ADVERTISEMENT

ಕಾಲೊನಿಗೆ ಶೀಘ್ರ ರಕ್ಷಣಾ ಗೋಡೆ: ಲಲಿತಾ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 9:40 IST
Last Updated 21 ಅಕ್ಟೋಬರ್ 2017, 9:40 IST

ಯಾದಗಿರಿ: ‘ಕುಷ್ಠರೋಗಿಗಳ ಕಾಲೊನಿಗೆ ನಗರಸಭೆ ಶೀಘ್ರದಲ್ಲಿ ರಕ್ಷಣಾ ಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲಿದೆ’ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಭರವಸೆ ನೀಡಿದರು. ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಶುಕ್ರವಾರ ಕುಷ್ಠರೋಗಿಗಳ ಕಾಲೊನಿಯಲ್ಲಿ ದೀಪಾವಳಿ ಅಂಗವಾಗಿ ಹಮ್ಮಿಕೊಂಡಿದ್ದ ಅಕ್ಕಿ, ಬೇಳೆ, ಬೆಲ್ಲ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರೋಗಿಗಳು ಮಾನಸಿಕವಾಗಿ ಸದೃಢತೆ ಹೊಂದಬೇಕು. ಆಗಾಗ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಮಾನಸಿಕ ಕ್ಲೇಷಕ್ಕೆ ಒಳಗಾಗಬಾರದು’ ಎಂದು ಸಲಹೆ ನೀಡಿದರು.
‘ಕಾಲೊನಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಒಡೆದಿದ್ದು, ಪೈಪ್‌ಲೈನ್‌ ದುರಸ್ತಿಗೊಳಿಸುವಂತೆ ನಗರಸಭೆಗೆ ದೂರು ಬಂದಿದೆ.

ಈ ಕುರಿತು ದುರಸ್ತಿಗೆ ಕಾಮಗಾರಿ ನಡೆಸುವಂತೆ ಪೌರಾಯುಕ್ತರಿಗೆ ಸೂಚಿಸಿದ್ದರೂ ಅವರು ನಿರ್ಲಕ್ಷಿಸಿದ್ದಾರೆ. ಈ ಕುರಿತು ಮತ್ತೊಮ್ಮೆ ಪೌರಾಯುಕ್ತರಿಗೆ ದುರಸ್ತಿ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗುವುದು. ನಿರ್ಲಕ್ಷಿಸಿದರೆ ಸ್ವಂತ ಖರ್ಚಿನಲ್ಲಿ ದುರಸ್ತಿಗೊಳಿಸುತ್ತೇನೆ’ ಎಂದು ಹೇಳಿದರು.

ADVERTISEMENT

ಇದೇ ಸಂದರ್ಭದಲ್ಲಿ ಕುಷ್ಠರೋಗಿಗಳ ಜತೆಗೆ ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿದರು. ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಖಾಜಾ ಪಟೇಲ್, ಉಪಾಧ್ಯಕ್ಷ ಇಂದೂಧರ ಸಿನ್ನೂರ, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ದೊಡ್ಡಪ್ಪಗೌಡ, ಯಾದಗಿರಿ ತಾಲ್ಲೂಕು ಅಧ್ಯಕ್ಷ ಶರಣಗೌಡ ಯಲ್ಹೇರಿ, ವಿರೂಪಾಕ್ಷಸ್ವಾಮಿ, ಅಲೀಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.