ADVERTISEMENT

ಕಲ್ಯಾಣಕ್ಕೂ ತಟ್ಟಿದ ನೀತಿ ಸಂಹಿತೆ ಬಿಸಿ!

ಯಾದಗಿರಿ ತಾಲ್ಲೂಕಿನಲ್ಲಿ 20ಕ್ಕೂ ಹೆಚ್ಚು ಮದುವೆ ಮುಂದೂಡಿಕೆ

ಮಲ್ಲೇಶ್ ನಾಯಕನಹಟ್ಟಿ
Published 7 ಏಪ್ರಿಲ್ 2018, 12:17 IST
Last Updated 7 ಏಪ್ರಿಲ್ 2018, 12:17 IST

ಯಾದಗಿರಿ: ‘ಮದುವೆ’ ಎಂದರೆ ಸಂಭ್ರಮ. ಅಂತಹ ಸಂಭ್ರಮದ ಮೇಲೆ ಮಾದರಿ ನೀತಿ ಸಂಹಿತೆಯ ಬಿಸಿ ನೇರವಾಗಿ ತಟ್ಟದಿದ್ದರೂ, ಅದರ ಭೀತಿಯಿಂದಾಗಿ ಯಾದಗಿರಿ ತಾಲ್ಲೂಕಿನಲ್ಲಿ ಒಟ್ಟು 20 ಮದುವೆಗಳು ಮುಂದೂಡಲ್ಪಟ್ಟಿವೆ.

ಏಪ್ರಿಲ್‌, ಮೇ ತಿಂಗಳಲ್ಲಿ ಶುಭದಿನಗಳೇ ಹೆಚ್ಚು. ಮದುವೆ, ಗೃಹಪ್ರವೇಶದಂತಹ ಶುಭಕಾರ್ಯ ಈ ತಿಂಗಳುಗಳಲ್ಲಿಯೇ ಹೆಚ್ಚಾಗಿ ಜರುಗುತ್ತವೆ. ಬಸವ ಜಯಂತಿಯಂದು ಹೆಚ್ಚು ಜನರು ಗೃಹ ಪ್ರವೇಶ ಇಟ್ಟುಕೊಳ್ಳುತ್ತಾರೆ. ಶುಭಲಾಭದ ದಿನಗಳಲ್ಲಿ ನೀತಿ ಸಂಹಿತೆ ಜಾರಿಯಾಗಿರುವುದು ಜನರ ಸಂಕಷ್ಟಕ್ಕೆ ಕಾರಣವಾಗಿದೆ.

ಧಾರ್ಮಿಕ ಮತ್ತು ನಾಗರಿಕರ ವೈಯಕ್ತಿಕ ಕಾರ್ಯಗಳಿಗೆ ಮಾದರಿ ನೀತಿ ಸಂಹಿತೆ ಅನ್ವಯಿಸುವುದಿಲ್ಲ ಎಂಬುದಾಗಿ ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿ ನಿರ್ದೇಶನದಲ್ಲಿ ಸೂಚಿಸಿದ್ದರೂ, ನೀತಿ ಸಂಹಿತೆಯ ಛಾಯೆ ಮಾತ್ರ ಇದ್ದೇ ಇರುತ್ತದೆ. ಹಾಗಾಗಿ, ಮದುವೆ ಸಮಾರಂಭಗಳಿಗೆ ಪರವಾನಗಿ ಪಡೆಯುವುದು ಒಳಿತು ಎಂಬುದಾಗಿಯೂ ಅಧಿಕಾರಿಗಳು ಸಲಹೆ ನೀಡುತ್ತಾರೆ.

ADVERTISEMENT

‘ಮದುವೆ’ ಸಮಾರಂಭದಲ್ಲಿ ಬಂಧುಗಳು, ನೆಂಟರಿಷ್ಟರು, ಊರಿನ ಮುಖಂಡರು, ಹಿರಿಯರು ಇರಲೇಬೇಕು. ಮದುವೆ ಸಂಭ್ರಮಕ್ಕೆ ಖರ್ಚುವೆಚ್ಚದ ಬಾಬತ್ತು ಹೇಳಲು ಬರುವುದಿಲ್ಲ. ಮದುವೆ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ವ್ಯಯಿಸಲೇಬೇಕು. ಸಾಲ ಮಾಡಿದರೂ ಸರಿ ಇಡೀ ಊರಿಗೆ ಊಟ ಹಾಕಿ ಮದುವೆ ಅದ್ಧೂರಿಯಾಗಿಸಬೇಕು ಎಂಬ ಹಂಬಲ ಹೊಂದಿರುವವರೇ ಹೆಚ್ಚು. ಇಂತಹ ಸಂದರ್ಭದಲ್ಲಿ ಕೂಡಿಟ್ಟ ಹಣ, ಅವರಿವರಿಂದ ಪಡೆದ ಕೈಸಾಲ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಹೊಂದಿಸುವ ಹಣಕ್ಕೆ ದಾಖಲೆಗಳು ಒದಗಿಸಲು ಸಾಧ್ಯವೇ?’ ಎಂದು ಮದುವೆ ಮುಂದೂಡಿರುವ ಎಲ್ಹೇರಿಯ ರಂಗಪ್ಪ ನಾಯಕ ಪ್ರಶ್ನಿಸುತ್ತಾರೆ.

‘ಸಂಭ್ರಮ ಇಲ್ಲದ ಮದುವೆ ಮಾಡುವುದರಲ್ಲಿ ಯಾರಿಗೂ ಆಸಕ್ತಿ ಇರುವುದಿಲ್ಲ. ಚುನಾವಣಾ ಅಧಿಕಾರಿಗಳು ಹಲವು ಷರಾ ಹಾಕಿಕೊಡುವ ಪರವಾನಗಿ ಇಟ್ಟುಕೊಂಡು ಮದುವೆ ಮಾಡುವುದರಿಂದ ಮನಸ್ಸಿಗೂ ನೆಮ್ಮದಿ ಇರುವುದಿಲ್ಲ. ಹಾಗಾಗಿ, ಮದುವೆಯನ್ನು ಜೂನ್ ತಿಂಗಳಿಗೆ ಮುಂದೂಡಿರುವುದಾಗಿ ಅವರು ಹೇಳುತ್ತಾರೆ.

ಮಾರ್ಚ್ 27ರಂದು ಬೆಳಿಗ್ಗೆ 11ಗಂಟೆಯಿಂದ ರಾಜ್ಯದಲ್ಲಿ ಜಾರಿಗೊಂಡಿರುವ ಮಾದರಿ ನೀತಿ ಸಂಹಿತೆ ಮೇ 20ರವರೆಗೆ ಇರುತ್ತದೆ. ಮಾದರಿ ನೀತಿ ಸಂಹಿತೆ ಜಾರಿ ಕುರಿತು ಕಲ್ಪನೆ ಇಲ್ಲದೇ ನಿಶ್ಚಯಗೊಂಡಿದ್ದ ಮದುವೆಗಳು ಮುಂದೂಡಲ್ಪಟ್ಟಿರುವ ಪರಿಣಾಮ ನಗರದಲ್ಲಿನ ಕಲ್ಯಾಣ ಮಂಟಪಗಳಿಗೆ ಬೀಗ ಹಾಕಿದ್ದಾರೆ. ಸದಾ ಜನಸಂದಣಿಯಿಂದ ಕೂಡಿರುತ್ತಿದ್ದ ಕಲ್ಯಾಣ ಮಂಟಪಗಳು ಬಿಕೋ ಎನ್ನುತ್ತಿವೆ.

ಕುಸಿದ ವ್ಯಾಪಾರ ವಹಿವಾಟು: ಮದುವೆಗಳು ಮುಂದೂಡಲ್ಪಡುತ್ತಿರುವ ಪರಿಣಾಮವಾಗಿ ನಗರದಲ್ಲಿ ಕಿರಾಣಿ ಅಂಗಡಿಗಳ ವ್ಯಾಪಾರ ವಹಿವಾಟು ಸಹ ಕುಸಿದಿದೆ. ಮದುವೆ ಹಮಾಲಿಗರಿಗೆ ದಿನಗೂಲಿ ಕೆಲಸ ಇಲ್ಲದಾಗಿದೆ. ಬಾಣಸಿಗರು ದುಡಿಮೆ ಇಲ್ಲದೇ ಮನೆ ಸೇರುವಂತಾಗಿದೆ.

ನಿಗಾ ಇದ್ದೇ ಇರುತ್ತದೆ: ಡಿಸಿ ನಾಗರಿಕರ ಖಾಸಗಿ ಕಾರ್ಯಕ್ರಮಗಳ ಮೇಲೆ ನೀತಿ ಸಂಹಿತೆ ನೇರವಾಗಿ ಅನ್ವಯಿಸದಿದ್ದರೂ, ನೀತಿ ಸಂಹಿತೆ ಉಲ್ಲಂಘನೆ ಕುರಿತು ಒಂದು ನಿಗಾ ಇಡಲೇಬೇಕಾಗುತ್ತದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಜೆ.ಮಂಜುನಾಥ ಹೇಳುತ್ತಾರೆ.

ಸಾಮಾನ್ಯವಾಗಿ ಗೃಹ ಪ್ರವೇಶ ಇಲ್ಲವೇ ಮದುವೆಯಂತಹ ಸಮಾರಂಭಗಳಲ್ಲಿ ರಾಜಕಾರಣಿಗಳಿಗೆ ಒಂದು ಆಹ್ವಾನ ಇದ್ದೇ ಇರುತ್ತದೆ. ಆ ಸಂದರ್ಭವನ್ನು ಅವರು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡರೆ ಆಗ ನೀತಿ ಸಂಹಿತೆ ಅನ್ವಯಿಸುತ್ತದೆ. ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು, ಪಕ್ಷದ ಕಾರ್ಯಕರ್ತರು ಸಾಮಾನ್ಯರಂತೆ ಭಾಗವಹಿಸಬಹುದು ಎನ್ನುತ್ತಾರೆ ಅವರು.

**

ಯಾದಗಿರಿ ತಾಲ್ಲೂಕಿನಲ್ಲಿ ಮದುವೆಗೆ ಅನುಮತಿ ಕೋರಿ 35ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಇದುವರೆಗೂ 10 ಮದುವೆಗಳಿಗೆ ಷರಾ ಅನ್ವಯ ಪರವಾನಗಿ ನೀಡಲಾಗಿದೆ – ಮಲ್ಲೇಶ್ ತಂಗಾ, ಎಂಸಿಸಿ ತಂಡದ ನೋಡಲ್ ಅಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.