ADVERTISEMENT

ತಾಂಡಾದ ಅಭಿವೃದ್ಧಿಗೆ ರಾಜಕೀಯ ಸೋಂಕು

ಟಿ.ನಾಗೇಂದ್ರ
Published 24 ಸೆಪ್ಟೆಂಬರ್ 2013, 7:06 IST
Last Updated 24 ಸೆಪ್ಟೆಂಬರ್ 2013, 7:06 IST

ಶಹಾಪುರ: ತಾಲ್ಲೂಕಿನ ಹೋತಪೇಟ ತಾಂಡಾ ನಾಗರಿಕ ಸಮಾಜದಿಂದ ಬಹುದೂರ ಉಳಿದುಕೊಂಡಿದೆ.  ತಾಂಡಾಕ್ಕೆ ತೆರಳಲು ರಸ್ತೆ ಇಲ್ಲ. ಮಳೆ ಬಂದಾಗ ರಸ್ತೆಯಲ್ಲಿ ಓಡಾಡುವುದು ಸರ್ಕಸ್‌ ಮಾಡಿದಂತೆ. ಅಭಿವೃದ್ಧಿ ಕಾಮಗಾರಿಗೆ ರಾಜಕೀಯ ಸೋಂಕು ತಗುಲಿದೆ.

ಹೋತಪೇಟ ತಾಂಡಾ ಹೋತಪೇಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದೆ. ಸುಮಾರು 1000 ಜನಸಂಖ್ಯೆಯನ್ನು ಹೊಂದಿದೆ. ತಾಂಡಾದಲ್ಲಿ ಮೂಲಭೂತ ಸೌಲಭ್ಯ­ಗಳು ಮರೀಚಿಕೆ ಆಗಿವೆ. ನಿವಾಸಿಗಳು ಮೂಲ ಸೌಲಭ್ಯಕ್ಕಾಗಿ ಆಗ್ರಹಿಸಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದೂ ಆಗಿದೆ. ಫಲಿತಾಂಶ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. 
 
ಕುಡಿಯುವ ನೀರಿಗೆ ಎರಡು ಕೊಳವೆ ಬಾವಿ ಮಾತ್ರ ಇದೆ. ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಕುಡಿಯುವ ನೀರಿಗಾಗಿ ಪೈಪ್‌ಲೈನ್‌ ಅಳವಡಿಸಿದ್ದು, ಇಂದಿಗೂ ಹನಿ ನೀರು ಬಂದಿಲ್ಲ ಎಂಬುದು ತಾಂಡಾ ನಿವಾಸಿಗಳ ಆರೋಪ.

ತಾಂಡಾದ ಸುತ್ತಲೂ ನೀರಾವರಿ ಜಮೀನು ಇದೆ.  ಶೌಚಾಲಯಕ್ಕೆ ತೆರಳಲು ಜಾಗವಿಲ್ಲದಂತೆ ಆಗಿದೆ. ಸಮಸ್ಯೆ ಹೇಳತೀರದು ಎಂದು ತಾಂಡಾದ ಮಹಿಳೆಯರು ಹೇಳುತ್ತಾರೆ.

ತಾಂಡಾದಲ್ಲಿ ಎರಡು ರಾಜಕೀಯ ಬಣವಿದೆ. ಒಂದು ಪಕ್ಷದ ಕಾರ್ಯಕರ್ತರ ಮನೆ ಮುಂದೆ  ಸಿ.ಸಿ ರಸ್ತೆ, ಚರಂಡಿ ನಿರ್ಮಿಸಿದ್ದಾರೆ. ಅದೇ ತುಸು ದೂರದಲ್ಲಿನ ಇನ್ನೊಂದು ತಾಂಡಾದಲ್ಲಿ ಚರಂಡಿ, ರಸ್ತೆಯಿಲ್ಲದೆ ನೀರು ನಿಂತು ಗಬ್ಬು ವಾಸನೆ ಹೊಡೆಯುತ್ತದೆ. ಗ್ರಾಮದ ಕೆಲ ರಾಜಕೀಯ ಮುಖಂಡರು ಆಶ್ರಯ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿಕೊಡಲಾಗುವುದೆಂದು ಪ್ರತಿಯೊಬ್ಬರಿಂದ 3000 ರೂ. ತೆಗೆದುಕೊಂಡು ಹೋದವರು ಇಂದಿಗೂ ಬಂದಿಲ್ಲ.

ಅದೆ ಹಾಳು ಬಿದ್ದ ಮನೆ ಹಾಗೂ ಟಿನ್‌ಶೆಡ್‌ನಲ್ಲಿ ಜೀವನ ಸವೆಸುತ್ತಿದ್ದೇವೆ ಎನ್ನುತ್ತಾರೆ ತಾಂಡಾದ ಗಂಗರಾಮ್‌.
ತಾಂಡಾದಲ್ಲಿ 1ರಿಂದ 5 ತರಗತಿಯವರೆಗೆ ಶಾಲೆ ಇದೆ. 100ಕ್ಕೂ ಹೆಚ್ಚು ಮಕ್ಕಳು ಕಲಿ­ಯುತ್ತಾರೆ. ಆದರೆ ಜ್ಞಾನ ದೇಗುಲ ಶಿಥಿಲಾವಸ್ಥೆಯಲ್ಲಿದೆ. ಶಾಲೆಯ ಒಂದು ಗೋಡೆ ಈಚೆಗೆ ಸುರಿದ ಮಳೆಗೆ ಕುಸಿದು ಬಿದ್ದಿದೆ. ಮೇಲ್ಛಾವಣಿ ಸೋರುತ್ತಿದೆ. ಭೀತಿಯಲ್ಲೇ ಮಕ್ಕಳು ಕಲಿ­ಯುತ್ತಿದ್ದಾರೆ. ಜನಪ್ರತಿನಿಧಿಗಳು ತಾಂಡಾದ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ತಾಂಡಾದ ನಿವಾಸಿಗಳು  ಆಗ್ರಹಿಸಿದ್ದಾರೆ.

‘ಕನಿಷ್ಠ ಸೌಕರ್ಯ ಇಲ್ಲ’
ತಾಂಡಾಕ್ಕೆ ಕನಿಷ್ಠ ಸೌಕರ್ಯ ಇಲ್ಲ. ಆಶ್ರಯ ಯೋಜನೆ ಅಡಿಯಲ್ಲಿ ಮನೆ ಮಂಜೂರು ಮಾಡಲು 3000ರೂ. ತೆಗೆದುಕೊಂಡರೂ ಇಂದಿಗೂ ಮನೆ ದೊರಕಿಲ್ಲ. ಟಿನ್‌ಶೆಡ್‌ನಲ್ಲಿ ಮೂರು ಮಕ್ಕಳ ಜೊತೆ ವಾಸಿಸುತ್ತಿದ್ದೇನೆ. ವಿಧವಾ ವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಇಂದಿಗೂ ಬಂದಿಲ್ಲ. 
ಜನಪ್ರತಿನಿಧಿಗಳನ್ನು ಮಳೆ ಬಂದಾಗ ನಮ್ಮ ತಾಂಡಾಕ್ಕೆ ಕರೆದುಕೊಂಡು ಬರಬೇಕು ಆಗ ನಮ್ಮ ಸಮಸ್ಯೆ ಅವರಿಗೆ ಅರ್ಥವಾಗುತ್ತದೆ.
– ಲಲಿತಾಬಾಯಿ ಚವಾಣ್‌, ತಾಂಡಾ ನಿವಾಸಿ

ಅಭಿವೃದ್ಧಿಗೆ ರಾಜಕೀಯ ಸೋಂಕು’
ತಾಂಡಾದಲ್ಲಿ ಎರಡು ರಾಜಕೀಯ ಗುಂಪು ಇವೆ. ಓಟು ಹಾಕಿಲ್ಲವೆಂದು ನಮಗೆ ಕನಿಷ್ಠ ಸೌಕರ್ಯವನ್ನೂ ನೀಡಿಲ್ಲ.  ತಾಂಡಾದ ಅಭಿವೃದ್ಧಿ ದಾಖಲೆಯಲ್ಲಿ ಮಾತ್ರ ಆಗಿದೆ. ವಾಸ್ತವವಾಗಿ ಇಂದಿಗೂ ಸೂರು ವಂಚಿತ ಜನತೆಗೆ ಮನೆ ದೊರೆತಿಲ್ಲ. ಜನಪ್ರತಿನಿಧಿಗಳು ರಾಜಕೀಯ ಕಾಮಾಲೆಯನ್ನು ಬಿಟ್ಟು ತಾಂಡಾದ ಅಭಿವೃದ್ಧಿಗೆ ಮುಂದಾಗಬೇಕು.
– ಶರಣಗೌಡ ಪಾಟೀಲ್‌, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.