾದಗಿರಿ ವಲಯದಲ್ಲಿ 8, ಸೈದಾಪುರ ಹಾಗೂ ಹತ್ತಿಕುಣಿ ವಲಯಗಳಲ್ಲಿ ತಲಾ 1 ಮನೆಗಳು ಭಾಗಶಃ ಹಾನಿಯಾಗಿವೆ. ಮಳೆಯಿಂದ ಗುರುಮಠಕಲ್ ವಲಯದಲ್ಲಿ 1 ಜಾನುವಾರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಗಾಯಗೊಂಡ ಜನರು, ಬೆಳೆ ಹಾನಿ, ತೋಟಗಾರಿಕೆ ಬೆಳೆಗಳ ಹಾನಿಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಆಯಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ತೀವ್ರ ಬಾಧಿತ ಪ್ರದೇಶಗಳಿಗೆ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಬೆಳೆ ಹಾನಿಗೆ ಸಂಬಂಧಿಸಿದಂತೆ ತಕ್ಷಣ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದು, ಇದಕ್ಕೆ ತಪ್ಪಿದಲ್ಲಿ ಕೃಷಿ ಇಲಾಖೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಕೊಂಕಲ್, ಪರಮೇಶಪಲ್ಲಿ, ದೇವನಹಳ್ಳಿ, ಚಿನ್ನಾಕಾರ, ಬಳಿಚಕ್ರಗಳಲ್ಲಿ ಪರಿಹಾರ ಧನ ಚೆಕ್ ವಿತರಿಸಿದ ಸಹಾಯಕ ಆಯುಕ್ತ ಬಿ.ಪಿ.ವಿಜಯ್, ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಅರ್ಹ ಫಲಾನುಭವಿಗಳಿಗೆ ಆದ್ಯತೆ ಮೇಲೆ ಪರಿಹಾರ ವಿತರಣೆಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. ತಹಶೀಲ್ದಾರರು ಪರಿಹಾರ ವಿತರಣೆ ಬಗ್ಗೆ ನಿರಂತರ ಪರಿಶೀಲನೆ ನಡೆಸಬೇಕು. ಪರಿಹಾರ ವಿತರಣೆಯಲ್ಲಿ ತಾರತಮ್ಯ ಆಗದಂತೆ ಗಮನ ವಹಿಸಿ, ಫಲಾನುಭವಿಗಳಿಗೆ ತಕ್ಷಣ ಪರಿಹಾರ ವಿತರಿಸುವಂತೆ ಸೂಚನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.