ADVERTISEMENT

ಪ್ರವಾಸಿತಾಣ ಸಮಗ್ರ ಅಭಿವೃದ್ಧಿಯಾಗಲಿ

ಶಹಾಪುರ: ನೂತನ ಶಾಸಕರ ಮುಂದೆ ಇರುವ ಸವಾಲು

​ಪ್ರಜಾವಾಣಿ ವಾರ್ತೆ
Published 21 ಮೇ 2018, 11:09 IST
Last Updated 21 ಮೇ 2018, 11:09 IST
ಶಹಾಪುರದ ಬೀದರ–ಶ್ರೀರಂಗಪಟ್ಟಣ ಹೆದ್ದಾರಿಯ ಮೇಲೆ ಬೆಟ್ಟದ ಸಾಲುಗಳ ಮೇಲೆ ಮಲಗಿರುವ ಬುದ್ದನ ದೃಶ್ಯ
ಶಹಾಪುರದ ಬೀದರ–ಶ್ರೀರಂಗಪಟ್ಟಣ ಹೆದ್ದಾರಿಯ ಮೇಲೆ ಬೆಟ್ಟದ ಸಾಲುಗಳ ಮೇಲೆ ಮಲಗಿರುವ ಬುದ್ದನ ದೃಶ್ಯ   

ಶಹಾಪುರ: ತಾಲ್ಲೂಕಿನಲ್ಲಿ ಹಲವಾರು ಪ್ರವಾಸಿತಾಣ ಹಾಗೂ ಐತಿಹಾಸಿಕ ಸ್ಮಾರಕಗಳ ಹೆಜ್ಜೆ ಗುರುತುಗಳಿವೆ. ಆದರೆ, ರಾಜಕೀಯ ಇಚ್ಛಾಶಕ್ತಿ ಹಾಗೂ ಅಧಿಕಾರಿಗಳ ಅಸಡ್ಡೆಯಿಂದ ತಾಣಗಳಿಗೆ ಸೂಕ್ತ ಕಾಯಕಲ್ಪವಿಲ್ಲದೆ ಭಣಗುಟ್ಟುತ್ತಿವೆ.

ಶಹಾಪುರ ಬಳಿಯ ಬೀದರ್‌–ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಬೆಟ್ಟಗಳ ಸಾಲಿನ ಮೇಲೆ ನಿಸರ್ಗದ ಮಡಲಿನಲ್ಲಿ ಬುದ್ಧ ಮಲಗಿರುವಂತಹ ದೃಶ್ಯ ಕಾಣುತ್ತದೆ.

‘ಕಳೆದ 10 ವರ್ಷದಿಂದ ಪ್ರವಾಸಿತಾಣಕ್ಕೆ ಚಾಲನೆ ನೀಡಲಾಗಿದೆ. ಆದರೆ, ಅಭಿವೃದ್ಧಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಪ್ರಗತಿಗಾಗಿ ಐದು ವರ್ಷದಿಂದ ಕೇಂದ್ರ ಸರ್ಕಾರದಿಂದ ₹ 4 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಅದು ಕೂಡ ಸದ್ಬಳಕೆಯಾಗಿಲ್ಲ. ಪ್ರವಾಸಿ ತಾಣಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ಸೋತಿದ್ದಾರೆ’ ಎನ್ನುತ್ತಾರೆ ಇತಿಹಾಸಕಾರರ ಭಾಸ್ಕರರಾವ ಮುಡಬೂಳ.

ADVERTISEMENT

ಕೆರೆಗಳಿಗೆ ಕಾಯಕಲ್ಪವಿಲ್ಲ:
ನಗರದ ಜನತೆಯ ಪಾಲಿಗೆ ಎರಡು ಕಣ್ಣಿನಂತೆ ಇರುವ ನಾಗರಕೆರೆ ಹಾಗೂ ಮಾವಿನ ಕೆರೆಗೆ ಕಾಯಕಲ್ಪ ಇಲ್ಲವಾಗಿದೆ. ಕೆರೆಗಳನ್ನು ಅಭಿವೃದ್ಧಿಪಡಿಸಿದ್ದಲ್ಲಿ ಅಂತರ್ಜಲಮಟ್ಟವೂ ಸುಧಾರಿಸುತ್ತದೆ. ಜತೆಗೆ ಕೊಳವೆಬಾವಿಯಲ್ಲಿ ನೀರು ಬರುತ್ತದೆ ಎನ್ನುತ್ತಾರೆ ಸ್ಥಳೀಯರು.

ವರ್ಷದ ಹಿಂದೆ ಜಿಲ್ಲಾ ಪಂಚಾಯಿತಿ ಅನುದಾನದ ಅಡಿಯಲ್ಲಿ ₹ 60 ಲಕ್ಷ ವೆಚ್ಚದಲ್ಲಿ ನಾಗರಕೆರೆ ಅಭಿವೃದ್ಧಿ ಕೆರೆಗೆ ಹಣ ವೆಚ್ಚ ಮಾಡಿದ್ದಾರೆ. ಸಮರ್ಪಕವಾಗಿ ಕಾಮಗಾರಿ ನಿರ್ವಹಿಸಲಿಲ್ಲ. ಕೆರೆಯ ಸುತ್ತ ಬೆಳೆದು ನಿಂತ ಜಾಲಿಗಿಡ ತೆಗೆಯುವುದರ ಜತೆಯಲ್ಲಿ ಕೆರೆಯಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆಯುವುದನ್ನು ನಿಷೇಧಿಸಬೇಕು. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಅದರ ಸುತ್ತಮುತ್ತಲು ಸಸಿಗಳನ್ನು ನೆಡಬೇಕು. ಅಲ್ಲದೆ ಮಾವಿನ ಕೆರೆಯಲ್ಲಿ ಬೊಟಿಂಗ್ ವ್ಯವಸ್ಥೆ ಮಾಡುವ ಯೋಜನೆಯು ನನೆಗುದಿಗೆ ಬಿದ್ದಿದೆ. ಮತ್ತೆ ಕೆರೆಗೆ ಮರುಜೀವ ನೀಡಬೇಕು ಎನ್ನುತ್ತಾರೆ ನಗರದ ಪರಿಸರ ಪ್ರೇಮಿ ಬಸವರಾಜ.

ತಾಲ್ಲೂಕಿನ ಕೊಳ್ಳೂರ ಗ್ರಾಮದ ಬಳಿ ಕೃಷ್ಣಾ ನದಿಯ ತಟದಲ್ಲಿ ದೊರೆತಿದೆ ಎನ್ನಲಾದ ‘ಕೊಹಿನೂರ ವಜ್ರ’ ಸ್ಥಳದ ಸ್ಮಾರಕವನ್ನು ನಿರ್ಮಿಸಲು ಅಂದಿನ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿದ್ದ ಶಾಲಿನಿ ರಜನೀಶ್ ಹೆಚ್ಚಿನ ಆಸಕ್ತಿ ವಹಿಸಿದ್ದರು. ಅಲ್ಲಿನ ವೃಂದಾವನ ಗಡ್ಡೆಯ ಬಳಿ ಕಮಾನು ನಿರ್ಮಿಸಿ ಮಾಹಿತಿಯ ವಿವರವುಳ್ಳ ನಾಮಫಲಕ ಹಾಕಬೇಕು ಎನ್ನುವ ಪ್ರಸ್ತಾವನೆ ಮೂಲೆಗುಂಪಾಗಿದೆ. ದೇಶದ ಅಪರೂಪದ ಕೊಹಿನೂರ ವಜ್ರ ಸಿಕ್ಕ ಸ್ಥಳಕ್ಕೆ ಪ್ರವಾಸಿತಾಣದ ಮೆರಗು ನೀಡಬೇಕು ಎನ್ನುತ್ತಾರೆ ಕೊಳ್ಳೂರ ಗ್ರಾಮದ ವಾಲ್ಮೀಕಿ ಹನುಂತಪ್ಪ.

ಭಾವೈಕ್ಯತೆಯ ತಾಣವಾಗಿರುವ ಗೋಗಿ ಚಂದಾಹುಸೇನಿ ದರ್ಗಾ, ಮಹಲರೋಜಾ ಗ್ರಾಮದ ಅಂಕುಶಖಾನ್ ಸಮಾಧಿಯ ರಕ್ಷಣೆ ಅಗತ್ಯವಾಗಿದೆ. ಅಲ್ಲದೆ ಶಹಾಪುರ–ಸುರಪುರ ಹೆದ್ದಾರಿಯ ವಿಭೂತಿಹಳ್ಳಿ ಗ್ರಾಮದ ಬಳಿಯ ‘ಕಾಲ ನಿರ್ಣಯದ ಕಲ್ಲುಗಳು’ ಸ್ಮಾರಕಕ್ಕೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕು. ರಸ್ತಾಪೂರದ ಭೀಮಕವಿ ಸಮಾಧಿಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಸಾಹಿತಿಗಳು ಚಿಂತನೆ ನಡೆಸುವುದು ತುರ್ತು ಕೆಲಸ ಆಗಬೇಕಾಗಿದೆ. ನೂತನ ಶಾಸಕರು ಪ್ರವಾಸಿತಾಣ ಹಾಗೂ ಐತಿಹಾಸಿಕ ಸ್ಮಾರಕಗಳ ಅಭಿವೃದ್ಧಿ ಪಡಿಸಲು ಪ್ರಾಮಾಣಿಕವಾಗಿ ಯತ್ನಿಸಬೇಕು ಎಂದು ತಾಲ್ಲೂಕಿನ ಜನರು ಒತ್ತಾಯಿಸುತ್ತಾರೆ.

**
ತಾಲ್ಲೂಕಿನಲ್ಲಿ ಪ್ರವಾಸಿ ತಾಣ ಅಭಿವೃದ್ಧಿಗೆ ಗ್ರಹಣ ಬಡಿದಿದೆ. ಐತಿಹಾಸಿಕ ಸ್ಮಾರಗಳ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ
- ಭಾಸ್ಕರರಾವ ಮುಡಬೂಳ, ಇತಿಹಾಸ ಸಂಶೋಧಕ
ಟಿ.ನಾಗೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.