ADVERTISEMENT

ತಾಂತ್ರಿಕ ತೊಂದರೆ: ಫಲಾನುಭವಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 9:50 IST
Last Updated 21 ಮಾರ್ಚ್ 2011, 9:50 IST

ಹುಣಸಗಿ: ಅಂಗವಿಕಲರು, ವಿಧವೆಯರು, ವೃದ್ಧರು ಸೇರಿದಂತೆ ಸರ್ಕಾರ ನೀಡುತ್ತಿರುವ ಮಾಶಾಸನವೇ ಹಲವಾರು ಜನರಿಗೆ ಆಧಾರವಾಗಿದ್ದು, ಹುಣಸಗಿ ಉಪ ಖಜಾನೆ ವ್ಯಾಪ್ತಿಯ ಅಂಗವಿಕಲರು ಕಳೆದ ಮೂರು ತಿಂಗಳಿಂದ ಮಾಶಾಸನ ಸಿಗದೇ ತೊಂದರೆ ಅನುಭವಿಸುವಂತಾಗಿದೆ.

ತಾಂತ್ರಿಕ ತೊಂದರೆಯಿಂದಾಗಿ ಸುಮಾರು ಮೂರು ತಿಂಗಳಿಂದ ಅಂಗವಿಕಲ, ವಿಧವಾ, ವೃದ್ಧಾಪ್ಯ ವೇತನ ಪಡೆಯುವ ಫಲಾನುವಿಗಳಿಗೆ ಮಾಸಾಶನ ಸಂದಾಯವಾಗದಿರುವುದು ಇದೀಗ ಬೆಳಕಿಗೆ ಬಂದಿದೆ. ಪ್ರತಿ ತಿಂಗಳೂ ನಿಗದಿಯಂತೆ ಬ್ಯಾಂಕ್ ಅಥವಾ ಅಂಚೆ ಕಚೇರಿಗಳ ಮೂಲಕ ಮಾಶಾಸನ ಬರುತ್ತಿತ್ತು. ಆದರೆ ಕಳೆದ ಮೂರು ತಿಂಗಳಿನಿಂದ ಈ ಸಮಸ್ಯೆ ಉಂಟಾಗಿದೆ ಎಂದು ಸಂಗಮೇಶ ವಜ್ಜಲ ಹೇಳುತ್ತಾರೆ.

ಇದರಿಂದಾಗಿ ನೂರಾರು ಅಂಗವಿಕಲರು ನಿತ್ಯ ಬ್ಯಾಂಕುಗಳಿಗೆ ಅಲೆದಾಡುವಂತಾಗಿದೆ. ಈ ಸಮಸ್ಯೆ ಹುಣಸಗಿ ಅಥವಾ ಸುರಪುರ ತಾಲ್ಲೂಕಿನಲ್ಲಿ ಮಾತ್ರವಲ್ಲ ರಾಜ್ಯದಲ್ಲಿಡೆ ಇದೆ ಎಂದು ಹೇಳಲಾಗುತ್ತಿದೆ. ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷೆ, ಅಂಗವಿಕಲ ವೇತನ, ವಿಧವಾ ವೇತನ ಸೇರಿದಂತೆ ಹುಣಸಗಿ ಪತ್ರಾಂಕಿತ ಉಪ ಖಜಾನೆ ವ್ಯಾಪ್ತಿಯಲ್ಲಿ ಸುಮಾರು 12 ಸಾವಿರ, ಸುರಪುರ ತಾಲ್ಲೂಕಿನಲ್ಲಿ ಅಂದಾಜು ಸುಮಾರು 16 ಸಾವಿರ ಜನರು  ಫಲಾನುಭವಿಗಳು ಈ ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳೇ ಹೇಳುವ ಪ್ರಕಾರ ಹುಣಸಗಿ ಉಪಖಜಾನೆ ವ್ಯಾಪ್ತಿಯಲ್ಲಿ ತಿಂಗಳಿಗೆ ಮಾಶಾಸನಕ್ಕೆ ರೂ ಒಂದು ಕೋಟಿ ನೀಡಲಾಗುತ್ತಿದೆ.

ಒಂದು ಮೂಲದ ಪ್ರಕಾರ ಸಂಧ್ಯಾ ಸುರಕ್ಷೆ ಯೋಜನೆ ಫಲಾನುಭವಿಗಳೇ ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರಲ್ಲಿ ಒಂದೇ ಹೆಸರಿನಲ್ಲಿ ಮೂರು ನಾಲ್ಕು ವಿವಿಧ ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಹಣ ಸಂದಾಯವಾಗಿದೆ. ಆದ್ದರಿಂದ ಬಜೆಟ್ ಖಾಲಿಯಾಗಿದೆ ಎನ್ನಲಾಗುತ್ತೆ. ಆದರೆ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ಬೆಂಗಳೂರಿನಲ್ಲಿ ತಾಂತ್ರಿಕ ತೊಂದರೆ ಉಂಟಾಗಿರುವುದರಿಂದ ಈ ರೀತಿಯಾಗಿದ್ದು, ಇನ್ನು ಕೇಲವೇ ದಿನಗಳಲ್ಲಿ ಎಲ್ಲ ಸರಿಯಾಗಲಿದೆ ಎನ್ನುತ್ತಾರೆ. ಆದರೆ ಇದಕ್ಕೆ ಹಿರಿಯ ಅಧಿಕಾರಿಗಳೇ ಉತ್ತರಿಸಬೇಕಿದೆ.

ಇನ್ನೂ ಹಲವಾರು ಅರ್ಹ ವ್ಯಕ್ತಿಗಳಿಗೆ ಈ ಯೋಜನೆ ಸಮರ್ಪಕವಾಗಿ ಮುಟ್ಟಿಲ್ಲ. ಆದಷ್ಟು ಬೇಗನೆ ಸಮಸ್ಯೆ ಪರಿಹರಿಸಿ ಅಂಗವಿಕಲರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಅಂಗವಿಕಲರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.