ADVERTISEMENT

ಗುಡಿಯೊಳಗೆ ಆಲದಮರ

​ಪ್ರಜಾವಾಣಿ ವಾರ್ತೆ
Published 25 ಜನವರಿ 2013, 6:35 IST
Last Updated 25 ಜನವರಿ 2013, 6:35 IST
ಯಾದಗಿರಿ ಸಮೀಪದ ವಡಗೇರಾದ ಮುಖ್ಯ ದ್ವಾರದ ಬಳಿ ಬಸವಣ್ಣನ ದೇವಾಲಯದೊಳಗೆ ಬೆಳೆದ ಆಲದ ಮರ
ಯಾದಗಿರಿ ಸಮೀಪದ ವಡಗೇರಾದ ಮುಖ್ಯ ದ್ವಾರದ ಬಳಿ ಬಸವಣ್ಣನ ದೇವಾಲಯದೊಳಗೆ ಬೆಳೆದ ಆಲದ ಮರ   

ಯಾದಗಿರಿ: ನಿಸರ್ಗದ ಸೃಷ್ಟಿ ವಿಶಿಷ್ಟವಾದುದು. ತಾಂತ್ರಿಕ ಯುಗದಲ್ಲಿಯೂ ಮನುಷ್ಯ ಮೂಗಿನ ಮೇಲೆ ಬೆರಳಿಡುವಂತಹ ವೈಶಿಷ್ಟಗಳು ಕಣ್ಣಿಗೆ ಕಟ್ಟುತ್ತಿವೆ. ಮರಗಳಿಂದ ಹಾಲು ಬರುವುದು, ಬೇವಿನ ಎಲೆಗಳು ಸಿಹಿಯಾಗಿರುವುದು, ಒಂದು ಗಿಡದಲ್ಲಿ ಬೇರೊಂದು ಗಿಡ ಬೆಳೆದಿರುವುದು ಇಂಥದ್ದರಲ್ಲಿ ಕೆಲವು. ಆದರೆ ಗುಡಿಯ ಒಳಗಿನಿಂದ ಬೆಳೆದ ಆಲದ ಮರವೊಂದು ಇದೀಗ ಎಲ್ಲ ಗಮನ ಸೆಳೆಯುತ್ತಿದೆ.

ಈ ಗಿಡ ಸಮೀಪದ ವಡಗೇರಾದ ಮುಖ್ಯ ದ್ವಾರದಿಂದ ಏಳೆಂಟು ಹೆಜ್ಜೆಗಳಲ್ಲಿಯೇ ಸಿಗುತ್ತದೆ. ಬಸವಣ್ಣನ ಗುಡಿಯಿದ್ದು, ಈ ದೇವಾಲಯದ ಎಡ ಬಲಗಳಲ್ಲಿ ವೀರಗಲ್ಲು ಇವೆ. ಅತಿ ಚಿಕ್ಕದಾದ ದ್ವಾರ ಬಾಗಿಲು ಹೊಂದಿರುವ ಈ ದೇವಾಲಯ ಬಹಳ ಹಳೆಯದು. ಯಾರು ಕಟ್ಟಿಸಿದರು? ಯಾಕೆ ಕಟ್ಟಿಸಿದರು ಎಂಬ ಮಾಹಿತಿ ಸಿಗುವುದಿಲ್ಲ. ಇದು ಪುರಾತನ ದೇವಾಲಯ. ಕಿಡಿಗೇಡಿಗಳು ಗುಡಿಯ ಒಳಗಿರುವ ಬಸವಣ್ಣನ ಮೂರ್ತಿ ಕಳವು ಮಾಡಿದ್ದಾರೆ. ಈ ಆಲದ ಮರವು ಅಂದಿನಿಂದಲೇ ಇದೆ ಎಂದು ಚಂದ್ರಶೇಖರಯ್ಯ ಸ್ಥಾವರಮಠ ಹೇಳುತ್ತಾರೆ.

ಬೃಹದಾಕಾರವಾಗಿ ಬೆಳೆದ ಈ ಆಲದ ಮರದ ಕಾಂಡವು ದೇವಾಲಯದ ಗರ್ಭಗುಡಿಯ ಒಳಗೆ ಇದ್ದರೆ, ದೇಗುಲದ ಗೋಪುರದ ಮೇಲಿಂದ ಅದರ ಟೊಂಗೆಗಳು ಹಾಗೂ ರೆಂಬೆಗಳು ಹೊರಗಡೆ ಬಂದಿವೆ. ಆದರೆ ದೇವಾಲಯಕ್ಕೆ ಯಾವುದೇ ಧಕ್ಕೆಯಾಗಿಲ್ಲ. ದೇವಾಲಯದ ಹಿಂದಿನ ಭಾಗ ಸ್ವಲ್ಪ ಬಿರುಕು ಬಿಟ್ಟಿದೆ.

ಈ ಭಾಗದ ಸಂಗಮದಲ್ಲಿ ಸಂಗಮನಾಥ ದೇವಾಲಯ, ಗೂಗಲ್‌ನಲ್ಲಿ ಅಲ್ಲಮಪ್ರಭು ದೇವಾಲಯ ಹಾಗೂ ಇನ್ನು ಅನೇಕ ದೇವಾಲಯಗಳು ಇವೆ. ದೇವಾಲಯಗಳ ಆವರಣದಲ್ಲಿ ಅನೇಕ ಗಿಡ ಮರಗಳು ಇವೆ. ಆದರೆ ಇಂತಹ ಒಂದು ಸೋಜಿಗ ಯಾವ ದೇವಾಲಯದ ಆವರಣದಲ್ಲೂ ಇಲ್ಲ.

ಗ್ರಾಮಸ್ಥರು ಹಾಗೂ ಈ ಗ್ರಾಮಕ್ಕೆ ತಮ್ಮ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ಈ ಆಲದ ಮರ ದೇವಾಲಯದಲ್ಲಿ ಬೆಳೆದಿರುವುದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸುತಿದ್ದಾರೆ.

ಆದರೆ ಈ ದೇವಾಲಯ ಹಾಗೂ ಈ ಆಲದ ಮರ ಸ್ಥಳೀಯ ಜನರಿಂದ ನಿರ್ಲಕ್ಷಕ್ಕೆ ಒಳಗಾಗಿದೆ. ಇತ್ತ ಕಡೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ, ಇತಿಹಾಸದ ಬಗ್ಗೆ ಅಭಿರುಚಿವುಳ್ಳವರು ಗಮನ ಹರಿಸುವುದು ಅವಶ್ಯ ಎಂದು ಕರವೇ ಹೋಬಳಿ ಘಟಕದ ಅಧ್ಯಕ್ಷ ಶಿವುಕುಮಾರ ಕೊಂಕಲ್ ಹೇಳುತ್ತಾರೆ.

ಇಂತಹ ಒಂದು ವಿಸ್ಮಯವನ್ನು ಜೋಪಾನ ಮಾಡಿ ಮುಂಬರುವ ಜನಾಂಗಕ್ಕಾಗಿ ಇಡುವುದು ಪ್ರತಿಯೊಬ್ಬರ ಕರ್ತವ್ಯ. ಆ ನಿಟ್ಟಿನಲ್ಲಿ ಈ ದೇವಾಲಯದ ರಕ್ಷಣೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ನಾಗರಿಕರ ಅಭಿಲಾಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.