ADVERTISEMENT

ತಪ್ಪದ ರೈತರ ಗೋಳು: ಬೆಲೆ ಸಿಗದೇ ಕಂಗಾಲು

ಅಭಿವೃದ್ಧಿ ಆಗದ ಕೆಂಭಾವಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 10:10 IST
Last Updated 27 ಡಿಸೆಂಬರ್ 2012, 10:10 IST

ಕೆಂಭಾವಿ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರಿಗಾಗಿ ವಿವಿಧ ಯೋಜನೆಗಳಡಿ ಲಕ್ಷಾಂತರ ಖರ್ಚು ಮಾಡುತ್ತಿವೆ. ಯೋಜನೆಗಳು ಮಾತ್ರ ಪೂರ್ಣಗೊಳ್ಳದೇ ರೈತರು ಪರದಾಡುವುದು ಇಂದಿಗೂ ತಪ್ಪಿಲ್ಲ ಎನ್ನುವುದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಇದೆ.

ಪಟ್ಟಣದ ಹೊರವಲಯದಲ್ಲಿ ನಿರ್ಮಿಸಲಾದ ಕೃಷಿ ಉತ್ಪನ್ನ ಉಪಮಾರುಕಟ್ಟೆ ಸ್ಥಳದಲ್ಲಿ ಜಾಲಿ ಗಿಡಗಳು ಬೆಳೆದು ವಿಕಾರ ರೂಪ ತಾಳಿದ್ದು, ಈ ಮಾರುಕಟ್ಟೆ ಕೆಂಭಾವಿ ಪಟ್ಟಣದಲ್ಲಿ ಹೆಸರಿಗೆ ಮಾತ್ರ ಇದ್ದಂತಾಗಿದೆ. ರೈತರಿಗೆ ಉಪಯೋಗಕ್ಕೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಹೊರವಲಯದಲ್ಲಿರುವ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಇದುವರೆಗೂ ಅಭಿವೃದ್ಧಿ ಆಗಿಲ್ಲ. 1985ರಲ್ಲಿ ಈ ಸ್ಥಳವನ್ನು ವ್ಯಕ್ತಿಯೊಬ್ಬರು ನೀಡಿದ್ದರು. ನಂತರದ ದಿನಗಳಲ್ಲಿ ಮೂರು ಗೋದಾಮು ಹಾಗೂ ಮಾರುಕಟ್ಟೆ ಸುತ್ತಲೂ ಕಂಪೌಂಡ್ ಗೋಡೆ ನಿರ್ಮಿಸಲಾಯಿತು. ಇದನ್ನು ಹೊರತುಪಡಿಸಿದರೆ ಮತ್ತೆ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಲಿಲ್ಲ. ಬತ್ತದ ಕಟಾವು ಬಂದಾಗ ಮಾತ್ರ ಹೆಸರಿಗೆ ಎಂಬಂತೆ ಚೆಕ್ ಪೋಸ್ಟ್ ತೆರೆಯಲಾಗುತ್ತದೆ. ಆದರೆ ಈ ಚೆಕ್ ಪೋಸ್ಟ್‌ನಲ್ಲಿ ಎಷ್ಟು ಕರ ಸಂಗ್ರಹವಾಗಿ ಸರ್ಕಾರಕ್ಕೆ ಮುಟ್ಟುತ್ತದೆ ಎಂದು ರೈತರು ಕೇಳುತ್ತಿದ್ದಾರೆ.

ಧಾನ್ಯ ಮಾರಾಟ ಮಾಡಲು ಪಟ್ಟಣಕ್ಕೆ ಬರುವ ಸುತ್ತಲಿನ ರೈತರು, ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಹೇಳುವ ದರದಲ್ಲಿಯೇ ತಮ್ಮ ಉತ್ಪನ್ನಮಾರಾಟ ಮಾಡುವುದು ಅನಿವಾರ್ಯವಾಗಿದೆ. ವರ್ತಕರು ಹೇಳಿದ ದರಕ್ಕೆ ಉತ್ಪನಗಳನ್ನು ಮಾರಾಟ ಮಾಡುವುದರಿಂದ ರೈತನಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ. ರೈತ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗಲಿ ಎಂಬ ಉದ್ದೇಶದಿಂದ ನಿರ್ಮಿಸಿದ ಉಪ ಮಾರುಕಟ್ಟೆ ಅಭಿವೃದ್ಧಿ ಕಾಣದೇ ಇರುವುದರಿಂದ ರೈತರು ಪರದಾಡುವುದು ತಪ್ಪಿಲ್ಲ.

ಇಲ್ಲಿ ಮಳಿಗೆಗಳು ಪ್ರಾರಂಭವಾದರೆ ಟೆಂಡರ್ ಮೂಲಕ ತಾವು ಬೆಳೆದ ಬೆಳೆ ಸೂಕ್ತ ಬೆಲೆಗೆ ಮಾರಾಟ ಮಾಡುವ ಅವಕಾಶ ರೈತರಿಗೆ ಸಿಗಲಿದೆ. ಆದರೆ ಈಗ ವ್ಯಾಪಾರಿಗಳು ನಿಗದಿ ಮಾಡಿದ ಬೆಲೆಗೆ ಮಾರಾಟ ಮಾಡುವ ಅನಿವಾರ್ಯ ರೈತರಿಗೆ ಎದುರಾಗಿದೆ.

ಉಪಮಾರುಕಟ್ಟೆಯಲ್ಲಿ ಹಿಂದೆ ಲೈಸನ್ಸ್ ಪಡೆದ 30 ವ್ಯಾಪಾರಿಗಳು ಮಳಿಗೆಗಳಿಗಾಗಿ ಹಣ ಸಂದಾಯ ಮಾಡಿದ್ದಾರೆ. ಆದರೆ ಮಳಿಗೆಗಳು ಮಾತ್ರ ಇನ್ನೂ ವಿತರಣೆ ಆಗಿಲ್ಲ. ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಅಂಗಡಿಗಳಿಗೆ ತರುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ರೈತ ನಾಗಪ್ಪ ಧರಿ.

ಪ್ರತಿ ವರ್ಷ ಮಾರುಕಟ್ಟೆ ನಿರ್ವಹಣೆಗಾಗಿಯೇ ಲಕ್ಷಾಂತರ ಹಣ ಖರ್ಚು ಮಾಡಲಾಗುತ್ತಿದೆ. ಆದರೆ ಕಾಮಗಾರಿ ಆಗುತ್ತಿದೆಯೇ ಎಂಬ ಬಗ್ಗೆ ಯೋಚಿಸಬೇಕಾದ ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ಈ ಉಪ ಮಾರುಕಟ್ಟೆಯಲ್ಲಿ ಈಗಾಗಲೇ ಪಶು ಆಸ್ಪತ್ರೆ, ರಾಜ್ಯ ಉಗ್ರಾಣ ನಿಗಮದ ಎರಡು ಬೃಹತ್ ಗೋದಾಮುಗಳು ನಿರ್ಮಾಣವಾಗಿವೆ.

ಪಾಳು ಬಿದ್ದ ರೈತ ಸಂತೆ ಕಟ್ಟಡ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಬಾರ್ಡ್ ಯೋಜನೆ ಅಡಿ ಸುಮಾರು ರೂ.20 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಗ್ರಾಮೀಣ ರೈತ ಸಂತೆ ಕಟ್ಟಡವೂ ರೈತರ ಉಪಯೋಗಕ್ಕೆ ಬಾರದೇ ಹಾಳು ಬಿದ್ದಿದೆ. ಪಟ್ಟಣದಿಂದ ಹೊರಗಡೆ ಅವೈಜ್ಞಾನಿಕವಾಗಿ ನಿರ್ಮಿಸಿರುವುದೇ ಈ ಕಟ್ಟಡ ಹಾಳು ಬೀಳಲು ಕಾರಣವಾಗಿದೆ ಎಂದು ರೈತ ಶರಣಪ್ಪ ಹೇಳುತ್ತಾರೆ.

ಪಟ್ಟಣದಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿರುವ ಈ ಸ್ಥಳದಲ್ಲಿ  ಸಂತೆ ಕಟ್ಟಡ ನಿರ್ಮಿಸಿದ್ದು, ಜನರು ಇಲ್ಲಿಗೆ ಬಂದು ಸಂತೆ ಮಾಡಲು ಸಾಧ್ಯವೇ ಇಲ್ಲ. ಅದರಲ್ಲೂ ಹೆಣ್ಣುಮಕ್ಕಳು ಇಲ್ಲಿಯವರೆಗೆ ಬರುವುದು ದೂರದ ಮಾತು. ಕೆಂಭಾವಿಯಲ್ಲಿ ಉಪ ಮಾರುಕಟ್ಟೆಯಿಂದ ಪ್ರತಿವರ್ಷ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ಈಗಲಾದರೂ ಉಪ ಮಾರುಕಟ್ಟೆ ಅಭಿವೃದ್ಧಿ ಪಡಿಸಲು ಜನಪ್ರತಿನಿಧಿಗಳು ಮುಂದಾಗಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.