ADVERTISEMENT

ಚೆಕ್‌ಪೋಸ್ಟ್‌ಗಳಲ್ಲಿ ಕಣ್ಗಾವಲಿಗೆ ಸೂಚನೆ

ವಾಹನಗಳ ತಡೆದು ತಪಾಸಣೆ ನಡೆಸಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 12:39 IST
Last Updated 9 ಏಪ್ರಿಲ್ 2018, 12:39 IST

ಯಾದಗಿರಿ: ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಅಕ್ರಮಗಳ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಭಾನುವಾರ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಮೊದಲು ನಗರದ ಹೊರವಲಯದ ಹತ್ತಿಕುಣಿ ಕ್ರಾಸ್(ಬೈಪಾಸ್ ರಸ್ತೆ)ನ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ, ಲಾಗ್ ಪುಸ್ತಕ ಪರಿಶೀಲಿಸಿದರು. ಅಕ್ರಮ ಹಣ ಸಾಗಣೆ ಮೇಲೆ ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಾಹನಗಳ ತಪಾಸಣೆ: ರಸ್ತೆ ಮಾರ್ಗಗಳಲ್ಲಿ ತೆರಳುತ್ತಿದ್ದ ವಾಹನಗಳನ್ನು ತಡೆದು ಸ್ವತಃ ಜಿಲ್ಲಾಧಿಕಾರಿಗಳೇ ತಪಾಸಣೆ ನಡೆಸಿದರು.ನಂತರ ಮಾತನಾಡಿದ ಜಿಲ್ಲಾಧಿಕಾರಿ,‘ ಜಿಲ್ಲೆಯಲ್ಲಿ 21 ಚೆಕ್‌ಪೋಸ್ಟ್ ತೆರೆಯಲಾಗಿದ್ದು( ಸ್ಥಾಯಿ ಕಣ್ಗಾವಲು ತಂಡ), ಈ ಪೈಕಿ ಮೂರು ಅಂತರರಾಜ್ಯ (ತೆಲಂಗಾಣ) ಚೆಕ್‌ಪೋಸ್ಟ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಚೆಕ್‌ಪೋಸ್ಟ್ ಇವೆ. ಈ ತಂಡದಲ್ಲಿ ಪಿಡಿಒ, ಗ್ರಾಮ ಲೆಕ್ಕಿಗ, ಪೊಲೀಸ್ ಸಿಬ್ಬಂದಿ ಹಾಗೂ ಕ್ಯಾಮರಾಮನ್ ಇದ್ದಾರೆ. ವಾಹನಗಳ ತಪಾಸಣೆ ಮಾಡಿ, ದಾಖಲೆ ಇಲ್ಲದೆ ಕೊಂಡೊಯ್ಯುವ ₹50 ಸಾವಿರಕ್ಕಿಂತ ಹೆಚ್ಚು ನಗದು ವಶಪಡಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.‘ಇದುವರೆಗೂ 300 ಲೀಟರ್ ಮದ್ಯ ವಶಪಡಿಸಿಕೊಂಡು 8 ವಾಹನ ಜಪ್ತಿ ಮಾಡಿ,10 ಪ್ರಕರಣ ದಾಖಲಿಸಿ 8 ಮಂದಿಯನ್ನು ಬಂಧಿಸಲಾಗಿದೆ. ಹಾಗೆಯೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹1.96 ಲಕ್ಷ ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ADVERTISEMENT

ಯರಗೋಳದಲ್ಲಿ ಪರಿಶೀಲನೆ: ಯರಗೋಳದಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್ ತೆರಳಿದ ಜಿಲ್ಲಾಧಿಕಾರಿ, ಅಲ್ಲಿನ ಲಾಗ್ ಪುಸ್ತಕ ಪರಿಶೀಲಿಸಿದರು. ವಾಹನ ತಪಾಸಣೆ ಕುರಿತು ಅಲ್ಲಿನ ಸಿಬ್ಬಂದಿಯಿಂದ ಮಾಹಿತಿ ಪಡೆದರು.ಜಿಲ್ಲಾ ನೀತಿ ಸಂಹಿತೆ ನೋಡಲ್ ಅಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಇವಿಎಂ ಮತ್ತು ವಿವಿಪ್ಯಾಟ್ ನೋಡಲ್ ಅಧಿಕಾರಿ ಸಂಗಪ್ಪ ಉಪಾಸೆ, ತಹಶೀಲ್ದಾರ್ ಮಲ್ಲೇಶ್ ತಂಗಾ ಇದ್ದರು.

**

ಚೆಕ್‌ಪೋಸ್ಟ್‌ ಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಮತಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಂತೆ ಇಂದು ಚೆಕ್‌ಪೋಸ್ಟ್ ಗಳಲ್ಲಿಯ ಸಿಬ್ಬಂದಿ ಕಾರ್ಯವೈಖರಿ ಪರಿಶೀಲಿಸಲಾಗಿದೆ – ಜೆ.ಮಂಜುನಾಥ, ಜಿಲ್ಲಾಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.