ADVERTISEMENT

`ನಿದ್ದೆ ಮಂಪರಿನಿಂದ ಹೊರ ಬಂದ ಜಿಲ್ಲಾಧಿಕಾರಿ'

ಪ್ರಾದೇಶಿಕ ಆಯುಕ್ತರ ಚಾಟಿ ಏಟು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 11:07 IST
Last Updated 19 ಡಿಸೆಂಬರ್ 2012, 11:07 IST

ಶಹಾಪುರ: ಮರಳು ಗಣಿಗಾರಿಕೆಯ ಅವ್ಯವಹಾರದ ದೂರು ಕೇಳಿ ಬಂದಾಗ ಪ್ರಾದೇಶಿಕ ಆಯುಕ್ತರು ಬೀಸಿದ ಒಂದೇ ಚಾಟಿ ಏಟಿಗೆ ಜಿಲ್ಲಾಡಳಿತ ನಿದ್ದೆಯ ಮಂಪರಿನಿಂದ ಹೊರ ಬಂದಿದೆ ಎಂದು ಬಿಎಸ್ಸಾರ್ ಜಿಲ್ಲಾ ಅಧ್ಯಕ್ಷ ಆರ್.ಚೆನ್ನಬಸು ವನದುರ್ಗ ದೂರಿದ್ದಾರೆ
ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಹಿರಿಯ ಭೂ ವಿಜ್ಞಾನ ಹಾಗೂ ಗಣಿ ಇಲಾಖೆಯ ಅಧಿಕಾರಿಯ ಮೂಲಕ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಮೂವರು ಎಂಜಿನಿಯರ್ ವಿರುದ್ಧ ಶಹಾಪುರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಲು ಚೂ ಬಿಟ್ಟಿದ್ದು ಹಲವು ಗುಮಾನಿ ಕಾಡುತ್ತಲಿವೆ ಎಂಬ ಅಭಿಪ್ರಾಯ ಸಾರ್ವಜನಿಕರದು.

ಅಧಿಕಾರ ಸ್ವೀಕರಿಸಿದ ನಂತರ ಸ್ಥಗಿತಗೊಂಡಿದ್ದ ಮರಳು ಸಾಗಾಟದ ಗಣಿಗಾರಿಕೆಗೆ ಟೆಂಡರ್ ತಾಂತ್ರಿಕ ದೋಷಗಳನ್ನು ನೀಡಿ ನೇರವಾಗಿ ಮರಳು ಸಾಗಾಟಕ್ಕೆ ಅವಕಾಶ ನೀಡಿದ್ದು ಜಿಲ್ಲಾಧಿಕಾರಿ. ಅಕ್ರಮ ಮರಳು ಮಾರಾಟದ ಜಾಲದಲ್ಲಿ ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರ ಹಿಂಬಾಲಕರ ಶಾಸಕರ ಪುತ್ರ ಹೀಗೆ ಹಲವಾರು ಮುಖಂಡರು ನೈಸರ್ಗಿ ಸಂಪತ್ತು ಕೊಳ್ಳೆ ಹೊಡೆಯುತ್ತಾ ಬಂದರು. ಕಳ್ಳತನದಿಂದ  ಸಾಗಾಟ ಮಾಡುತ್ತಿದ್ದ ಮರಳಿನ ಹಣದಲ್ಲಿ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ, ಸಾರಿಗೆ ಇಲಾಖೆ, ಜಿಲ್ಲಾಡಳಿತ, ಪೊಲೀಸ ಇಲಾಖೆ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆು ಉನ್ನತಾಧಿಕಾರಿಗಳು ಶಾಮೀಲಾಗಿದ್ದಾರೆ. ಕೋಟ್ಯಂತರ ಮೌಲ್ಯದ ಮರಳು ಸಾಗಾಟದ ತನಿಖೆಯನ್ನು ಲೋಕಾಯುಕ್ತರಿಗೆ ಒಪ್ಪಿಸಬೇಕೆಂದು ಬಿಎಸ್ಸಾರ್ ಜಿಲ್ಲಾ ಅಧ್ಯಕ್ಷ ಆರ್.ಚೆನ್ನಬಸು ವನದುರ್ಗ ಆಗ್ರಹಿಸಿದ್ದಾರೆ.

ಕೊನೆಗೆ ಮುನಮುಟಗಿ ಗ್ರಾಮಸ್ಥರು ದಂಗೆ ಎದ್ದು ಬೀದಿಗಿಳಿದು ಹೋರಾಟ ನಡೆಸಿದಾಗ ಜಪ್ಪೇನ್ನದ ಜಿಲ್ಲಾಡಳಿತ ಕೊನೆಗೆ ಪ್ರಾದೇಶಿಕ ಆಯುಕ್ತರ ಮೂಲಕ ದೂರವಾಣಿ ಕರೆ ಬಂದಾಗ ನಿದ್ದೆ ಮಂಪರಿನಿಂದ ಹೊರಬಂದು 60 ಲಾರಿ ವಶಪಡಿಸಿಕೊಂಡು 9.30ಲಕ್ಷ ದಂಡ ವಸೂಲಿ ಮಾಡಿದ್ದರು.

ಮತ್ತಷ್ಟು ಲಾರಿಯ ಮೂಲಕ ಮರಳು ಸಾಗಾಟ ಶುರುವಾದಾಗ ಸಾರ್ವಜನಿಕರು ತೀವ್ರ ಪ್ರತಿಭಟನೆಯನ್ನು ಜಿಲ್ಲಾಡಳಿತ ಎದುರಿಸಬೇಕಾಯಿತು. ಕೊನೆಗೆ ಅಸಹಾಯಕರಾಗಿ ಯಾವುದೇ ಆದೇಶವಿಲ್ಲದೆ ಏಕಮುಖ ನಿರ್ಧಾರದ ಮೂಲಕ  ಮರಳು ಸಾಗಾಟಕ್ಕೆ ನಿಷೇಧ ಹಾಕಿದ್ದು ಜಿಲ್ಲೆಯ ತುಘಲಕ್ ಆಡಳಿತವಾಗಿದೆ ಎಂದು ವನದುರ್ಗ ಟೀಕಿಸಿದ್ದಾರೆ.

ಲೂಟಿಕೋರ: `ಬೇಲಿ ಎದ್ದು ಹೊಲ ಮೆಯ್ದಂತೆ' ಅಕ್ರಮ ಮರಳು ದಂಧೆಗೆ  ಜಿಲ್ಲಾಧಿಕಾರಿ ಹೊಣೆಯಾಗಿದ್ದಾರೆ. ಸರ್ಕಾರದ ನಿಯಮಗಳನ್ನು ಪಾಲಿಸದೆ ನೇರವಾಗಿ ಗುತ್ತಿಗೆಯ ಮೂಲಕ ಸಾಗಾಟಕ್ಕೆ ಅವಕಾಶ ನೀಡಿದ್ದು ಜಿಲ್ಲಾಧಿಕಾರಿಯ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಾಗಿದೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಶರಣಪ್ಪ ಸಲಾದಪೂರ ತಿಳಿಸಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರ ಹಿಂಬಾಲಕರಿಗೆ, ಸ್ಥಳೀಯ ಶಾಸಕರ ಪುತ್ರ ಹಾಗೂ ರಕ್ತ ಸಂಬಂಧಿಗಳಿಗೆ ಮಾತ್ರ ಮರಳು ಲೂಟಿಗೆ ಅವಕಾಶ ನೀಡಿದ್ದಾರೆ. ಹಲವಾರು ವರ್ಷಗಳಿಂದ ಖಾಯಂ ಆಗಿ ಠಿಕಾಣಿ ಹೂಡಿರುವ ಲೋಕೋಪಯೋಗಿ ಭ್ರಷ್ಟ ಎಂಜಿನಿಯರ್ ಖೊಟ್ಟಿ ಪತ್ರ ನೀಡಿ ಅಕ್ರಮ ಎಸಗಿದ್ದಾರೆ. ಅಕ್ರಮ ಮರಳು ಮಾಫಿಯ ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರನ್ನು ನೇಮಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಮರಳು ರಾಶಿ: ತಾಲ್ಲೂಕಿನ ಹೈಯ್ಯಾಳ, ಗೌಡೂರ, ಐಕೂರ ಹಾಗೂ ಇನ್ನಿತರ ಕಡೆ ಲಕ್ಷಾವಧಿ ಮೌಲ್ಯದ ಮರಳನ್ನು ಸಂಗ್ರಹಿಸಿ ಇಡಲಾಗಿದೆ. ಜಿಲ್ಲಾಡಳಿತ ಒಪ್ಪಿಕೊಂಡಿರುವಂತೆ ಖೊಟ್ಟಿ ರಾಯಲ್ಟಿ ಪ್ರಮಾಣ ಪತ್ರ ಪಡೆದು ಕಳ್ಳತನದಿಂದ ಮರಳು ಸಾಗಾಟ ನಡೆದಿದೆ ಎನ್ನುವಾಗ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವ ಮರಳು ವಶಪಡಿಕೊಂಡು ಚೋರರ ವಿರುದ್ಧ ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಜೆಡಿಎಸ್ ಎಸ್ಸಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಶರಣು ರಡ್ಡಿ ಆಗ್ರಹಿಸಿದ್ದಾರೆ.

ಬಳ್ಳಾರಿಯ ಗಣಿಗಾರಿಕೆಯಂತೆ ತಾಲ್ಲೂಕಿನಲ್ಲಿ ಮರಳು ಗಣಿಗಾರಿಕೆಯ ಅವ್ಯವಹಾರ ನಡೆಯುತ್ತಲಿದೆ. ಜಿಲ್ಲಾಡಳಿತದ ಕಣ್ಣು ಮುಂದೆ ಮರಳಿನ ರಾಶಿ ಬಿದ್ದಿದೆ. ತಕ್ಷಣ ಕ್ರಮಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.