ADVERTISEMENT

ಕೆರೆ ನೀರಲ್ಲಿ ಮುಳುಗಿದ ಕ್ಯಾತನಾಳ ಗ್ರಾಮ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 9:28 IST
Last Updated 14 ಅಕ್ಟೋಬರ್ 2017, 9:28 IST
ಯಾದಗಿರಿಯಲ್ಲಿ ಸಮೀಪದ ಕ್ಯಾತನಾಳ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಜೋರು ಮಳೆಯಿಂದಾಗಿ ಗ್ರಾಮಕ್ಕೆ ನುಗ್ಗಿರುವ ಕೆರೆ ನೀರು
ಯಾದಗಿರಿಯಲ್ಲಿ ಸಮೀಪದ ಕ್ಯಾತನಾಳ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಜೋರು ಮಳೆಯಿಂದಾಗಿ ಗ್ರಾಮಕ್ಕೆ ನುಗ್ಗಿರುವ ಕೆರೆ ನೀರು   

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಜೋರು ಮಳೆಗೆ ಕ್ಯಾತನಾಳ ಗ್ರಾಮ ಮುಳುಗಡೆ ಭೀತಿ ಎದುರಿಸುತ್ತಿದೆ. ಜನರು ನೀರಿನಲ್ಲೇ ಓಡಾಡುವಂತಹ ಸ್ಥಿತಿ ಉಂಟಾಗಿದೆ. ದನಕರುಗಳಿಗಾಗಿ ರೈತರು ಕಣಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಮೇವು ಸಹ ನೀರು ಪಾಲಾಗಿದೆ

2,200 ಜನಸಂಖ್ಯೆ ಹೊಂದಿರುವ ಕ್ಯಾತನಾಳ ಗ್ರಾಮದಲ್ಲಿ 270 ಮನೆಗಳಿವೆ. ಅವುಗಳಲ್ಲಿ ಈಗ 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮೂರು ಅಡಿ ಯಷ್ಟು ಸಂಗ್ರಹಗೊಂಡಿರುವ ನೀರಿನಲ್ಲೇ ಜನರು ಸಂಚರಿಸುವಂತಹ ಸಂಕಷ್ಟ ಎದುರಾಗಿದೆ. ಈ ಸ್ಥಿತಿ ಕಳೆದ ನಾಲ್ಕು ವರ್ಷಗಳಿಂದ ಇದ್ದರೂ, ಜಿಲ್ಲಾಡಳಿತ ಕೆರೆ ನೀರಿನಿಂದ ಊರನ್ನು ರಕ್ಷಿಸಲು ಮುಂದಾಗಿಲ್ಲ ಎಂದು ಗ್ರಾಮಸ್ಥರಾದ ಬಸವರಾಜ ದೇಸಾಯಿ, ಕಮಲ್ ಪಟೇಲ್, ಸಾಹೇಬ್ ಪಟೇಲ್ ದೂರಿದರು.

ಮಳೆಗಾಲ ಬಂದರೆ ಬರೀ ನರಕ: ನಾಲ್ಕು ವರ್ಷಗಳಿಂದ ಕ್ಯಾತನಾಳ ಗ್ರಾಮದ ಜನರಿಗೆ ಮಳೆಗಾಲ ಅಂದರೆ ಬರೀ ನರಕವಾಗಿದೆ. ಕೆರೆ ಕಾಲುವೆ ಒತ್ತುವರಿಯಾಗಿದ್ದು, ಕಾಲುವೆಯನ್ನು ಮುಚ್ಚಿಹಾಕಿರುವುದರಿಂದ ಕೆರೆ ನೀರು ಗ್ರಾಮದತ್ತ ಹರಿದು ಬರುತ್ತಿದೆ. ಒತ್ತುವರಿ ಆಗಿರುವ ಕೆರೆ ಕಾಲುವೆಯನ್ನು ತೆರವುಗೊಳಿಸಿ ಮುಳುಗಡೆ ಭೀತಿಯಿಂದ ಜನರನ್ನ ರಕ್ಷಿಸುವಂತೆ ಜಿಲ್ಲಾಡಳಿತಕ್ಕೆ, ಜನಪ್ರತಿನಿಧಿಗಳಿಗೆ ಮೊರೆ ಇಟ್ಟರೂ ಪ್ರಯೋಜನವಾಗಿಲ್ಲ.

ADVERTISEMENT

ಈಗ ನಿತ್ಯ ಮಳೆ ಸುರಿಯುತ್ತಿರುವುದು ಬದುಕು ನರಕಕ್ಕಿಂತ ಕಡೆಯಾಗಿದೆ’ ಎಂದು ಗ್ರಾಮಸ್ಥರಾದ ಭೀಮರಾಯ ಉಪ್ಪಾರ, ಶಂಕರ ಗಣಪೂರ, ಅಬ್ದುಲ್ ಘನೀಸಾಬ್, ಕಮಲ ಮಹಾದೇವಪ್ಪ, ಸಾಬಣ್ಣ ರಡ್ಡೆಪ್ಪ ಬೇಸರ ವ್ಯಕ್ತಪಡಿಸಿದರು.

ಸಾಂಕ್ರಾಮಿಕ ರೋಗ ಭೀತಿ: ಮಳೆಗಾಲ ಸುರಿಯಲು ಆರಂಭಿಸಿದಂದಿನಿಂದ ಕ್ಯಾತನಾಳದಲ್ಲಿ ಸಾಂಕ್ರಾಮಿಕ ರೋಗ ಭೀತಿ ಜನರನ್ನು ಕಾಡುತ್ತಿದೆ. ನೂರಾರು ಜನರು ಜ್ವರದಿಂದ ನರಳುತ್ತಿದ್ದಾರೆ ಎಂದು ಹೇಳಿದರು.

ಅಧಿಕಾರಿಗಳಿಂದ ಬೆದರಿಕೆ: ‘ಒತ್ತು ವರಿ ಆಗಿರುವ ಕೆರೆ ಕಾಲುವೆಯನ್ನು ತೆರವು ಗೊಳಿಸಿ ಗ್ರಾಮದಿಂದ ನೀರನ್ನು ಹೊರಕ್ಕೆ ಹರಿಸುವಂತೆ ಜನರು ಒತ್ತಾಯಿಸಿದರೆ ಶಹಾಪುರ ತಾಲ್ಲೂಕು ತಹಶೀಲ್ದಾರ್ ಅವರು ಗ್ರಾಮಸ್ಥರ ಮೇಲೆ ದೂರು ದಾಖಲಿಸಿ ಜೈಲಿಗೆ ಕಳುಹಿ ಸುತ್ತೇನೆ ಎಂದು ಬೆದರಿಕೆ ಹಾಕು ತ್ತಿದ್ದಾರೆ’ ಎಂಬುದಾಗಿ ಗ್ರಾಮಸ್ಥರು ದೂರಿದರು.

ಕೆರೆ ಕಾಲುವೆಯನ್ನು ಗ್ರಾಮದ ಪಟ್ಟಭದ್ರರು ಒತ್ತುವರಿ ಮಾಡಿದ್ದಾರೆ. ಕಾಲುವೆ ಮುಚ್ಚಿಹಾಕಿರುವುದರಿಂದ ಗ್ರಾಮಕ್ಕೆ ಪ್ರತಿವರ್ಷ ನೆರೆಭೀತಿ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಅಲವತ್ತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.