ADVERTISEMENT

ದಂತಾಪುರ: ರಸ್ತೆ ಬದಿಯೇ ಶೌಚಕ್ರಿಯೆ

ಮಲ್ಲಿಕಾರ್ಜುನ ಪಾಟೀಲ್, ಚಪೆಟ್ಲಾ
Published 9 ಅಕ್ಟೋಬರ್ 2017, 9:38 IST
Last Updated 9 ಅಕ್ಟೋಬರ್ 2017, 9:38 IST
ಗುರುಮಠಕಲ್ ಸಮೀಪದ ದಂತಾಪುರ ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದ್ದರಿಂದ ಗಲೀಜು ನೀರು ರಸ್ತೆಯ ಮೇಲೆ ಹರಿಯುತ್ತಿದೆ
ಗುರುಮಠಕಲ್ ಸಮೀಪದ ದಂತಾಪುರ ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದ್ದರಿಂದ ಗಲೀಜು ನೀರು ರಸ್ತೆಯ ಮೇಲೆ ಹರಿಯುತ್ತಿದೆ   

ಗುರುಮಠಕಲ್: ದಿನ ಬೆಳಗಾಗುವ ಮುನ್ನ ಮತ್ತು ಸಂಜೆ ಕತ್ತಲು ಕವಿದರೆ ಸಾಕು ಗ್ರಾಮಕ್ಕೆ ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ ಸಾಲಾಗಿ ಕುಳಿತು ಶೌಚಕ್ರಿಯೆಯನ್ನು ಮುಗಿಸುವ ದೃಶ್ಯ ಸಮೀಪದ ದಂತಾಪುರದಲ್ಲಿ ಸಾಮಾನ್ಯವಾಗಿದೆ.

ಗುರುಮಠಕಲ್ ಪಟ್ಟಣದಿಂದ ನಾರಾಯಣಪೇಟ ಹೋಗುವ ರಸ್ತೆಯಲ್ಲಿ ದಂತಾಪುರ ಗ್ರಾಮ ಇದೆ. ಪುಟಪಾಕ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮದಲ್ಲಿ 1,200 ಜನಸಂಖ್ಯೆಯಿದೆ. 4 ಜನ ಪಂಚಾಯಿತಿ ಸದಸ್ಯರಿದ್ದಾರೆ.

‘ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಗ್ರಾಮ ಪ್ರವೇಶಿಸುತ್ತಿದ್ದಂತೆಯೇ ದುರ್ನಾತ ಬೀರುವ ರಸ್ತೆ ಬದಿಯ ಗುಂಡಿಗಳು ಸ್ವಾಗತಿಸುತ್ತವೆ!. ಇಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಎಷ್ಟು ಬಾರಿ ಮನವಿ ಮಾಡಿದರೂ ಪಂಚಾಯಿತಿಯವರು ಸ್ಪಂದಿಸುವುದಿಲ್ಲ’ ಎನ್ನುವುದು ಗ್ರಾಮಸ್ಥರ ಆರೋಪ.

ADVERTISEMENT

‘ಚರಂಡಿ ಮತ್ತು ಗುಂಡಿಗಳಲ್ಲಿ ಗಲೀಜು ನೀರು ನಿಂತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಿದೆ. ಗ್ರಾಮದಲ್ಲಿ ಬಹುತೇಕ ರೈತಾಪಿ ವರ್ಗ ಇದೆ. ಸದಾ ಒಂದಿಲ್ಲೊಂದು ಕಾರಣ ನೀಡಿ ವಿದ್ಯುತ್ ಸರಬರಾಜು ವ್ಯತ್ಯಯ ಮಾಡುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೂ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಯಾರೊ ಮಾಡುತ್ತಿಲ್ಲ’ ಎಂದು ರೈತರಾದ ದೇಸಾಯಿ, ರಾಮಪ್ಪ, ವೆಂಕಟಪ್ಪ, ಶಂಕ್ರಪ್ಪ ದುಬ್ಬ ಅಳಲು ತೋಡಿಕೊಂಡರು.

‘ಗ್ರಾಮದಲ್ಲಿ 250 ಮನೆಗಳಿದ್ದರೂ ಬೆರಳೆಣಿಕೆಯಷ್ಟು ಮಾತ್ರ ಶೌಚಾಲಯಗಳಿವೆ. ಉಳಿದಂತೆ ಗ್ರಾಮಸ್ಥರಿಗೆಲ್ಲ ಬಯಲೇ ಶೌಚಾಲಯ. ಇನ್ನು ಮಹಿಳೆಯರ ಪಾಡು ಹೇಳತಿರದು. ಶೌಚಕ್ಕೆ ಹೋಗಲು ಕತ್ತಲಾಗುವವರೆಗೂ ಕಾಯಬೇಕು. ನಂತರ ಮುಖ್ಯರಸ್ತೆಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡು ಬದಿಗಳಲ್ಲಿ ಕುಳಿತು ನಿಸರ್ಗ ಕರೆ ಮುಗಿಸಿಕೊಳ್ಳಬೇಕು’ ಎಂದು ಮಹಿಳೆಯರು ತಿಳಿಸಿದರು.

ಗ್ರಾಮಕ್ಕಿಲ್ಲ ಬಸ್ ಸಂಚಾರ: ಗ್ರಾಮದಿಂದ ಬಹುತೇಕ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಗುರುಮಠಕಲ್ ಪಟ್ಟಣಕ್ಕೆ ಹೋಗುತ್ತಾರೆ. ಆದರೆ, ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳಾದ ರಾಜು ದಾಸರಿ, ನಾರಾಯಣ ಯಾದವ್, ವೆಂಕಟ, ಶಂಕರ ಮನವಿ ಮಾಡುತ್ತಾರೆ.

‘ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಿ ಚರಂಡಿ ವ್ಯವಸ್ಥೆಯನ್ನು ಸರಿಪಡಿಸುತ್ತೇನೆ. ಶೌಚಾಲಯ ನಿರ್ಮಾಣದ ಕುರಿತು ವಿಶೇಷ ಮುತುವರ್ಜಿ ವಹಿಸಿ ಸಮಸ್ಯೆಗೆ ಪರಿಹರಿಸಲಾಗುವುದು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮು ಪವಾರ ಪ್ರತಿಕ್ರಿಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.