ADVERTISEMENT

ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 9:50 IST
Last Updated 24 ಫೆಬ್ರುವರಿ 2011, 9:50 IST

ಯಾದಗಿರಿ:  ಜನಗಣತಿಯಲ್ಲಿ ವೀರ ಶೈವ, ಲಿಂಗಾಯತ ಜಂಗಮರನ್ನು ಬೇಡ ಜಂಗಮರು ಎಂದು ದಾಖಲಿ ಸುವುದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.ಇಲ್ಲಿಯ ಸರ್ಕಾರಿ ಪದವಿ ಕಾಲೇಜಿ ನಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಸುಭಾಷ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಜನಗಣತಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಜನಗಣತಿ ಸಂದರ್ಭದಲ್ಲಿ ಕೆಲ ಜಾತಿಗಳ ಜನರು ತಮ್ಮ ಜಾತಿಯ ವಿವರಗಳನ್ನು ತಪ್ಪಾಗಿ ಬರೆಸುತ್ತಿದ್ದು, ಇದು ಅಪರಾಧವಾಗಿದೆ. ಈಗಾಗಲೇ ತಿಳಿದಿರುವಂತೆ ವೀರಶೈವ, ಲಿಂಗಾಯತ ಜಾತಿಯಲ್ಲಿರುವ ಜಂಗಮರು ತಾವು ಬೇಡ ಜಂಗಮರು ಎಂಬುದಾಗಿ ಬರೆಸಿ ಕೊಂಡಿರುವುದು ಹಿಂದಿನ ಜನ ಗಣತಿಯ ಅಂಕಿ-ಅಂಶಗಳಿಂದ ಸ್ಪಷ್ಟ ವಾಗಿದೆ ಎಂದು ತಿಳಿಸಿದರು.

ನಿಜವಾದ ಬೇಡ ಜಂಗಮರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಇವರಿಗೆ ಬುಡ್ಗ ಜಂಗಮರು, ಮಾಲ ಜಂಗಮರು ಎಂದೂ ಕರೆಯಲಾಗು ತ್ತಿದೆ. ಈಗ ಕರ್ನಾಟಕ ಬೀದರ, ಗುಲ್ಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಇವರು ವಾಸಿಸುತ್ತಾರೆ. 1981 ರ ಜನಗಣತಿ ಪ್ರಕಾರ ನಿಜ ವಾದ ಬೇಡ ಜಂಗಮರ ಸಂಖ್ಯೆ 3035, ಇವರಲ್ಲಿ 1553 ಪುರುಷರು, 1482 ಮಹಿಳೆಯರು ಸೇರಿದ್ದಾರೆ. 1991 ಜನಗಣತಿಯ ಸಂದರ್ಭದಲ್ಲಿ ಈ ಸಂಖ್ಯೆ ದಿಢೀರನೇ 21,994 ಕ್ಕೆ ಏರಿದೆ. 2001 ರ ಜನಗಣತಿಯಲ್ಲಿ ಈ ಸಂಖ್ಯೆ 54,873 ರಷ್ಟಾಗಿದೆ. ಈ ಭಾರಿ ಹೆಚ್ಚಳದ ಹಿಂದೆ ವೀರಶೈವ, ಲಿಂಗಾಯತ ಜಂಗಮರು ಬೇಡ ಜಂಗಮರೆಂದು ಸುಳ್ಳು ದಾಖಲೆ ಮಾಡಿರುವುದು ಸ್ಪಷ್ಟವಾಗುತ್ತದೆ ಎಂದು ದೂರಿದರು.

1984-1990 ರ ಅವಧಿಯಲ್ಲಿ ಭಾರತ ಸರ್ಕಾರದ ಇಲಾಖೆಯೇ ನಡೆಸಿರುವ ಸಮೀಕ್ಷೆಯ ಪ್ರಕಾರ ವೀರಶೈವ, ಲಿಂಗಾಯತ ಜಂಗಮರು ಮತ್ತು ಪರಿಶಿಷ್ಟ ಜಾತಿಗಳಲ್ಲಿ ಒಂದಾ ಗಿರುವ ಬೇಡ ಜಂಗಮರು ಬೇರೆ ಬೇರೆ ಸಮುದಾಯಗಳಿಗೆ ಸೇರಿದವರು ಎಂದು ಹೇಳಲಾಗಿದೆ. ಹೀಗಿದ್ದರೂ ವೀರಶೈವ, ಲಿಂಗಾಯತ ಜಂಗಮರಲ್ಲಿ ಅನೇಕ ಜನರು ತಾವು ಬೇಡ ಜಂಗಮರು, ಪರಿಶಿಷ್ಟ ಜಾತಿಯವರು, ನಮಗೆ ಮೀಸಲಾತಿ ಬೇಕು ಎಂದು ಹೇಳುತ್ತಿದ್ದಾರೆ. ವೀರಶೈವ, ಲಿಂಗಾ ಯತ ಜಂಗಮರು ಒಂದು ಕಡೆ ಗುರು ವಾಗಿದ್ದುಕೊಂಡು, ಇನ್ನೊಂದು ಕಡೆ ಪರಿಶಿಷ್ಟ ಜಾತಿಗಳ ಜನರನ್ನು ಅಸ್ಪೃಶ್ಯ ರಂತೆ ಕಾಣುತ್ತಿರುವುದು ಶುದ್ಧ ನಾಚಿಕೆಗೇಡಿತನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಾರಿಯ ಜನಗಣತಿಯಲ್ಲಿ ಗುಲ್ಬರ್ಗ, ಬೀದರ, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ವಿಶೇಷ ವಾಗಿ ವೀರಶೈವ, ಲಿಂಗಾಯತ ಜಂಗಮರು ತಮ್ಮನ್ನು ಪರಿಶಿಷ್ಟ ಜಾತಿಗಳಿಗೆ ಸೇರಿದವರು ಎಂದು ಬರೆಸಿಕೊಳ್ಳುವ ಹುನ್ನಾರ ಆರಂಭಿಸಿ ರುವುದು ಜನಜನಿತವಾಗಿದೆ. ಇಂಥ ದುಷ್ಟ ಪ್ರಯತ್ನವನ್ನು ಸಾರ್ವಜನಿಕರು ಖಂಡಿಸಬೇಕು. ಸರ್ಕಾರಿ ಅಧಿಕಾರಿಗಳು ಸುಳ್ಳು ಮಾಹಿತಿ ದಾಖಲಿಸಿಕೊಳ್ಳ ಬಾರದು. ಸಂವಿಧಾನಕ್ಕೆ ಅಪಚಾರ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸ ಬೇಕು ಎಂದು ಮನವಿ ಮಾಡಿದರು.

ಸಮಿತಿ ಪದಾಧಿಕಾರಿಗಳಾದ ಮಲ್ಲಿ ಕಾರ್ಜುನ ಕ್ರಾಂತಿ, ನಿಂಗಣ್ಣ ಮಳ್ಳಳ್ಳಿ, ಶರಣಪ್ಪ ಢಾಕ್ಣಿ, ಶಾಂತಪ್ಪ ಸಾಲಿ ಮನಿ, ಶಿವಪುತ್ರಪ್ಪ ಜವಳಿ, ಮರೆಪ್ಪ ಕ್ರಾಂತಿ, ಚಂದಪ್ಪ ಮುನಿಯಪ್ಪ ನೋರ್, ಶರಣಪ್ಪ ಕೌಳೂರು, ವಿಜಯಕುಮಾರ ವಡಗೇರಾ, ಬುಗ್ಗಪ್ಪ ಅರಿಕೇರಿ, ಬಾಬುರಾವ ಸುರ ಪುರಕರ, ಮರೆಪ್ಪ ಹಳಗೇರಾ, ಶಿವ ಶರಣಪ್ಪ ದೊಡ್ಡ ಮನಿ, ಶಿವಲಿಂಗಪ್ಪ, ತಿಪ್ಪಣ್ಣ ಶೆಳ್ಳಿಗಿ, ಮಲ್ಲಿಕಾರ್ಜುನ ತಳ್ಳಳ್ಳಿ, ಅಖ್ತಾರ್ ಬೇಗಂ, ಮಹೇಶ, ಖಾಜಾ ಹುಸೇನ್ ಗುಡಗುಂಟಿ, ನಾಗು ಗೋಗಿಕೇರಾ, ಮರೆಪ್ಪ ತೇಲ್ಕರ್, ಮಿಲಿಂದ ಕ್ರಾಂತಿ, ನಿಂಗಣ್ಣ ಗೋನಾಳ, ವೀರಭದ್ರ, ಮಾನಪ್ಪ ಶೆಳ್ಳಿಗಿ, ಅಂಬ್ರೇಶ  ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.