ADVERTISEMENT

`ನಮ್ಮಾವ್ರ ಯಾವ ಪಾರ್ಟಿಯಾಗ ಅದಾರಿ'

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 9:45 IST
Last Updated 6 ಏಪ್ರಿಲ್ 2013, 9:45 IST

ಯಾದಗಿರಿ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಇದೀಗ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಬಲ ಪ್ರದರ್ಶನಕ್ಕೆ ಮುಂದಾಗುತ್ತಿದ್ದು, ಪ್ರಚಾರಕ್ಕಿಂತ ಪಕ್ಷ ಸೇರ್ಪಡೆ ಕಾರ್ಯಕ್ರಮಗಳೇ ಹೆಚ್ಚಿನ ಪ್ರಾಶಸ್ತ್ಯ ಪಡೆಯುತ್ತಿವೆ.

ಜಿಲ್ಲೆಯಾದ್ಯಂತ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ಆಕಾಂಕ್ಷಿಗಳು ಹಾಗೂ ಈಗಾಗಲೇ ಟಿಕೆಟ್ ಖಚಿತವಾಗಿರುವ ಅಭ್ಯರ್ಥಿಗಳು, ಗ್ರಾಮಗಳ ಪ್ರವಾಸ ಆರಂಭಿಸಿದ್ದು, ಗ್ರಾಮದ ಮುಖಂಡರು, ಕಾರ್ಯಕರ್ತರನ್ನು ಸೆಳೆಯಲು ಮುಂದಾಗಿದ್ದಾರೆ. ಪಕ್ಷದ ಕಾರ್ಯಕರ್ತರ ಪಡೆಯನ್ನು ಹೆಚ್ಚಿಸುವ ಉದ್ದೇಶದಿಂದ ಹೋದ ಕಡೆಗೆಲ್ಲ ಜನರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ.

ಇಂದು ಒಂದು ಪಕ್ಷದಲ್ಲಿದ್ದವರು, ನಾಳೆ ಮತ್ತೊಂದು ಪಕ್ಷದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಪ್ರಾಶಸ್ತ್ಯ ಸಿಗದಿದ್ದರೆ, ಮತ್ತೊಂದು ಪಕ್ಷಕ್ಕೆ ಸೇರ್ಪಡೆ ಆಗುವುದು ಸಾಮಾನ್ಯವಾಗಿದೆ. ಪ್ರತಿಯೊಂದು ಗ್ರಾಮಕ್ಕೆ ಒಬ್ಬ ನಾಯಕರು ಹುಟ್ಟಿಕೊಳ್ಳುತ್ತಿದ್ದು, ರಾಜಕೀಯ ಪಕ್ಷಗಳಿಗೂ ತಲೆನೋವಾಗಿ ಪರಿಣಮಿಸಿದೆ. ಇದರಿಂದಾಗಿ ಸಾಮಾನ್ಯ ಮತದಾರರು ಮಾತ್ರ ಗೊಂದಲದಲ್ಲಿ ಸಿಲುಕಿದ್ದಾರೆ.

ಪ್ರತಿ ಗ್ರಾಮಕ್ಕೆ ಭೇಟಿ ನೀಡುವ ನಾಯಕರು, ಆಯಾ ಗ್ರಾಮಗಳ ಮುಖ್ಯಸ್ಥರನ್ನು ಭೇಟಿ ಮಾಡಿ, ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ. ಪಕ್ಷದ ಶಾಲು ಹಾಕಿ, ಛಾಯಾಚಿತ್ರ ತೆಗೆಸಿಕೊಂಡರೆ ಪಕ್ಷಕ್ಕೆ ಸೇರ್ಪಡೆ ಮುಗಿದಂತಾಯಿತು. ಬೇರೆ ಪಕ್ಷದ ನಾಯಕರು ಆ ಗ್ರಾಮಕ್ಕೆ ಭೇಟಿ ನೀಡಿದಾಗಲೂ ಅದೇ ಜನರು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಪಕ್ಷಾಂತರ ಕಾರ್ಯಕ್ರಮವೂ ಒಂದು ಉದ್ಯೋಗವಾಗಿ ಪರಿಣಮಿಸಿದೆ.

ನಮಗ ತಿಳಿವಾಲ್ತು: ಗ್ರಾಮದ ಮುಖಂಡರನ್ನು ನಂಬಿರುವ ಗ್ರಾಮಸ್ಥರಿಗೂ ನಮ್ಮ ನಾಯಕರು ಯಾವ ಪಕ್ಷದಲ್ಲಿದ್ದಾರೆ ಎಂಬ ಗೊಂದಲ ಮೂಡುತ್ತಿದೆ. ಇದೀಗ ಗ್ರಾಮಗಳ ಮತಗಳ ಮೇಲೆ ಕಣ್ಣಿಟ್ಟಿರುವ ನಾಯಕರೆಲ್ಲರೂ, ಗ್ರಾಮಗಳ ಮುಖಂಡರನ್ನು ಸೆಳೆಯುತ್ತಿರುವುದರಿಂದ ಯಾರೂ ಯಾವ ಪಕ್ಷದಲ್ಲಿದ್ದಾರೆ ಎಂಬುದೇ ತಿಳಿಯದಂತಾಗಿದೆ.
“
ನಮ್ಮ ಊರಾಗ ಮೊದಲ ಹಿಂಗ ಇರಲಿಲ್ರಿ. ನಮ್ಮ ಮಂದಿ ಈ ಪಾರ್ಟ್ಯಾಗ ಅದಾರ ಅಂದ್ರ, ಅದ ಪಾರ್ಟಿಗೆ ಕೆಲಸ ಮಾಡತಿದ್ರು. ಈಗ ನೋಡಿದ್ರ ಮನಿಗೊಂದು ಪಾರ್ಟಿ ಆಗ್ಯಾವ್ರಿ. ಈ ಮನ್ಯಾವ ಒಂದ ಪಕ್ಷ ಆದ್ರ, ಬಾಜು ಮನ್ಯಾಗಿನ್ನಾವ ಇನ್ನೊಂದು ಪಕ್ಷ. ಹಿಂಗಾಗಿ ಊರಾಗನೂ ರಾಜಕೀಯ ಭಾಳ ಆಗೇತ್ರಿ. ಒಂದೊಂದ ಟೈಮು ನಮ್ಮ ಮಂದಿ ಯಾವ ಪಕ್ಷದಾಗ ಅದಾರ ಅನ್ನೋದ ತಿಳಿದ್ಹಂಗ ಆಗೇತಿ” ಎಂದು ಹೇಳುತ್ತಾರೆ ಗ್ರಾಮಸ್ಥ ದೇವಿಂದ್ರಪ್ಪ.
“
ಇಂಥಾ ರಾಜಕೀಯ ಮಾಡೋದು ಛೋಲೋ ಅಲ್ರಿ. ಇಲೆಕ್ಷನ್ ಆಗೂ ಗಂಟಾ ಒಂದ ಪಾರ್ಟಿ, ಇಲೆಕ್ಷನ್ ಮುಗದ ಮ್ಯಾಕ ಇನ್ನೊಂದ ಪಾರ್ಟಿ. ಅದ ಬಿಡ್ರಿ, ಇಲೆಕ್ಷನ್ ಮುಗಿದ್ರಾಗ ನಾಲ್ಕೈದ ಪಾರ್ಟಿ ಆಗೇ ಹೋಗಿರ‌್ತಾವ ನೋಡ್ರಿ. ಇಂಥಾ ಮಂದಿನ್ ನಂಬಿ ಹೆಂಗ ವೋಟ್ ಹಾಕೋದ್ರಿ. ನಮ್ಮ ಊರಾಗಿನ ಮಂದಿ ಯಾವ ಪಾರ್ಟಿ ಕಡೆ ಆದರೂ ಅನ್ನೋದ ಗೊತ್ತಾಗವಾಲ್ತು. ಇನ್ನು ರಾಜಕೀಯ ಮಂದಿ, ಇದನ್ನು ನೋಡಿ, ನಮಗೊಂದು ಅವರಿಗೊಂದು ಹೇಳಿ ವೋಟ್ ಹಾಕಿಸಿಕೊಂಡ ಹೋಗಿ ಬಿಡ್ತಾರ. ಅಮ್ಯಾಕ ನಮ್ಮನ್ನ ಯಾರೂ ಮಾತು ಆಡ್ಸಂಗಿಲ್ರಿ” ಎಂದು ನೊಂದು ನುಡಿಯುತ್ತಾರೆ ಇನ್ನೊಬ್ಬ ಗ್ರಾಮಸ್ಥ ಸಾಯಿಬಣ್ಣ.

ಹೆಚ್ಚಿದ ಭರಾಟೆ: ಈ ಬಾರಿಯ ಚುನಾವಣೆಯಲ್ಲಿ ಮೂರು ರಾಷ್ಟ್ರೀಯ ಪಕ್ಷಗಳ ಜೊತೆಗೆ ಎರಡು ಪ್ರಾದೇಶಿಕ ಪಕ್ಷಗಳು ಕಣಕ್ಕೆ ಇಳಿದಿದ್ದು, ಇದರಿಂದಾಗಿ ಗ್ರಾಮಗಳಲ್ಲಿ ಪ್ರಚಾರದ ಭರಾಟೆಯೂ ಹೆಚ್ಚಾಗುತ್ತಲೇ ಇದೆ. ದಿನಕ್ಕೊಂದು ಗ್ರಾಮದಲ್ಲಿ ಪ್ರಚಾರ ಸಭೆ, ಸೇರ್ಪಡೆ ಕಾರ್ಯಕ್ರಮಗಳು ಇದೀಗ ಸಾಮಾನ್ಯವಾಗುತ್ತಿವೆ.

ಇದೀಗ ರಾಜಕೀಯ ನಾಯಕರೆಲ್ಲರೂ ಗ್ರಾಮಗಳತ್ತ ಮುಖ ಮಾಡಿದ್ದು, ಗ್ರಾಮದ ಜನರ ಮನೆ ಬಾಗಿಲಿಗೆ ಹೋಗುತ್ತಿದ್ದಾರೆ. ಹೀಗಾಗಿ ಪ್ರತಿಯೊಂದು ಗ್ರಾಮದಲ್ಲೂ ಉರಿ ಬಿಸಿಲಿನ್ನೂ ಲೆಕ್ಕಿಸದ ರಾಜಕೀಯ ಜೋರಾಗಿಯೇ ನಡೆಯುತ್ತಿದೆ. ನೀತಿ ಸಂಹಿತೆಯ ತೂಗುಗತ್ತಿಯಿಂದಾಗಿ ಪ್ರಚಾರ ಸಭೆಯಲ್ಲಿ ಆಶ್ವಾಸನೆಗಳಿಗೆ ಕಡಿವಾಣ ಹಾಕುತ್ತಿರುವ ರಾಜಕೀಯ ಮುಖಂಡರು, ಗ್ರಾಮದ ನಾಯಕರನ್ನು ಪರಭಾರೆ ಕರೆದು, ಗ್ರಾಮಕ್ಕೆ ಸೌಲಭ್ಯ ಕಲ್ಪಿಸುವ ವಾಗ್ದಾನಗಳನ್ನು ಎಗ್ಗಿಲ್ಲದೇ ಮಾಡುತ್ತಿದ್ದಾರೆ. ಆದರೆ ಇದೆಲ್ಲವೂ ಎಷ್ಟರ ಮಟ್ಟಿಗೆ ಈಡೇರಲಿವೆ ಎಂಬುದು ಮಾತ್ರ ಗ್ರಾಮದ ಜನರಿಗೆ ತಿಳಿಯದಾಗಿದೆ.

“ಹ್ವಾದ ಇಲೆಕ್ಷನ್‌ದಾಗೂ ಹೇಳಿದ್ವಿ, ನಮ್ಮೂರಿಗೆ ಕುಡ್ಯೋ ನೀರಿನ ಸಮಸ್ಯೆ ಭಾಳ ಐತಿ ಅಂತ. ಆದ್ರ 5 ವರ್ಷ ಕಳೆದ ಹೋತು. ಮತ್ತ ಇಲೆಕ್ಷನ್ ಬಂದೈತಿ. ಆದ್ರ ಈ ಬರಿನೂ ಅದ ಸಮಸ್ಯೆ ಹೇಳಬೇಕ ನೋಡ್ರಿ. ಈ ಸಮಸ್ಯೆ ಬಗಿಹರಿಸಿದ್ರ, ನಮ್ಮ ಊರಾಗಿನ ಜನರ ಪುಣ್ಯನಾದ್ರು ಬರ‌್ತಿತ್ತು. ಮತ್ತ ಈಗ ನೀರ ಕೊಡ್ರಿ ಅಂತೇವಿ, 5 ವರ್ಷದ ಗಂಟಾನೂ ಹಂಗ ಉಳಿತೈತಿ” ಎನ್ನುವ ಮಹಾದೇವಮ್ಮ, ಸದ್ಯ ನಡೆಯುತ್ತಿರುವ ಆಶ್ವಾಸನೆಗಳ ರಾಜಕೀಯವನ್ನು ಬಿಚ್ಚಿಡುತ್ತಾರೆ.

ಜಿಲ್ಲೆಯ ನಾಲ್ಕೂ ಕ್ಷೇತ್ರಗಳ ರಾಜಕೀಯ ಮುಖಂಡರು, ಇದೀಗ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದು, ಗ್ರಾಮಗಳ ಸಮಸ್ಯೆಗಳತ್ತ ಮಾತ್ರ ಗಮನ ನೀಡುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತ  ಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.