ADVERTISEMENT

ಕಾಂಗ್ರೆಸ್ ಮುಕ್ತ ಭಾರತ ಸನ್ನಿಹಿತ

ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಸಂಸದ ಪ್ರವೇಶ ಭಾಯ್ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 4:12 IST
Last Updated 19 ಮಾರ್ಚ್ 2018, 4:12 IST
ಯಾದಗಿರಿಯಲ್ಲಿ ಶುಕ್ರವಾರ ಬಿಜೆಪಿ ಪದಾಧಿಕಾರಿಗಳ ಸಭೆಯನ್ನು ಸಂಸದ ಪ್ರವೇಶಭಾಯ್ ಸಾಹೇಬಸಿಂಗ್ ಉದ್ಘಾಟಿಸಿದರು
ಯಾದಗಿರಿಯಲ್ಲಿ ಶುಕ್ರವಾರ ಬಿಜೆಪಿ ಪದಾಧಿಕಾರಿಗಳ ಸಭೆಯನ್ನು ಸಂಸದ ಪ್ರವೇಶಭಾಯ್ ಸಾಹೇಬಸಿಂಗ್ ಉದ್ಘಾಟಿಸಿದರು   

ಯಾದಗಿರಿ: ‘ಕಾಂಗ್ರೆಸ್ ಮುಕ್ತ ಭಾರತಕ್ಕೆ ಕರ್ನಾಟಕ ಬಾಕಿ ಉಳಿದಿದೆ. ಸಂಘಟನ್ಮಾತಕವಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಕಾಂಗ್ರೆಸ್ ಮುಕ್ತಗೊಳಿಸಬಹುದು’ ಎಂದು ಸಂಸದ ಪ್ರವೇಶ ಭಾಯ್ ಸಾಹೇಬಸಿಂಗ್ ಹೇಳಿದರು.

ನಗರದ ಬಸವೇಶ್ವರ ಕಲ್ಯಾಣ ಪಂಟಪದಲ್ಲಿ ಶುಕ್ರವಾರ ಯಾದಗಿರಿ ಮತಕ್ಷೇತ್ರದ ಶಕ್ತಿಕೇಂದ್ರಗಳ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಕಾಂಗ್ರೆಸ್ ಮುಕ್ತ ಭಾರತ ಕನಸನ್ನು ಕರ್ನಾಟಕದಲ್ಲಿ ಸಾಕಾರಗೊಳಿಸಬೇಕಿದೆ. ನರೇಂದ್ರ ಮೋದಿ ಅವರು ಮಾಡಿರುವ ಜನಪರ ಯೋಜನೆಗಳು ಬಡ ರೈತರ ಪರವಾಗಿವೆ. ಕರ್ನಾಟದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರಿಗೆ ಪೂರಕವಾಗುವಂತಹ ಮತ್ತಷ್ಟೂ ಯೋಜನೆಗಳನ್ನು ಜಾರಿಗೆ ತರಲಾಗುವುದು’ ಎಂದರು.

ADVERTISEMENT

‘ಸ್ವಚ್ಛ, ದಕ್ಷ ಆಡಳಿತ ನಮ್ಮ ಕನಸು. ನಾವು ಅಧಿಕಾರಕ್ಕೆ ಬಂದರೆ ರಾಜ್ಯದ ನೀರಾವರಿ ಸಮಸ್ಯೆ ಬಗೆಹರಿಸುವುದಕ್ಕೆ ಅಗತ್ಯ ಪ್ರಮಾಣದಷ್ಟು ಅನುದಾನ ಮೀಸಲಿರಿಸುತ್ತೇವೆ. ಎಲ್ಲೆಡೆ ಕಾಂಗ್ರೆಸ್ ಮುಕ್ತ ಕರ್ನಾಟಕವೇ ನಮ್ಮ ಧ್ಯೇಯ. ಕಾಂಗ್ರೆಸ್ ದುರಾಡಳಿತದಿಂದ ರಾಜ್ಯದ ಜನರು ಬೇಸತ್ತಿದ್ದಾರೆ. ನರೇಂದ್ರ ಮೋದಿ ನೇತೃತ್ವಕ್ಕೆ ಜನಾಶೀರ್ವಾದ ಸಿಕ್ಕರೆ, ಈ ದುರಾಡಳಿತಕ್ಕೆ ಅಂತ್ಯ ಹಾಡಬಹುದು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ‘ಬಿಜೆಪಿಯ ಆಸ್ತಿ ಎಂದರೆ ಕಾರ್ಯಕರ್ತರು. ಎಲ್ಲರೂ ಒಂದಾಗಿ ಪಕ್ಷದ ವರಿಷ್ಠರು ವಹಿಸಿರುವ ಬೂತ್‌ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಬೇಕು’ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಶಂಕರಪ್ಪ ಮಾತನಾಡಿ, ‘ಬೂತ್‌ಮಟ್ಟದ ಕಾರ್ಯಕರ್ತರು ಮನೆಮನೆಗೆ ತೆರಳಿ ಪಕ್ಷದ ಸಾಧನೆಗಳನ್ನು ಜನರಿಗೆ ತಿಳಿಸುವಂತಹ ಕಾರ್ಯ ಮಾಡಬೇಕು. ಬೂತ್‌ ಮಟ್ಟದಲ್ಲಿ ಅತಿ ಹೆಚ್ಚು ಮತದಾನ ಮಾಡಿಸಿದ ಸದಸ್ಯರಿಗೆ  ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸೂಕ್ತ ಸ್ಥಾನ ನೀಡಲಾಗುವುದು’ ಎಂದರು.

ಮುಖಂಡರಾದ ಡಾ.ವೀರ ಬವಂತರೆಡ್ಡಿ ಮುದ್ನಾಳ, ಡಾ.ಶರಣ ಭೂಪಾಲರೆಡ್ಡಿ ನಾಯ್ಕಲ್, ಭೀಮಣ್ಣ ಮೇಟಿ, ದೇವಿಂದ್ರನಾಧ ನಾಥ, ವಿಕ್ರಮ ಜೋಷಿ, ಪ್ರಭುಗೌಡ, ಯಾದಗಿರಿ ಜಿಲ್ಲಾ ಚುನಾವಣಾ ಉಸ್ತುವಾರಿ ರಾಘುರಾವ ರಾಮೋಜಿ, ಹಣಮಂತ ಇಟಗಿ, ಸೂಗೂರೇಶ ಮಾಲಿ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.