ADVERTISEMENT

ಆಸ್ಪತ್ರೆ ಬಂದ್: ರೋಗಿಗಳ ಪರದಾಟ

ಸುರಪುರ: ವೈದ್ಯರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2013, 8:36 IST
Last Updated 11 ಫೆಬ್ರುವರಿ 2013, 8:36 IST
ವೈದ್ಯರ ಮತ್ತು ಸಿಬ್ಬಂದಿಯ ಮುಷ್ಕರದಿಂದ ಸುರಪುರದ ಸರ್ಕಾರಿ ಆಸ್ಪತ್ರೆಗೆ ಬೀಗ ಹಾಕಿರುವುದು
ವೈದ್ಯರ ಮತ್ತು ಸಿಬ್ಬಂದಿಯ ಮುಷ್ಕರದಿಂದ ಸುರಪುರದ ಸರ್ಕಾರಿ ಆಸ್ಪತ್ರೆಗೆ ಬೀಗ ಹಾಕಿರುವುದು   

ಸುರಪುರ: ಸರ್ಕಾರಿ ವೈದ್ಯರ ಮತ್ತು ಸಿಬ್ಬಂದಿಯ ಮುಷ್ಕರದಿಂದ ಸರ್ಕಾರಿ ವೈದ್ಯಕೀಯ ಸೇವೆ ಅಯೋಮಯವಾಗಿದೆ. ಸರ್ಕಾರಿ ಆಸ್ಪತ್ರೆಯನ್ನೆ ನಂಬಿದ್ದ ಬಡ ರೋಗಿಗಳು ಪರದಾಡುವಂತಾಗಿದೆ. ಕ್ರಿಮಿನಲ್ ಕೇಸ್‌ಗಳಲ್ಲಿ ವೈದ್ಯಕೀಯ ಪರೀಕ್ಷೆ ಅವಶ್ಯವಿರುವುದರಿಂದ ಪೊಲೀಸರಿಗೂ ಕಿರಿಕಿರಿ ಉಂಟಾಗಿದೆ.

ಮುಷ್ಕರ ಆರಂಭವಾಗಿ ಒಂದು ವಾರ ಗತಿಸಿದರೂ ಸುರಪುರದಲ್ಲಿ ಕಳೆದ ನಾಲ್ಕು ದಿನಗಳಿಂದ ಇದರ ಎಫೆಕ್ಟ್ ಕಂಡು ಬರುತ್ತಿದೆ. ನಾಲ್ಕು ದಿನಗಳ ಹಿಂದೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿತ್ತು. ಅಂದೇ ವೈದ್ಯರು ಸೇವೆಯಿಂದ ಹೊರಗುಳಿದಿದ್ದಾರೆ. ಇದರಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರ ಪರಿಸ್ಥಿತಿ ಗಂಭೀರವಾಗಿದೆ. ಗಾಯಕ್ಕೆ ಬ್ಯಾಂಡೇಜ್ ಮಾಡುವವರು ಇಲ್ಲದಂತಾಗಿದೆ. ಬಿಡುಗಡೆ ಮಾಡಲು ಸಿಬ್ಬಂದಿಯೂ ಇಲ್ಲದೆ ತ್ರಿಶಂಕು ಸ್ಥಿತಿಯಲ್ಲಿ ರೋಗಿಗಳು ಇದ್ದಾರೆ.

ಆಸ್ಪತ್ರೆಯ ಮುಖ್ಯ ಗೇಟ್ ಬಂದ್ ಮಾಡಲಾಗಿದೆ. ಹಿಂದಿನ ಗೇಟ್‌ನಿಂದ ರೋಗಿಗಳ ಸಂಗಡಿಗರು ತಿರುಗಾಡುತ್ತಿದ್ದಾರೆ. ಓರ್ವ ವಾಚ್‌ಮೆನ್ ಮಾತ್ರ ಆಸ್ಪತ್ರೆ ಕಾಯುತ್ತಿದ್ದಾನೆ. ಆಸ್ಪತ್ರೆ ಕಸವೂ ಕಾಣದೆ ಹೊಲಸಿನಿಂದ ಕೂಡಿದೆ. ಹೇಳುವವರೂ ಕೇಳುವವರೂ ಯಾರೂ ಇಲ್ಲದಿರುವುದರಿಂದ ಎರಡನೆ ಮಹಡಿಯಲ್ಲಿ ಅನೈತಿಕ ಘಟನೆಗಳು ನಡೆಯುತ್ತಿವೆ ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಸಂಗಡಿಗರು ತಿಳಿಸಿದರು.

ಆಪರೇಶನ್ ಸ್ಥಳ ನೋಯಿತ್ತಿದೆ. ಹೊಲಿಗೆ ಕಿತ್ತುಬರುತ್ತಿವೆ. ಕೀವಾಗಿದೆ. ಮಗುವಿಗೆ ಜ್ವರ ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಸೇರಿ ನರಕಯಾತನೆ ಅನುಭವಿಸುತ್ತಿದ್ದೇನೆ ಎಂದು ಸಂತಾನ ಹರಣ ಚಿಕಿತ್ಸೆಗೆ ಒಳಗಾಗಿರುವ ಕಕ್ಕೇರಾ ಗ್ರಾಮದ ದೇವಮ್ಮ ಪುಜಾರಿ ರೋದಿಸುತ್ತಾ ನುಡಿಯುತ್ತಾಳೆ.

ವೈದ್ಯರ ಮುಷ್ಕರ ಬೇಗ ಮುಗಿಯಲಿ, ಸರ್ಕಾರ ಸ್ಪಂದಿಸಲಿ. ವೈದ್ಯರು ತಮ್ಮದು ರೋಗಿಗಳ ಪ್ರಾಣ ಕಾಪಾಡುವ ಬಹುಮುಖ್ಯ ಸೇವೆ ಎಂದು ತಿಳಿದು ಸೇವೆಗೆ ಹಾಜರಾಗಲಿ ಎಂಬುದು ಬಡ ರೋಗಿಗಳು ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.