ADVERTISEMENT

ಪರಿಹಾರಕ್ಕೆ ಹಗ್ಗಜಗ್ಗಾಟ

ಪ್ರಜಾವಾಣಿ ವಿಶೇಷ
Published 24 ಸೆಪ್ಟೆಂಬರ್ 2013, 7:04 IST
Last Updated 24 ಸೆಪ್ಟೆಂಬರ್ 2013, 7:04 IST
ಸೈದಾಪುರ ಗ್ರಾಮದ ಬಳಿ ಯುರೇನಿಯಂ ಸಂಸ್ಕರಣಾ ಘಟಕ ಸ್ಥಾಪಿಸಲು ಉದ್ದೇಶಿರುವ ಪ್ರದೇಶ
ಸೈದಾಪುರ ಗ್ರಾಮದ ಬಳಿ ಯುರೇನಿಯಂ ಸಂಸ್ಕರಣಾ ಘಟಕ ಸ್ಥಾಪಿಸಲು ಉದ್ದೇಶಿರುವ ಪ್ರದೇಶ   

ಶಹಾಪುರ: ಯುರೇನಿಯಂ ಘಟಕ ಸ್ಥಾಪನೆಗೆ ತಾಲ್ಲೂಕಿನ ಉಮರದೊಡ್ಡಿ, ಸೈದಾಪುರ, ದಿಗ್ಗಿ ಗ್ರಾಮದ ಬಳಿ  206 ಎಕರೆ ಭೂಮಿಯನ್ನು  ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಅತ್ಯಲ್ಪ ಮೊತ್ತದ  ಭೂ ಪರಿಹಾರವನ್ನು  ಪಡೆದುಕೊಳ್ಳಲು  ರೈತರು ನಿರಾಕರಿಸಿದ್ದಾರೆ.

ಇದನ್ನು ಲೆಕ್ಕಿಸದೆ ವಿಶೇಷ  ಭೂ ಸ್ವಾಧೀನ  ಅಧಿಕಾರಿ ಸಹಾಯಕ ಆಯುಕ್ತ ಬಿ.ಪಿ.ವಿಜಯ ಪರಿಹಾರ ಮೊತ್ತವನ್ನು  ಭೂ ವಂಚಿತ ರೈತರ ಹೆಸರಿನಲ್ಲಿ  ಬ್ಯಾಂಕಿನಲ್ಲಿ ಠೇವಣಿ  ಇಟ್ಟಿದ್ದಾರೆ. ಅಧಿಕಾರಿಯ ವರ್ತನೆ ರೈತರನ್ನು ಕೆರಳಿಸಿದೆ.

ಭೂಸ್ವಾಧೀನ ಪ್ರಸ್ತಾವನೆ ಕೈ ಬಿಡುವಂತೆ ರೈತರು ಪಟ್ಟುಹಿಡಿದರೆ ಜಿಲ್ಲಾಡಳಿತವು ಯಾವುದಕ್ಕೂ ಜಗ್ಗದೆ ಮೌನವಹಿಸಿದೆ. ಪರ–ವಿರೋಧ ಹೋರಾಟದ ಕಾವು ಹೆಚ್ಚತೊಡಗಿದೆ. ‘ನ್ಯಾಯ ದೇಗುಲದ ಕದ ತಟ್ಟುವುದು ಅನಿವಾರ್ಯವಾಗಿದೆ’ ಎಂದು ತಾಲ್ಲೂಕು ಸಿಪಿಐ(ಎಂ) ಕಾರ್ಯದರ್ಶಿ ಎಸ್‌.ಎಂ.ಸಾಗರ ತಿಳಿಸಿದ್ದಾರೆ.

20 ವರ್ಷದಿಂದ  ಕೇಂದ್ರ ಅಣುಶಕ್ತಿ ನಿರ್ದೇಶನಾಲಯದ  ಯುರೇನಿಯಂ ಕಾರ್ಪೋ­ರೇಷನ್‌ ಆಫ್‌ ಇಂಡಿಯಾ (ಯುಸಿಐಎಲ್‌) ಗೋಗಿ ಗ್ರಾಮದಲ್ಲಿ  7ಎಕರೆ 11 ಗುಂಟೆ ಜಾಗದಲ್ಲಿ ಗಣಿಗಾರಿಕೆ ನಡೆಸಿತ್ತು. ಉತ್ಕೃಷ್ಟವಾದ ಯುರೇನಿಯಂ ದೊರೆತ ಕಾರಣ 15 ವರ್ಷಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ 1.5ಲಕ್ಷ ಟನ್‌ ಯುರೇನಿಯಂ ತೆಗೆಯಲು ಉದ್ದೇಶಿಸಿದೆ. ಇದಕ್ಕಾಗಿ 550ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಿದೆ. ಅದರ ಮುಂದುವರೆದ ಭಾಗ ಎನ್ನುವಂತೆ 206 ಎಕರೆ ಭೂಮಿಯನ್ನು ವಶಪಡಿಸಿ­ಕೊಳ್ಳಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.

ಭೂ ಪರಿಹಾರ  ನೀಡುವಲ್ಲಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಥರ್ಮಲ್‌ ಪವರ್‌ ಕಂಪೆನಿಗಾಗಿ ವಶಪಡಿಸಿಕೊಂಡ ಭೂಮಿಗೆ ಲಕ್ಷಾಂತರ ರೂಪಾಯಿ ಪರಿಹಾರ ಧನ ನೀಡಿದ್ದಾರೆ. ಆದರೆ ಗಣಿಗಾರಿಕೆಗಾಗಿ ವಶಪಡಿಸಿಕೊಂಡ ಜಮೀನಿಗೆ ಎಕರೆಗೆ ಕೇವಲ 50ರಿಂದ 70 ಸಾವಿರ  ನೀಡಿದ್ದಾರೆ ಎಂಬುದು ರೈತರ ಆರೋಪ.

ಯುರೇನಿಯಂ ಗಣಿಗಾರಿಕೆಗಾಗಿ ಭೂಮಿಯನ್ನು ವಶಪಡಿಸಿಕೊಳ್ಳುವಾಗ  ರೈತರ ಜೊತೆ ಸಮಾ­ಲೋಚನೆ ನಡೆಸಿ ಮುಂದಿನ ಕ್ರಮ ತೆಗೆದು­ಕೊಳ್ಳಲಾಗುವುದು ಎಂದು ಅಂದಿನ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ ಹೇಳಿದ್ದರು. ಆದರೆ ಈಗ ಏಕಾಏಕಿ ಜಮೀನು ವಶಪಡಿಸಿಕೊಂಡಿರುವುದು ಅನ್ಯಾಯ ಎಂದು ಭೂಮಿ ತಾಯಿ  ಹೋರಾಟ ಸಮಿತಿ ಸಂಚಾಲಕ ಮಲ್ಲಣ್ಣ ಪರಿವಾಣ ದೂರಿದ್ದಾರೆ.

ಸ್ಪಷ್ಟನೆ: ‘ತಾಂತ್ರಿಕ ಕಾರಣದಿಂದ ಸದ್ಯ ಗಣಿಗಾರಿಕೆಯನ್ನು ಸ್ಥಗಿತ­ಗೊಳಿಸಲಾಗಿದೆ. ಯೋಜನೆಗೆ ಅಗತ್ಯವಾದ ಜಮೀನು ಒದಗಿಸಲು ಸೂಚಿಸಿದ್ದರಿಂದ  ಭೂಮಿ ವಶಪಡಿಕೊಳ್ಳಲಾಗಿದೆ. ಉಪ ನೋಂದಣಿ ಕಾರ್ಯಾಲಯದಲ್ಲಿ ಆಯಾ ಗ್ರಾಮಗಳ ಜಮೀನು ‘ಮೌಲ್ಯ’ದ ಆಧಾರದ ಮೇಲೆ ಭೂ ಪರಿಹಾರವನ್ನು ನಿಗದಿಪಡಿಸಿದೆ. ಹೆಚ್ಚಿನ ಪರಿಹಾರ ಧನವನ್ನು ನೀಡುವ ಅಧಿಕಾರ ನಮಗೆ ಇಲ್ಲವೆಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೇಡವೆ ಬೇಡ: ಘಟಕ ಸ್ಥಾಪನೆಯಿಂದ ಜೀವ ಸಂಕುಲಕ್ಕೆ ಅಪಾಯವಿದೆ. ಭೂಮಿ ಕಳೆದು­ಕೊಂಡವರಿಗೆ ಪರಿಹಾರ ದೊರೆಯಬಹುದು. ಆದರೆ ಮತ್ತೊಬ್ಬರಿಗೆ ಬೆಳಕು ನೀಡುವ ಉದ್ದೇಶದಿಂದ ಯೋಜನೆ ಸಿದ್ಧ­ಪಡಿಸುತ್ತಿರುವಾಗ ಇನ್ನೊಬ್ಬರ ಜೀವಿಸುವ ಹಕ್ಕನ್ನು ಕಸಿದು­ಕೊಳ್ಳುತ್ತಿರುವುದು ಸರಿಯಲ್ಲ.

ಗೋಗಿ ಗ್ರಾಮದಲ್ಲಿ ಯುರೇನಿಯಂ ನಿಕ್ಷೇಪದ ಸಂಶೋಧನೆಗಾಗಿ ಸುಮಾರು 500ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆದ ಪರಿಣಾಮ ಕಲುಷಿತ ನೀರು ಬಿಡುಗಡೆಯಾಗಿ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಯಾವುದೇ ಕಾರಣಕ್ಕೂ ದಿಗ್ಗಿ, ಉಮರದೊಡ್ಡಿ, ಸೈದಾಪುರ ಗ್ರಾಮದಲ್ಲಿ ಘಟಕ ಸ್ಥಾಪಿಸಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.