ಯಾದಗಿರಿ: ಸಮೀಪದ ನಾಯ್ಕಲ್ ಗ್ರಾಮದ ಜನರ ನೀರಿನ ಸಮಸ್ಯೆ ನಿವಾರಣೆ ಆದಂತಾಗಿದೆ. ನೀರಿಗಾಗಿ ಕಿಲೊ ಮೀಟರ್‌ಗಟ್ಟಲೆ ಅಲೆಯುತ್ತಿದ್ದ ಗ್ರಾಮದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
‘ಪ್ರಜಾವಾಣಿ’ ಪತ್ರಿಕೆಯ ಬುಧವಾರದ ಸಂಚಿಕೆಯ ಮುಖಪುಟದಲ್ಲಿ ಪ್ರಕಟವಾದ ‘ನಾಯ್ಕಲ್ ಗ್ರಾಮದಲ್ಲಿ ನೀರಿಗೆ ಪರದಾಟ’ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು, ಬುಧವಾರವೇ ಸಮಸ್ಯೆ ನಿವಾರಣೆಗೆ ಮುಂದಾಗಿದ್ದಾರೆ.
ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಶಹಾಪುರ ತಹಶೀಲ್ದಾರರು ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು, ನಾಯ್ಕಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳನ್ನು ಸಂಪರ್ಕಿಸಿ, ಗ್ರಾಮದ ನೀರಿನ ಸಮಸ್ಯೆಯನ್ನು ಬುಧವಾರ ಸಂಜೆಯವರೆಗೆ ಸರಿಪಡಿಸುವಂತೆ ತಾಕೀತು ಮಾಡಿದರು.
ಅಧಿಕಾರಿಗಳ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ದೇವರಾಜ್ ಮತ್ತು ಪಿಡಿಒ ಸಿದ್ರಾಮಪ್ಪ ಕ್ಯಾತನಕಟ್ಟೆ, ಕೊಳವೆಬಾವಿಗೆ ಹೊಸ ಮೋಟಾರ್ ಹಾಗೂ ಸ್ಟಾರ್ಟರ್ ಅಳವಡಿಸಲು ಕ್ರಮ ಕೈಗೊಂಡಿದ್ದಾರೆ.
ಮೋಟಾರ್ ದುರಸ್ತಿ ಮಾಡಲು ಮೆಕ್ಯಾನಿಕ್ ತೋರಿದ ನಿಷ್ಕಾಳಜಿಯಿಂದ ತೊಂದರೆಯಾಗಿದೆ. ಗುರುವಾರ ಬೆಳಿಗ್ಗೆ ನಾಯ್ಕಲ್ ಗ್ರಾಮಸ್ಥರಿಗೆ ನೀರು ಸರಬರಾಜು ಮಾಡುವುದಾಗಿ ಗ್ರಾಮ ಲೆಕ್ಕಾಧಿಕಾರಿ ದೇವರಾಜ್ ಮತ್ತು ಪಿಡಿಒ ಸಿದ್ರಾಮಪ್ಪ ಕ್ಯಾತನಕಟ್ಟೆ ಭರವಸೆ ನೀಡಿದ್ದಾರೆ.
ವರದಿ ಪ್ರಕಟಿಸಿ ನೀರಿನ ಸಮಸ್ಯೆ ನಿವಾರಣೆಗೆ ಕಾರಣವಾದ ‘ಪ್ರಜಾವಾಣಿ’ ಪತ್ರಿಕೆಗೆ ನಾಯ್ಕಲ್ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.