ADVERTISEMENT

ಪ್ರತಿ ವರ್ಷ ಅದ್ದೂರಿ ಸುರಪುರ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 6:40 IST
Last Updated 19 ಫೆಬ್ರುವರಿ 2011, 6:40 IST

ಸುರಪುರ: ಸುರಪುರ ಸಂಸ್ಥಾನದ ಅರಸರು ಆಂಗ್ಲರನ್ನು ಪರಾಭವಗೊಳಿಸಿದ ನೆನಪಲ್ಲಿ ಪ್ರತಿ ವರ್ಷ ಫೆ. 8 ರಂದು ಸುರಪುರದಲ್ಲಿ ವಿಜಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಇದಕ್ಕಾಗಿ ಸರ್ಕಾರದಿಂದ ಶಾಶ್ವತ ಅನುದಾನ ತರಲು ಯತ್ನಿಸಲಾಗುವುದು. ಈ ವಿಚಾರ ಸಂಕಿರಣದಲ್ಲಿ ಮಂಡನೆಯಾಗುವ ವಿಷಯಗಳನ್ನು ಕ್ರೋಢೀಕರಿಸಿ ಹಂಪಿ ವಿ.ವಿ. ಯಿಂದ ಪುಸ್ತಕ ರೂಪದಲ್ಲಿ ಪ್ರಕಟಿಸಲು ಕುಲಪತಿ ಒಪ್ಪಿಗೆ ನೀಡಿದ್ದಾರೆ ಎಂದು ಶಾಸಕ ರಾಜೂಗೌಡ ನುಡಿದರು.

ಇಲ್ಲಿನ ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣದಲ್ಲಿ ಶುಕ್ರವಾರ ನಾಯಕರ ಮಹಾಸಂಸ್ಥಾನ ಸುರಪುರದ ಬಗ್ಗೆ ಏರ್ಪಡಿಸಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಸುರಪುರದ ದೊರೆಗಳಿಗೆ ಮೋಘಲ ದೊರೆ ಔರಂಗಜೇಬ ನೀಡಿದ ಫರ್ಮಾನು ಪ್ರತಿಯನ್ನು ಕ್ಯಾಲೆಂಡರ್ ರೂಪದಲ್ಲಿ ಬಿಡುಗಡೆ ಮಾಡಲಾಗುವುದು. ರಾಜಾ ನಾಲ್ವಡಿ ವೆಂಕಟಪ್ಪನಾಯಕ ಅವರ ಭಾವಚಿತ್ರವನ್ನು ತಾಲ್ಲೂಕಿನ ಎಲ್ಲಾ ಶಾಲಾ, ಕಾಲೇಜುಗಳು, ಸರ್ಕಾರಿ ಕಾರ್ಯಾಲಯಗಳು ಮತ್ತು ವ್ಯಾಪಾರಿಗಳಿಗೂ ಉಚಿತವಾಗಿ ನನ್ನ ಸ್ವಂತ ಖರ್ಚಿನಲ್ಲಿ ವಿತರಿಸುತ್ತೇನೆ. ವಾಗಣಗೇರಿ ಕೋಟೆಯನ್ನು ಜೀರ್ಣೋದ್ಧಾರ ಮಾಡುತ್ತೇನೆ. ಸುರಪುರದ ಇತಿಹಾಸದ ಉಳಿವಿಗಾಗಿ ಶ್ರಮಿಸುವ ಭರವಸೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಕೃಷ್ಣದೇವರಾಯ ವಿ.ವಿ.ಯ ಕುಲಸಚಿವ ಡಾ. ರಂಗರಾಜ ವನದುರ್ಗ, ತನ್ನ ಪತಿಗೆ ಆದ ಅನ್ಯಾಯವನ್ನು ಲಂಡನ್‌ನ ಹೌಸ್ ಆಫ್ ಕಾಮನ್ಸ್‌ನಲ್ಲಿ ಪ್ರತಿಭಟಿಸಿದ ಭಾರತದ ಮೊಟ್ಟ ಮೊದಲ ಮಹಿಳೆ ರಾಣಿ ಈಶ್ವರಮ್ಮ. ಇಂತಹ ಕೆಚ್ಚೆದೆಯ ಸುರಪುರದ ವೀರ ಮಹಿಳೆಯರ ಮತ್ತು ಅರಸರ ವಿಷಯಗಳು ಇತಿಹಾಸದ ಪುಟ ಸೇರದಿರುವುದು ದುರಂತ ಎಂದು ವಿಷಾದಿಸಿದರು.

ಈಗಿನ ನಾರಾಯಣಪುರ ಆಣೆಕಟ್ಟೆಯ ನೀಲನಕಾಶೆ ಮತ್ತು ರೂ. 6ಲಕ್ಷ ವೆಚ್ಚದ ಕ್ರೀಯಾ ಯೋಜನೆಯನ್ನು ಅಂದಿನ ಸುರಪುರ ಸಂಸ್ಥಾನದ ದಿವಾನ ವೀರಪ್ಪ ನಿಷ್ಠಿ ಸಿದ್ಧಪಡಿಸಿದ್ದರು. ಮೆಡೋಜ್ ಟೇಲರ್ ಒಬ್ಬ ಗೋಮುಖ ವ್ಯಾಘ್ರ. ಸುರಪುರ ಸಂಸ್ಥಾನದ ಅಳಿವಿಗೂ ಮತ್ತು ಅರಸನ ಸೆರೆಗೆ ಪ್ರಮುಖ ಸೂತ್ರಧಾರಿ. ಈತನನ್ನು ನಂಬದಂತೆ ಆತನ ತಾಯಿ ಹೇಳಿದ್ದರೂ ಟೇಲರ್‌ನನ್ನು ನಂಬಿದ್ದು ದುರಂತವಾಯಿತು ಎಂದು ಇತಿಹಾಸದ ಸತ್ಯವನ್ನು ಬಿಚ್ಚಿಟ್ಟರು.

ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ್, ಇತಿಹಾಸ ಲೇಖಕ ಭಾಸ್ಕರರಾವ ಮುಡಬೋಳ್, ಅಧ್ಯಕ್ಷತೆ ವಹಿಸಿದ್ದ ಹಂಪಿ ವಿ.ವಿ. ಕುಲಪತಿ ಡಾ. ಎ. ಮುರಿಗೆಪ್ಪ ಮಾತನಾಡಿದರು.
ಮಾಜಿ ಜಿ.ಪಂ. ಅಧ್ಯಕ್ಷ ರಾಜಾ ಹನುಮಪ್ಪನಾಯಕ್, ವಿಜಾಪುರ ಜಿಲ್ಲಾ ಕಾರಾಗೃಹದ ಅಧೀಕ್ಷಕ ವಿರೇಂದ್ರ ಸಿಂಹ, ಉಪನ್ಯಾಸಕ ವೇಣುಗೋಪಾಲ ಜೇವರ್ಗಿ, ಮುಖಂಡ ಶಾಂತಗೌಡ ಚನ್ನಪಟ್ಟಣ, ಬಿ.ಇ.ಓ. ಶಾಂತಗೌಡ ಪಾಟೀಲ ವೇದಿಕೆಯಲ್ಲಿದ್ದರು. ಹಂಪಿ ವಿ.ವಿ. ವಾಲ್ಮೀಕಿ ಅಧ್ಯಯನ ಪೀಠದ ಸಂಚಾಲಕ ಡಾ. ತಾರಿಹಳ್ಳಿ ಹನುಮಂತಪ್ಪ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ರಜಾಕ್ ಭಾಗವಾನ್ ನಿರೂಪಿಸಿದರು. ಹಂಪಿ. ವಿ.ವಿ. ಉಪನ್ಯಾಸಕ ಡಾ. ಹನುಮಂತಪ್ಪನಾಯಕ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.