ADVERTISEMENT

ಜಿಲ್ಲೆಯಲ್ಲಿ ಸಂಭ್ರಮದ ಎಳ್ಳಮಾವಾಸ್ಯೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2017, 6:19 IST
Last Updated 19 ಡಿಸೆಂಬರ್ 2017, 6:19 IST

ಸುರಪುರ: ರೈತರ ಪಾಲಿಗೆ ದೊಡ್ಡ ಹಬ್ಬವೆಂದೇ ಕರೆಯಲಾಗುವ ಎಳ್ಳಮಾ ವಾಸ್ಯೆಯನ್ನು ಜಿಲ್ಲೆ ಮತ್ತು ತಾಲ್ಲೂಕಿನ ರೈತರು ಸಂಭ್ರಮದಿಂದ ಆಚರಿಸಿದರು. ಬೆಳಿಗ್ಗೆಯಿಂದಲೇ ರೈತ ಮಹಿಳೆಯರು ಹಬ್ಬದ ತಯಾರಿಯಲ್ಲಿ ತೊಡಗಿದ್ದರು. ಕೆಲ ಗ್ರಾಮಗಳಲ್ಲಿ ರೈತರು ಮತ್ತು ಕುಟುಂಬಸ್ಥರು ಹೊಸಬಟ್ಟೆಗಳನ್ನು ಧರಿಸಿ ಚಕ್ಕಡಿಗಳಲ್ಲಿ ತಮ್ಮ ಹೊಲಗಳಿಗೆ ತೆರಳಿದರು. ಹೊಲದ ಮಧ್ಯಭಾಗದಲ್ಲಿ ಐದು ಕಲ್ಲುಗಳನ್ನು ಇಟ್ಟು ಪೂಜೆ ಸಲ್ಲಿಸಿ, ನೈವೇದ್ಯ

ಅರ್ಪಿಸಿದರು. ನಂತರ ಭೂತಾಯಿಗೆ ಚರಗ ಚೆಲ್ಲಿದರು. ಮನೆಯಿಂದ ತಂದಿದ್ದ ಹೋಳಿಗೆ ಹೂರಣ ಕಡಬು, ಎಳ್ಳಚ್ಚಿದ ಜೋಳ ಮತ್ತು ಸಜ್ಜೆಯ ರೊಟ್ಟಿ, ಮೆಟಗಿ ಉಸುಳಿ, ಎಣ್ಣಿ ಬದನೆಕಾಯಿ, ಬಾನಾ ಊಟ ಸವಿದರು. ಕೆಲವರು

ಆಪ್ತರು, ಗೆಳೆಯರನ್ನು ಹೊಲಕ್ಕೆ ಕರೆದು ಕೊಂಡು ಹೋಗಿ ಕುಟುಂಬದವರೊಂದಿಗೆ ಸಹಪಂಕ್ತಿ ಭೋಜನ ಸವಿದರು. ‘ತಾಲ್ಲೂಕಿನ ಬಹುತೇಕ ಕೃಷಿಭೂಮಿ ನೀರಾವರಿಗೆ ಒಳಪಟ್ಟಿದ್ದರಿಂದ ಬಿಳಿಜೋಳ ಬಿತ್ತುವುದು ಕಡಿಮೆಯಾಗಿದೆ. ವಿಶೇಷವಾಗಿ ನೀರಾವರಿ ವಂಚಿತ ಪ್ರದೇಶಗಳಲ್ಲಿ ಮಾತ್ರ ಈ ಸಂಭ್ರಮ ಜೀವಂತ ಉಳಿದಿದೆ. ಹೀಗಾಗಿ ಎಳ್ಳಮಾವಾಸ್ಯೆಯ ಸಂಭ್ರಮ ದಶಕಗಳ ಹಿಂದಿನ ಹೊಳಪು ಕಳೆದುಕೊಂಡಿದೆ’ ಎಂದು ರೈತರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.