ಯಾದಗಿರಿ : ಸರ್ವ ಶಿಕ್ಷಣ ಅಭಿಯಾನದಡಿ 2012-12 ರ ವಿವಿಧ ಚಟುವಟಿಕೆಗಳಿಗಾಗಿ ರೂ.73.31 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಅನುಷ್ಠಾನ ಸಮಿತಿ ಅನುಮೋದನೆ ನೀಡಿದೆ.
ಮಂಗಳವಾರ ಸಮಿತಿ ಅಧ್ಯಕ್ಷೆಯಾಗಿರುವ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಸವರಾಜೇಶ್ವರಿ ತಂಗಡಗಿ ಅಧ್ಯಕ್ಷತೆಯಲ್ಲಿ ಜರುಗಿದ ಅನುಷ್ಠಾನ ಸಮಿತಿ ಸಭೆಯಲ್ಲಿ ಈ ಅನುಮೋದನೆ ನೀಡಲಾಯಿತು.
ಜಿಲ್ಲೆಯ ಪ್ರತಿ ಶಾಲೆಯಿಂದ ಡೈಸ್ ಆಧಾರಿತ (ಶಾಲಾ ಶೈಕ್ಷಣಿಕ ಮಾಹಿತಿ) ಹಾಗೂ ಮಕ್ಕಳ ಸಮೀಕ್ಷೆಯ ಮೂಲಕ ಮಾಹಿತಿ ಸಂಗ್ರಹಿಸಿ ಜಿಲ್ಲೆಯ 935 ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಅವಶ್ಯಕತೆಗೆ ಅನುಗುಣವಾಗಿ ಈ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಇನಾಯತುರ್ ರೆಹಮಾನ್ ಶಿಂಧೆ ತಿಳಿಸಿದರು.
ಸರ್ವ ಶಿಕ್ಷಣ ಅಭಿಯಾನದ ಚಟುವಟಿಕೆಗಾಗಿ ರೂ. 69.91ಕೋಟಿ, ಹೆಣ್ಣು ಮಕ್ಕಳ ಶಿಕ್ಷಣ ಕಾರ್ಯಕ್ರಮಗಳಾದ ಎನ್‌ಪಿಇಜಿಇಎಲ್‌ಗೆ ರೂ. 49 ಲಕ್ಷ, ಕಸ್ತೂರಬಾ ವಸತಿ ಶಾಲೆಗಳಿಗೆ ರೂ.2.90 ಕೋಟಿ ಅನುದಾನ ಮೀಸಲಿಡಲಾಗಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳ ಕಾರ್ಯಕ್ರಮಕ್ಕಾಗಿ ರೂ.2.18 ಕೋಟಿ, ಪಠ್ಯ ಪುಸ್ತಕಕ್ಕಾಗಿ ರೂ.1.82 ಕೋಟಿ, ಸಮವಸ್ತ್ರಕ್ಕಾಗಿ ರೂ. 2.46 ಕೋಟಿ, ಬೋಧನಾ ಕಲಿಕೆ ಸಾಮಗ್ರಿಗಾಗಿ ರೂ.9 ಲಕ್ಷ, ಎಸ್‌ಎಸ್‌ಎ, ಟಿಜಿಟಿ ಶಿಕ್ಷಕರ ವೇತನಕ್ಕಾಗಿ ರೂ.26.66 ಕೋಟಿ, ತರಬೇತಿಗೆ ರೂ.1.67 ಕೋಟಿ, ಶಾಲಾ ನಿರ್ವಹಣೆಗೆ ರೂ.1.03 ಕೋಟಿ, ಸಮನ್ವಯ ಶಿಕ್ಷಣಕ್ಕೆ ರೂ.84 ಲಕ್ಷ, ಶಾಲೆಗಳ ಸಿವಿಲ್ ಕಾಮಗಾರಿ ರೂ.19.64 ಕೋಟಿ, ಅನುದಾನಿತ ಶಾಲೆಗಳ ಮಕ್ಕಳ ಶುಲ್ಕ ಮರುಪಾವತಿಗೆ ರೂ.6.12 ಕೋಟಿ, ಸಮುದಾಯ ಅಭಿವೃದ್ಧಿಗೆ ರೂ.30 ಲಕ್ಷ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುದಾನ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.
ಕಳೆದ 5-6 ವರ್ಷಗಳಿಂದ ಜಿಲ್ಲೆಯ ಅನೇಕ ಶಾಲಾ ಕಟ್ಟಡಗಳು ನೆನೆಗುದಿಗೆ ಬಿದ್ದಿವೆ. ಇನ್ನು ಕೆಲವು ಕಟ್ಟಡಗಳ ಕಾಮಗಾರಿ ಪ್ರಾರಂಭವಾಗಿಲ್ಲ. ಇದರಿಂದಾಗಿ ಸರ್ಕಾರ ಒದಗಿಸುವ ಅನುದಾನ ಬಳಕೆಯಾಗುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಗೌಡ ಮರಕಲ್ ಅಸಮಾಧಾನ ವ್ಯಕ್ತಪಡಿಸಿದರು.
ಕೆಲವು ಕಡೆ ಸ್ಥಳದ ಕೊರತೆಯಿಂದ ಕಾಮಗಾರಿಗಳು ಪ್ರಾರಂಭವಾಗಿಲ್ಲ. ಇನ್ನು ಕೆಲವು ಕಟ್ಟಡಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಶೀಘ್ರದಲ್ಲಿಯೇ ಕೆಲಸ ಪ್ರಾರಂಭವಾಗುತ್ತವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಸರ್ವ ಶಿಕ್ಷಣ ಅಭಿಯಾನದಡಿ ಕಳೆದ ವರ್ಷದ ರೂ 62.61 ಕೋಟಿಯಲ್ಲಿ ಇದುವರೆಗೆ ರೂ. 42.36 ಕೋಟಿ ಮಾತ್ರ ಬಿಡುಗಡೆಯಾಗಿದೆ. ಸಿವಿಲ್ ಕಾಮಗಾರಿಗಳಿಗಾಗಿ ಇನ್ನು ರೂ. 20 ಕೋಟಿ ಬಿಡುಗಡೆ ಆಗಬೇಕಿದೆ.
ಶೀಘ್ರದಲ್ಲಿಯೇ ಈ ಅನುದಾನ ಬಿಡುಗಡೆ ಆಗಲಿದೆ. ಮಾರ್ಚ್ ಅಂತ್ಯದೊಳಗೆ ಈ ಅನುದಾನ ಖರ್ಚಾಗದೇ ಇದ್ದರೂ, ಇಲಾಖೆಯಲ್ಲಿಯೇ ಉಳಿಯಲಿದೆ ಎಂದು ಶಿಂಧೆ ಸ್ಪಷ್ಟಪಡಿಸಿದರು.
ಶೈಕ್ಷಣಿಕ ಪ್ರವಾಸದಲ್ಲಿ ಅವ್ಯವಹಾರ: ಆಕ್ರೋಶ:
ಈ ವರ್ಷ ಮಕ್ಕಳ ಶೈಕ್ಷಣಿಕ ಪ್ರವಾಸದಲ್ಲಿ ಅವ್ಯವಹಾರ ಆಗಿರುವುದಕ್ಕೆ ಸಮಿತಿ ಸದಸ್ಯ ಸಿದ್ಧನಗೌಡ ಪೊಲೀಸ್‌ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಒಂದು ಮಗುವಿಗೆ ರೂ. 500 ರಂತೆ ಎರಡು ದಿನ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು ಎಂಬ ಅಧಿಕಾರಿಗಳ ಉತ್ತರದಿಂದ ಸಿಟ್ಟಿಗೇರಿದ ಅವರು, ಮಕ್ಕಳಿಗೆ ದಾಸೋಹದಲ್ಲಿ ಊಟ ಮಾಡಿಸಿ ಮತ್ತು ಛತ್ರದಲ್ಲಿ ಮಲಗಿಸಿ ಅವರ ಹೆಸರಿನಲ್ಲಿ ಹಣ ಎತ್ತಿಹಾಕಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಇದೇ ರೀತಿ ಶಿಕ್ಷಕರಿಗೆ ವಿವಿಧ ತರಬೇತಿಗಳು ವಸತಿ ಸಹಿತವಾಗಿದ್ದು, ಅವರಿಗೆ ದಿನಕ್ಕೆ ರೂ. 200 ಕೊಡಬೇಕಿತ್ತು. ಆದರೆ ವಸತಿರಹಿತ ತರಬೇತಿ ನಡೆಸಿ, ಕೇವಲ ರೂ. 70 ನೀಡಲಾಗಿದೆ. ಈ ಎರಡೂ ವಿಷಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ವಾರದಲ್ಲಿ ಸಲ್ಲಿಸುವಂತೆ ತಾಕೀತು ಮಾಡಿದರು.
ಇಲಾಖೆಯ ಕೆಲ ವಿಷಯಗಳನ್ನು ಸದಸ್ಯರು ಗಂಭೀರವಾಗಿ ಚರ್ಚೆಗೆ ಮುಂದಾದಾಗ ಕೆಲ ಕಾಲ ಸಭೆಯಲ್ಲಿದ್ದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಬ್ಬಿಬ್ಬಾದರು. ಚಿಕ್ಕ ಜಿಲ್ಲೆಯಾಗಿದೆ.
ಸರ್ಕಾರದಿಂದ ಬರುವ ಅನುದಾನದ ಸದ್ಬಳಕೆ ಮಾಡಿಕೊಂಡು ಶಿಕ್ಷಣದ ಪ್ರಗತಿಗೆ ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಸವರಾಜೇಶ್ವರಿ ತಂಗಡಗಿಯವರು ಸಲಹೆ ಮಾಡಿದರು.
ಸದಸ್ಯೆ ಮಲ್ಲಮ್ಮ ಬನ್ನಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸಣ್ಣ ಮಹಾಂತಗೌಡರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಸಿ, ಸಿಆರ್‌ಸಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.