ADVERTISEMENT

ಖಾತರಿ ಅಕ್ರಮ: ತನಿಖಾ ತಂಡ ಪರಿಶೀಲನೆ

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 8:29 IST
Last Updated 12 ಡಿಸೆಂಬರ್ 2013, 8:29 IST

ಶಹಾಪುರ:  ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ವಿಶೇಷ ಆಯುಕ್ತ ಪ್ರಭಾಷ್‌ ಚಂದ್ರ ರೇ ಅವರನ್ನು ಒಳ­ಗೊಂಡ ವಿಶೇಷ ತಂಡವು ಬುಧವಾರ ತಾಲ್ಲೂಕಿನ ಹೊಸಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಯ ಬಗ್ಗೆ ಪರಿಶೀಲನೆ ನಡೆಸಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ  ಕೈಗೆತ್ತಿಕೊಳ್ಳಲಾದ ಚೆಕ್‌ ಡ್ಯಾಂ, ಬದು ನಿರ್ಮಾಣ, ರಾಶಿ ಕಣ, ಜಲಾನಯನ ಇಲಾಖೆಯ ಅಡಿಯಲ್ಲಿ ಕಾಮಗಾರಿ ನಿರ್ವಹಿಸಿದ ಬಗ್ಗೆ ತನಿಖಾ ತಂಡ ದಾಖಲೆಗಳನ್ನು ಕಲೆ ಹಾಕಿ, ದಾಖಲೆಯ ಪ್ರಕಾರ ನಿರ್ವಹಿಸಿದ ಕೆಲಸದ ಬಗ್ಗೆ ಪರಿಶೀಲನೆ ನಡೆಸಿತು. ಕಾಮಗಾರಿ ನಿರ್ವಹಿಸಿದ್ದಾರೆ ಅಥವಾ ಇಲ್ಲ ಎಂಬುವುದನ್ನು ನಾವು ಏನು ಹೇಳುವುದಿಲ್ಲ. ಭೇಟಿ ನೀಡಿದ ಸ್ಥಳದ ಭಾವಚಿತ್ರ ಹಾಗೂ ಇನ್ನಿತರ ಅಗತ್ಯವಾದ ದಾಖಲೆಗಳನ್ನು ತೆಗೆದು­ಕೊಂಡು ಸಮಗ್ರವಾದ ವರದಿಯನ್ನು ಸರ್ಕಾರಕ್ಕೆ ನೀಡುವುದು ನಮ್ಮ ಕೆಲಸ ಎಂದು ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಾತರಿ ಯೋಜನೆಯಲ್ಲಿ ವ್ಯಾಪಕ ಅವ್ಯವಹಾರ ನಡೆದ ಬಗ್ಗೆ ತನಿಖೆಗೆ ಸ್ವತಃ ಶಾಸಕ ಗುರು ಪಾಟೀಲ್‌ ಶಿರವಾಳ ಸರ್ಕಾರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ತಂಡ ಬಂದಿದೆ. ತಾಲ್ಲೂಕಿನ ಹೊಸಕೇರಾ, ಉಕ್ಕಿನಾಳ, ಚಾಮನಾಳ, ಹೋತಪೇಟ ಗ್ರಾಮ ಪಂಚಾಯಿತಿಗಳಿಗೆ ತಂಡ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಲಿದೆ.

‘ಹೊಸಕೇರಾ ಗ್ರಾಮ ಪಂಚಾಯ್ತಿಗೆ ಬಂದಾಗ ಕೆಲವರು ತಂಡದ ಮುಂದೆ ಸಮಸ್ಯೆ ಹೇಳುತ್ತಿದ್ದಂತೆ ಇನ್ನೂ ಕೆಲವರು ಆಕ್ಷೇಪಣೆ ನಡೆಸಿದ್ದು, ರಾಜಕೀಯ ಪಕ್ಷದ ಕಾರ್ಯಕರ್ತರ ನಡುವೆ ಜಟಾಪಟಿಯು ನಡೆಯಿತು’ ಎಂದು ಸ್ಥಳದಲ್ಲಿ ಹಾಜರಿದ್ದ ಪ್ರತ್ಯೇಕ್ಷದರ್ಶಿ­ಯೊಬ್ಬರು ತಿಳಿಸಿದ್ದಾರೆ.

ತಂಡವು ಇನ್ನೂ ಎರಡು ದಿನ ತಾಲ್ಲೂಕಿನಲ್ಲಿ ಉಳಿದುಕೊಂಡು ಕಾಮಗಾರಿಯನ್ನು ಪರಿಶೀಲನೆ ಜೊತೆಗೆ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿದೆ.

ತಂಡದ ಜೊತೆಯಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ನರಸಿಂಹ ಮುತಾಲಿಕ್‌, ಜಿಲ್ಲಾ ಪಂಚಾಯ್ತಿ ಎಂಜನಿಯರ್‌ ಕೆ.ಭೀಮರಾಯ, ಗ್ರಾಮ ಪಂಚಾಯ್ತಿ ಸಿಬ್ಬಂದಿ ಹಾಗೂ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.