ADVERTISEMENT

ಜಿಲ್ಲಾ ನ್ಯಾಯಾಧೀಶರ ಸ್ಥಾನ ಖಾಲಿ ಕಕ್ಷಿದಾರರ ಪರದಾಟ...!

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 8:55 IST
Last Updated 22 ಡಿಸೆಂಬರ್ 2012, 8:55 IST

ಶಹಾಪುರ: ಯಾದಗಿರಿ ಜಿಲ್ಲಾ ಸೇಷನ್ಸ್ ಕೋರ್ಟ್‌ನ ನ್ಯಾಯಾಧೀಶರಾಗಿದ್ದ ಹಂಚಾಟೆ ಸಂಜೀವಕುಮಾರ ವರ್ಗಾವಣೆಗೊಂಡು 40 ದಿನಗಳು ಗತಿಸಿದರು ಅವರ ಸ್ಥಾನಕ್ಕೆ ಬೇರೋಬ್ಬ ನ್ಯಾಯಾಧೀಶರು ಆಗಮಿಸದೆ ಇರುವುದರಿಂದ ಕಕ್ಷಿದಾರರು ಪರದಾಡುವಂತಾಗಿದೆ ಎಂದು ತಿಳಿದು ಬಂದಿದೆ.

2012 ನವಂಬರ 9ರಂದು  ಜಿಲ್ಲಾ ಸೇಷನ್ಸ್ ಕೋರ್ಟ್‌ನ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ ವರ್ಗಾವಣೆಗೊಂಡು ಚಿತ್ರದುರ್ಗ ಕೋರ್ಟ್‌ಗೆ ತೆರಳಿದರು. ಅವರ ಸ್ಥಾನಕ್ಕೆ ಮೈಸೂರಿನಿಂದ ಯಾದಗಿರಿ ಕೋರ್ಟ್‌ಗೆ  ನ್ಯಾಯಾಧೀಶ ಆರ್.ರೇಣುಕಾಪ್ರಸಾದ ಆಗಮಿಸಬೇಕಾಗಿತ್ತು. ಅನಿವಾರ್ಯ ಕಾರಣದಿಂದ ಅವರು ಆಗಮಿಸಲಿಲ್ಲ. ಅವರ ಸ್ಥಾನದಲ್ಲಿ ಬೆಂಗಳೂರಿನಿಂದ ಬಿ.ಎ.ಅಂಗಡಿ ಆಗಮಿಸುತ್ತಾರೆ ಎಂದು ತಿಳಿದು ಬಂದಿದೆ.

ಜಿಲ್ಲಾ ಸೇಷನ್ಸ್ ಕೋರ್ಟ್‌ನಲ್ಲಿ  ನಿರೀಕ್ಷಣಾ ಜಾಮೀನು ಅರ್ಜಿ, ನ್ಯಾಯಾಂಗ ಬಂಧನದಲ್ಲಿರುವ ಜಾಮೀನು ಅರ್ಜಿಯ ವಿಚಾರಣೆ ಹೀಗೆ ಹಲವಾರು ಅರ್ಜಿಗಳು ವಿಲೇವಾರಿ ಆಗದೆ ಉಳಿದುಕೊಂಡಿದ್ದು ನ್ಯಾಯಕೋರಿ ಬರುವ ಕ್ಷಕಿದಾರರು ಪರದಾಡುವಂತಾಗಿದೆ.

ನ್ಯಾಯಾಂಗ ಬಂಧನದಲ್ಲಿರುವ ಆರೋಪಿತರು ಮತ್ತಷ್ಟು  ಬವಣೆ ಎದುರಿಸುವಂತಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪ ಎದುರಿಸುತ್ತಿರುವ ಆರೋಪಿತರು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸದೆ ಪರದಾಡುವಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬೇತಾಳದಂತೆ ಕಾಡುತ್ತಿದ್ದಾರೆ.

ಅಲಿಖಿತವಾಗಿ ಇಂತಿಷ್ಟು ಹಣ ನೀಡುವಂತೆ ಒತ್ತಡ ಹಾಕಿ ವಸೂಲಿ ಮಾಡುತ್ತಿದ್ದಾರೆ ಎಂದು ತೀವ್ರ ತೊಂದರೆ ಎದುರಿಸುತ್ತಿರುವ ಆರೋಪಿಯೊಬ್ಬರು ತಿಳಿಸಿದ್ದಾರೆ. ವರ್ಗಾವಣೆಗೊಂಡಿರುವ ಜಿಲ್ಲಾ ಕೋರ್ಟ್‌ನ ನ್ಯಾಯಾಧೀಶರು ತ್ವರಿತವಾಗಿ ಆಗಮಿಸಬೇಕೆಂದು ಶಹಾಪುರ ನೂತನ ವಕೀಲರ ಪರಿಷತ್ ಅಧ್ಯಕ್ಷ ಶಿವಶರಣ ಹೋತಪೇಟ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.