ADVERTISEMENT

ಕೂಲಿಗಾಗಿ ಹೋದವರು ಹೆಣವಾಗಿ ಬಂದರು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 6:05 IST
Last Updated 17 ಏಪ್ರಿಲ್ 2012, 6:05 IST

ಯಾದಗಿರಿ:  ಕೂಲಿ ಮುಗಿಸಿಕೊಂಡು ಮನೆ ಸೇರುವ ತವಕದಲ್ಲಿದ್ದವರು ಚಿರನಿದ್ರೆಗೆ ಜಾರಿದ ಘಟನೆ ಶಹಾಪುರ ತಾಲ್ಲೂಕಿನ ದೋರಹಳ್ಳಿ ಸಮೀಪ ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಟ್ರ್ಯಾಕ್ಟರ್, ಟಂಟಂ ಹಾಗೂ ಇಂಡಿಕಾ ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದ್ದು, ಶಹಾಪುರ ತಾಲ್ಲೂಕಿನ ತೇಕರಾಳ ಗ್ರಾಮದ ಬಸಮ್ಮ ಶರಣಪ್ಪ (40) ಹಾಗೂ ಶಿವಮ್ಮ ಭೀಮಪ್ಪ (12) ಎಂಬುವವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಟಂಟಂನಲ್ಲಿದ್ದ 13 ಹಾಗೂ ಟ್ರ್ಯಾಕ್ಟರ್‌ನದ್ದ 8 ಜನ ಸೇರಿದಂತೆ 21 ಜನರು ಗಾಯಗೊಂಡಿದ್ದು, ಶಹಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೂಲಿ ಕಾರ್ಮಿಕರನ್ನು ಕರೆದುಕೊಂಟು ತೇಕರಾಳಕ್ಕೆ ಹೊರಟಿದ್ದ ಟಂಟಂ, ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್ ಅನ್ನು ಹಿಂದಿಕ್ಕುವ ಭರದಲ್ಲಿ ಎದುರಿನಿಂದ ಬಂದ ಇಂಡಿಕಾ ಕಾರು ರಭಸವಾಗಿ ಟಂಟಂಗೆ ಡಿಕ್ಕಿ ಹೊಡೆದಿದೆ. ಇನ್ನೊಂದೆಡೆ ಟ್ರ್ಯಾಕ್ಟರ್ ಮುಗುಚಿ ಬಿದ್ದಿದೆ. ಇದರಿಂದಾಗಿ ಟಂಟಂ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಮಹಿಳೆ ಹಾಗೂ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ .

ಟಂಟಂನಲ್ಲಿ ಎಲ್ಲರೂ ಮಹಿಳೆಯರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದ್ದು, ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಶಹಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಸುಧೀರ ಹೆಗಡೆ, ಸಬ್‌ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಅಲ್ಲದೇ ರಸ್ತೆ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ನಿತ್ಯದ ಕಾಯಕ: ನಿತ್ಯವೂ ಶಹಾಪುರ ತಾಲ್ಲೂಕಿನ ಮಡ್ನಾಳ ಬಳಿ ಇರುವ ಆಂಧ್ರಪ್ರದೇಶದವರ ಹೊಲದಲ್ಲಿ ಕೂಲಿ ಕೆಲಸಕ್ಕಾಗಿ ತೇಕರಾಳ ಗ್ರಾಮದ ಜನರು ತೆರಳುತ್ತಿದ್ದರು. ಕೆಲಸ ಮುಗಿಸಿಕೊಂಡು ಟಂಟಂನಲ್ಲಿಯೇ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದರು.

ಎಂದಿನಿಂತೆ ಸೋಮವಾರವೂ ಕೂಲಿ ಕೆಲಸ ಮುಗಿಸಿಕೊಂಡು ದೋರನಹಳ್ಳಿಗೆ ಆಗಮಿಸಿದ ಈ ಕೂಲಿ ಕಾರ್ಮಿಕರು, ದೋರನಹಳ್ಳಿಯಲ್ಲಿ ಮನೆಗೆ ಬೇಕಾಗುವ ಸಾಮಾನುಗಳನ್ನು ಖರೀದಿಸಿದ್ದಾರೆ. ನಂತರ ಟಂಟಂನಲ್ಲಿ ಕುಳಿತು ಒಂದು ಕಿ.ಮೀ. ಪ್ರಯಾಣಿಸುವಷ್ಟರಲ್ಲಿಯೇ ಈ ದುರ್ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಟಂಟಂ ಚಾಲಕ ಟ್ರ್ಯಾಕ್ಟರ್ ಹಿಂದಿಕ್ಕುವ ಭರದಲ್ಲಿ ಹೋಗುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಇಂಡಿಕಾ ಕಾರು, ಟಂಟಂಗೆ ಅಪ್ಪಳಿಸಿದೆ. ರಭಸ ಎಷ್ಟಿತ್ತೆಂದರೆ, ಶಹಾಪುರದತ್ತ ಹೊರಟಿದ್ದ ಕಾರು, ಅಪಘಾತದ ನಂತರ ಯಾದಗಿರಿಯತ್ತ ಹೊರಳಿ ನಿಂತಿದೆ.

ಹಿಡಿ ಶಾಪ: ಕಡಿಮೆ ಖರ್ಚಿನಲ್ಲಿ ಪ್ರಯಾಣಿಸಬಹುದು ಎಂಬ ಏಕೈಕ ಉದ್ದೇಶದಿಂದ ಬಹಳಷ್ಟು ಗ್ರಾಮಸ್ಥರು, ಟಂಟಂಗಳಲ್ಲಿಯೇ ಪ್ರಯಾಣಿಸುತ್ತಿದ್ದು, ಅದರಲ್ಲಿಯೂ ಬಸ್ ಸಂಪರ್ಕ ಇಲ್ಲದ ಗ್ರಾಮಗಳಿಗೆ ಟಂಟಂಗಳೇ ಆಸರೆ ಆಗಿವೆ. ಹೀಗಾಗಿ ದಣಿದ ಕೂಲಿ ಕಾರ್ಮಿಕರು ನೇರವಾಗಿ ಮನೆ ಸೇರಲು ಈ ಟಂಟಂಗಳಲ್ಲೇ ಪ್ರಯಾಣಿಸುತ್ತಾರೆ.

ಟಂಟಂಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ತೆಗೆದುಕೊಂಡು ಹೋಗಲಾಗುತ್ತಿದ್ದು, ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈಗಾಗಲೇ ಸಾಕಷ್ಟು ಅನಾಹುತಗಳು ಸಂಭವಿಸಿದ್ದರೂ, ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಮನೆಗೆ ತೆಗೆದುಕೊಂಡು ಹೋಗಲು ಖರೀದಿಸಿದ್ದ ಸಾಮಗ್ರಿಗಳೆಲ್ಲವೂ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಇದನ್ನು ನೋಡಿದ ದೋರನಹಳ್ಳಿ ಗ್ರಾಮಸ್ಥರು, ಸಾರಿಗೆ ಅಧಿಕಾರಿಗಳು ಹಾಗೂ ಇಂಡಿಕಾ ಕಾರಿನ ಚಾಲಕನಿಗೆ ಹಿಡಿಶಾಪ ಹಾಕುತ್ತಿದ್ದರು.

ಆಸ್ಪತ್ರೆಗೆ ದೇವರಾಜ ನಾಯಕ ಭೇಟಿ: ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಶಹಾಪುರ ಆಸ್ಪತ್ರೆಗೆ ಧಾವಿಸಿದ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ ನಾಯಕ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರು.

ಘಟನೆಯಲ್ಲಿ ಮೃತಪಟ್ಟಿರುವ ಹಾಗೂ ಗಾಯಗೊಂಡವರ ಕುಟುಂಬಕ್ಕೆ ಸಾಂತ್ವನ ಹೇಳಿದ ದೇವರಾಜ ನಾಯಕ, ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಗುಲ್ಬರ್ಗ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡುವಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.  ಶಹಾಪುರ-ಯಾದಗಿರಿ ರಾಜ್ಯ ಹೆದ್ದಾರಿಯಲ್ಲಿ ಕೆಲ ತಿಂಗಳ ಹಿಂದಷ್ಟೇ ಕಾರು ಡಿಕ್ಕಿ ಹೊಡೆದು ಮೂವರು ಪಾದಚಾರಿಗಳು ಮೃತಪಟ್ಟ ಘಟನೆ ನಡೆದಿದ್ದು, ಇದೀಗ ಮತ್ತೊಂದು ದುರ್ಘಟನೆ ನಡೆದಿದೆ. ಈ ಬಗ್ಗೆ ಪೊಲೀಸ್ ಇಲಾಖೆಯ ಜೊತೆಗೆ ಚರ್ಚಿಸಿ, ವೇಗ ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.