ADVERTISEMENT

ಡೆಂಗೆ ಶಂಕೆ: ಇಬ್ಬರು ಬಾಲಕಿಯರ ಸಾವು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 10:20 IST
Last Updated 12 ಅಕ್ಟೋಬರ್ 2012, 10:20 IST

ಯಾದಗಿರಿ: ಜಿಲ್ಲೆಯಾದ್ಯಂತ ಡೆಂಗೆ ಜ್ವರ ಉಲ್ಬಣಿಸುತ್ತಿದ್ದು, ತಾಲ್ಲೂಕಿನ ಯಡ್ಡಳ್ಳಿ ಗ್ರಾಮದ ಕುಂಟುಂಬ ಒಂದರಲ್ಲಿಯೇ ಶಂಕಿತ ಡೆಂಗೆ ಜ್ವರದಿಂದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇದರಿಂದಾಗಿ ಗ್ರಾಮದ ಜನತೆಯಲ್ಲಿ ಆತಂಕ ಮನೆ ಮಾಡಿದೆ. 

ಗ್ರಾಮದ ಶರಣಪ್ಪ ಮತ್ತು ಆತನ ಸಹೋದರ ಬುಗ್ಗಪ್ಪನ ಮಕ್ಕಳಾದ ಅಂಕಿತಾ (4), ಹರ್ಷಿತಾ (5) ಡೆಂಗೆ ಜ್ವರಕ್ಕೆ ತುತ್ತಾಗಿದ್ದು, ಕಳೆದ ಮಂಗಳವಾರ ಅಂಕಿತಾ ಎಂಬ ಮಗು ಮೃತಪಟ್ಟಿತ್ತು. ಗುರುವಾರ ಬೆಳಗಿನ ಜಾವ ಹರ್ಷಿತಾ ಮೃತಪಟ್ಟಿದ್ದಾಳೆ. ಅಲ್ಲದೇ ಇದೇ ಕುಟುಂಬದಲ್ಲಿನ ಒಂದೂವರೆ ವರ್ಷದ ಬಿಂದುಶ್ರೀ ಎಂಬ ಮಗುವಿಗೂ ವಿಚಿತ್ರ ಜ್ವರ ಕಾಣಿಸಿಕೊಂಡಿದ್ದು, ಡೆಂಗೆ ಶಂಕೆ ವ್ಯಕ್ತವಾಗುತ್ತಿದೆ.

ಗ್ರಾಮದಲ್ಲಿ ಶರಣಪ್ಪ ನಾಟೇಕಾರ್ ಕುಟುಂಬ ಕಳೆದ ಆರು ತಿಂಗಳ ಹಿಂದಷ್ಟೇ ಕೂಲಿ ಅರಸಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಗೆ ಗುಳೆ ಹೋಗಿದ್ದರು. ಒಂದು ವಾರದ ಹಿಂದೆಯೇ ಹರ್ಷಿತಾ ಎಂಬ ಮಗುವಿಗೆ ಜ್ವರ ಕಾಣಿಸಿಕೊಂಡಾಗ ಬಳ್ಳಾರಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಅದು ಫಲಕಾರಿಯಾಗದೇ ಕಳೆದ ಮಂಗಳವಾರ ಮಗು ಸಾವನ್ನಪಿದೆ. ಆದರೆ ಗುರುವಾರ ಬೆಳಗಿನ ಜಾವ ಅಂಕಿತ ಎಂಬ ಮಗು ವಾಂತಿಯಾಗಿ ಮೃತಪಟ್ಟಿರುವುದರಿಂದ ಕುಟುಂಬ ವರ್ಗಕ್ಕೆ ಬರ ಸಿಡಿಲು ಬಡಿದಂತಾಗಿದೆ.

ಇದೇ ಕುಟುಂಬದ ಶರಣಪ್ಪ ಮತ್ತು ಬುಗ್ಗಪ್ಪ ಎಂಬುವವರೂ ವಿಚಿತ್ರ ಜ್ವರದಿಂದ ಬಳಲುತ್ತಿದ್ದು, ಇದಕ್ಕೆ ಕಾರಣ ತಿಳಿದು ಬಂದಿಲ್ಲ. ಹೀಗಾಗಿ ಮನೆಯವರಿಗೆ ಭಯ ಆವರಿಸಿದೆ. ಗ್ರಾಮದಲ್ಲಿ ಸ್ವಚ್ಛತೆ ಇಲ್ಲದಿರುವುದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.