ADVERTISEMENT

ಎನ್‌ಎನ್‌ಬಿಸಿ ಕಾಲುವೆ ಜಾಲದ ಕಾಮಗಾರಿ ಅನುಷ್ಠಾನ

₨1,430ಕೋಟಿ ವೆಚ್ಚದ ಪ್ರಥಮ ಹಂತದ ಕೆಲಸ, ಭರದ ಸಿದ್ಧತೆ

ಪ್ರಜಾವಾಣಿ ವಿಶೇಷ
Published 3 ಫೆಬ್ರುವರಿ 2014, 10:14 IST
Last Updated 3 ಫೆಬ್ರುವರಿ 2014, 10:14 IST
ಜೇವರ್ಗಿ ಶಾಖಾ ಕಾಲುವೆಯ ದುಃಸ್ಥಿತಿ
ಜೇವರ್ಗಿ ಶಾಖಾ ಕಾಲುವೆಯ ದುಃಸ್ಥಿತಿ   

ಶಹಾಪುರ: ನಾರಾಯಣಪುರ ಎಡ­ದಂಡೆ ಕಾಲುವೆಯಡಿಯ (ಎನ್‌ಎಲ್‌ಬಿಸಿ) ಜಾಲದ ವಿಸ್ತರಣೆ, ನವೀಕರಣ ಮತ್ತು ಆಧುನೀಕರಣಕ್ಕೆ ತ್ವರಿತ ನೀರಾವರಿ ಲಾಭದಾಯಕ ಯೋಜನೆ (ಇಆರ್ಎಂ– ಎಐಬಿಪಿ) ಹಾಗೂ ನೀರು ಬಳಕೆ ಸಾಮರ್ಥ್ಯದ ಅಭಿವೃದ್ಧಿ (ಡಬ್ಲ್ಯೂಯುಇ) ಯೋಜನೆ ಅನುಷ್ಠಾನಕ್ಕಾಗಿ  ಕ್ಲೋಜರ ಅವಧಿ­ಯಲ್ಲಿ  ಕೈಗೆತ್ತಿಕೊಳ್ಳಲು ಕೃಷ್ಣಾ ಭಾಗ್ಯ ಜಲ ನಿಗಮದ ಭೀಮರಾಯನಗುಡಿ ವೃತ್ತದ ವ್ಯಾಪ್ತಿಯಲ್ಲಿ ಭರದ ಸಿದ್ಧತೆ ನಡೆದಿದೆ.

ನೀರಿನ ಬಳಕೆಯಲ್ಲಿ ದಕ್ಷತೆಯನ್ನು ಶೇ 25ರಷ್ಟು ಹೆಚ್ಚಿಸಲು ಕಾಲುವೆ ಜಾಲದಡಿ ಸಮಾನಾಂತರವಾಗಿ ನೀರಿನ ಹಂಚಿಕೆ ಮತ್ತು ಕಾಲುವೆ ಜಾಲದ ಅಂಚಿನ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ₨4,085 ಕೋಟಿ ಅಂದಾಜು ಮೊತ್ತದ ಯೋಜನೆ ಇದಾಗಿದೆ. ಯೋಜನೆ ಅನುಷ್ಠಾನದ ಅವಧಿ ಮೂರು ವರ್ಷದ್ದಾಗಿದೆ.

ಯೋಜನೆಯಲ್ಲಿನ ಪ್ರಮುಖ ಅಂಶ­ಗಳೆಂದರೆ ಎನ್‌ಎಲ್‌ಬಿಸಿ ಕಾಲುವೆ ಮತ್ತು ಅದರ ಅಡಿಯಲ್ಲಿ ಬರುವ ಶಾಖಾ ಕಾಲುವೆಗಳಾದ ಮುಡಬೂಳ ಶಾಖಾ ಕಾಲುವೆ (ಎಂಬಿಸಿ), ಶಹಾಪುರ ಶಾಖಾ ಕಾಲುವೆ (ಎಸ್‌ಬಿಸಿ), ಇಂಡಿ ಶಾಖಾ ಕಾಲುವೆ (ಐಬಿಸಿ) ಜೇವರ್ಗಿ ಶಾಖಾ ಕಾಲುವೆ (ಜೆಬಿಸಿ) ಗಳ ಲ್ಯಾಟರಲ್‌ (ವಿತರಣಾ ಕಾಲುವೆ) ಮಟ್ಟದವರೆಗಿನ ಆಧುನೀಕರಣ, ನೀರಿನ ಹರಿವಿನ ಸೂಕ್ತ ಮಾಪನಕ್ಕಾಗಿ ಟೆಲಿಮೆಟ್ರಿ ವ್ಯವಸ್ಥೆ ಮತ್ತು ನಿಯಂತ್ರಣ, ನೀರಿನ ಸಂಯೋಜಿತ ಬಳಕೆಗಾಗಿ ಜಿಐಎಸ್‌ ತಂತ್ರಜ್ಞಾನ ಆಧಾರಿತ ನೀರು ನಿರ್ವಹಣೆ ಪದ್ಧತಿ ಜಾರಿಗೆ ತರುವುದು. ಹೊಸದಾಗಿ ನೀರು ಬಳಕೆದಾರರ ಸಂಘ ರಚಿಸುವುದು ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ಸಂಘಗಳನ್ನು ಪುನ­ಶ್ಚೇತನಗೊಳಿಸುವುದು. ರೈತರಿಗೆ ಮಣ್ಣು ಮತ್ತು ನೀರು ಆರೋಗ್ಯ ಚೀಟಿ ವಿತ­ರಣೆ, ಸವಳು ಜವಳು ಭೂಮಿಯನ್ನು ಕೃಷಿ ಯೋಗ್ಯವಾಗಿಸುವ ಅಂಶಗಳು ಅಡಗಿವೆ.

ಪ್ರಥಮ ಹಂತವಾಗಿ ಶಾಖಾ ಕಾಲುವೆಗಳ ಆಧುನೀಕರಣಕ್ಕಾಗಿ ₨1,300ಕೋಟಿ ಅಂದಾಜು ಮೊತ್ತದ ಕಾಮಗಾರಿಯನ್ನು ಕ್ಲೋಜರ್‌ ಅವಧಿ­ಯಲ್ಲಿ (ಕಾಲುವೆ ನೀರು ಸ್ಥಗಿತಗೊಂಡ ತಕ್ಷಣ) ಕೈಗೆತ್ತಿಕೊಂಡು ಪೂರ್ಣ­ಗೊಳಿಸಲು ನಿಗಮ ಸಜ್ಜಾಗಿದೆ. ಅಲ್ಲದೆ ₨130ಕೋಟಿ ವೆಚ್ಚದಲ್ಲಿ ಕಾಲುವೆ ಜಾಲದ ಆಧುನಿಕ ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ.

ಯೋಜನೆ ಸಮರ್ಪಕವಾಗಿ ಅನು­ಷ್ಠಾನ­ಗೊಂಡರೆ ಕೃಷಿ ಉತ್ಪಾದನೆಯಲ್ಲಿ ಹೆಚ್ಚಳ, ಸಮನಾಂತರ ನೀರು ಹಂಚುವಿಕೆ, ನೀರಾವರಿ ವಂಚಿತ ಅಂದಾಜು 1.05ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ಲಾಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.