ADVERTISEMENT

ಬತ್ತಿದೆ ಕೃಷ್ಣೆ: ಹೆಚ್ಚಿದೆ ಆತಂಕ...!

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 7:25 IST
Last Updated 4 ಏಪ್ರಿಲ್ 2012, 7:25 IST

ಶಹಾಪುರ:  ತಾಲ್ಲೂಕಿನ ಕೃಷ್ಣಾ ನದಿ ತಟದಲ್ಲಿ 28ಕ್ಕೂ ಹೆಚ್ಚು ಹಳ್ಳಿಗಳು ಬರುತ್ತವೆ. ಬದುಕಿನ ಸರ್ವಸ್ವ ಆಗಿರುವ ಕೃಷ್ಣೆ ನೀರಿಲ್ಲದೆ ಒಣಗುತ್ತಿರುವುದು ಗ್ರಾಮಸ್ಥರ ಆತಂಕ ಹೆಚ್ಚಿಸಿದೆ. ಮುಂದೇನು ಎಂಬ ಚಿಂತೆ ಆವರಿಸಿದೆ.

ತಾಲ್ಲೂಕಿನ ಮರಕಲ್, ಕೊಳ್ಳೂರ, ಯಕ್ಷಿಂತಿ, ಹೈಯ್ಯಾಳ, ಅನಕಸೂಗೂರ, ಕೊಂಕಲ್, ಗೊಂದೆನೂರ, ಚೆನ್ನೂರ, ಐಕೂರ, ಗೌಡೂರ,ಗೋನಾಲ, ಕೊಡಾಲ್ ಸೇರಿದಂತೆ 28ಕ್ಕೂ ಹೆಚ್ಚು ಗ್ರಾಮಗಳು ಕೃಷ್ಣಾ ದಂಡೆಯ ಮೇಲೆ ಬರುತ್ತವೆ.

ನದಿ ನೀರಿನ ಸಹಾಯದಿಂದ ರೈತರು ನೂರಾರು ಎಕರೆ ಬತ್ತ, ಕಬ್ಬು ಬೆಳೆಗಳನ್ನು ಬೆಳೆದು ಬದುಕು ರೂಪಿಸಿಕೊಳ್ಳುತ್ತಿರುವಾಗ ಪ್ರಸಕ್ತ ವರ್ಷ ಕೈಕೊಟ್ಟ ಮಳೆಯಿಂದ ನದಿಗಳಲ್ಲಿಯೂ ನೀರಿನ ಹರಿವು ಗಣನೀಯವಾಗಿ ಇಳಿಮುಖವಾಗಿದೆ. ಬೆಳೆದು ನಿಂತ ಪೈರಿಗೆ ನೀರು ಇಲ್ಲವಾಗಿದೆ ಕಣ್ಣೆದರು ಬೆಳೆ ಒಣಗುವುದು ಒಂದೆಡೆಯಾದರೆ ನದಿ ಬತ್ತಿ ಕೆರೆಯಂಗಳದಂತೆ ಆಗಿದೆ ಇನ್ನೂ ಎರಡು ತಿಂಗಳು ಇದೇ ನೀರು ನಂಬಿ ಜೀವಿಸುವ ನಮಗೆ ಮುಂದೇನು ಅನಾಹುತ ಕಾದಿದೆ ಎನ್ನುತ್ತಾರೆ ಕೊಳ್ಳುರ ಗ್ರಾಮದ ಮುಖಂಡ ಶಿವರಡ್ಡೆಪ್ಪಗೌಡ.

ನದಿ ಭಾಗದ ಗ್ರಾಮಸ್ಥರು ಜಾನುವಾರುಗಳಿಗೆ ನೀರು ಕುಡಿಸಲು ಸೇರಿದಂತೆ ಬಟ್ಟೆ ಬರೆಗಳನ್ನು ಒಗೆದು ನೀರು ತೆಗೆದುಕೊಂಡು ಬರುವುದು ಸಾಮಾನ್ಯವಾಗಿದೆ. ಸರ್ಕಾರದ  ಬಹುತೇಕ ಯೋಜನೆಗಳು ದಾಖಲೆಗಳಲ್ಲಿ ಮಾತ್ರ ಜಾರಿಗೆ ಬರುತ್ತವೆ. ವಾಸ್ತವಾಗಿ ಗ್ರಾಮಗಳಿಗೆ ಕಾಲಿಟ್ಟರೆ ಅದರ ಅನುಷ್ಠಾನ ಹಾಗೂ ನೀರಿನ ಸಮಸ್ಯೆಯ ಭೀಕರತೆ ಅರ್ಥವಾಗದೆ ಇರದು.

ನದಿ ಪಾತ್ರದಲ್ಲಿ ನಿರಂತರವಾಗಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮನಬದಂತೆ ಭೂ ಒಡಲು ಅಗೆದು ಮರಳು ಸಾಗಾಣಿಕೆ ಮಾಡಿದ್ದು ಕೂಡಾ ಶಾಪವಾಗಿದೆ ಎಂಬುವುದು ಸ್ಥಳೀಯರ ಆರೋಪ.
ಕೊರೆಸಲಾಗಿರುವ ಕೊಳವೆ ಬಾವಿಗಳ ನಿರ್ವಹಣೆಯಿಲ್ಲ. ಬೇಸಿಗೆ ಕಾಲವೆಂದರೆ ಕೆಲ ದಲ್ಲಾಳಿಗಳಿಗೆ ಮಾರಿ ಹಬ್ಬವಾಗಿ ಪರಿಣಮಿಸಿದೆ.

ಕಿರು ನೀರು ಸರಬರಾಜು ಮೂಲಕ ವಿತರಣೆ ಮಾಡುವ ಪೈಪ್‌ಲೈನ್ ಒಡೆದು ಹಾಳಾಗಿದೆ. ವಿದ್ಯುತ್ ಕಣ್ಣು ಮುಚ್ಚಾಲೆಯಿಂದ ಮೋಟಾರ್ ಸುಟ್ಟಿದೆ. ರಿಪೇರಿಗೆ ಹಣ ಬೇಕು ಹೀಗೆ ರಗಳೆಗಳನ್ನು ಹೇಳುತ್ತಾ ಕಾಲ ಮುಂದೂಡುವುದು ಗ್ರಾಮ ಪಂಚಾಯಿತಿ ನಿತ್ಯದ ಕಾಯಕವಾಗಿದೆ. ಇನ್ನೂ ಕುಡಿಯುವ ನೀರು ಎಲ್ಲಿಂದ ಬರಬೇಕೆಂದು ಪ್ರಶ್ನಿಸುತ್ತಾರೆ ರೈತ ಹಣಮಂತರಾಯ.

ತಾಲ್ಲೂಕಿನಲ್ಲಿ ನೀರಿನ ಬರವಿಲ್ಲ. ನಿರ್ವಹಣೆಯ ಸಮಸ್ಯೆಯಿಂದ ಜನತೆ ನಲುಗುತ್ತಿದ್ದಾರೆ. ಅದರಲ್ಲೂ ಸ್ಥಳೀಯ ರಾಜಕೀಯ ಲಗಾಮದಿಂದ ಬೇಸತ್ತು ಹೋಗಿದ್ದಾರೆ. ನೀರು ಸರಬರಾಜು ಮಾಡುವ ಪಂಪ್ ಅಪರೇಟರ್ ರಾಜಕೀಯ ಪ್ರೇರಿತವಾಗಿ ಆಯ್ಕೆಯಾಗಿರುವುದರಿಂದ ಸಹಜವಾಗಿ ಸ್ವಾಮಿ ನಿಷ್ಠೆಯಿಂದ ಉದ್ಯೋಗ ನೀಡಿದ ಪ್ರಭುವಿಗೆ ನೀರು ಬರುತ್ತವೆ. ಕೆಲ ಪ್ರಭಾವಿ ವ್ಯಕ್ತಿಗಳು ನೀರು ಸಂಗ್ರಹವಾಗುವ ಟ್ಯಾಂಕ್‌ನ ಮೂಲಕ ನೇರವಾಗಿ ಪೈಪ್‌ಲೈನ್ ಅಳವಡಿಸಿಕೊಂಡಿದ್ದಾರೆ ಎನ್ನುವುದಕ್ಕೆ ವನದುರ್ಗ, ಸಿರವಾಳ, ಸಗರ ಗ್ರಾಮವೇ ಸಾಕ್ಷಿಯಾಗಿವೆ.

ನೀರು ಬಿಡುಗಡೆಗೂ ಜಾತಿಯ ಕಾಟವಿದೆ. ಗ್ರಾಮದ ಮೇಲ್ವರ್ಗದ ಬಡಾವಣೆಯಲ್ಲಿ ಸಮರ್ಪಕ ನೀರು ಬಂದರೆ ಅದೇ ಹಿಂದುಳಿದ ಮತ್ತು ದಲಿತರ ಬಡಾವಣೆಗಳಿಗೆ ಸರಿಯಾಗಿ ನೀರು ಕೂಡಾ ಹರಿಸುವುದಿಲ್ಲ. ಇದು ಕೂಡಾ ಬೇಸಿಗೆಯಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ ಎನ್ನುತ್ತಾರೆ ರೈತ ಮುಖಂಡ ಎಸ್.ಎಂ.ಸಾಗರ.

ಜಿಲ್ಲಾಧಿಕಾರಿಯವರು ನದಿ ತಟದ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆಯ ವಾಸ್ತವ ಚಿತ್ರಣ ಅರಿತು ತಕ್ಷಣ ಪರಿಹಾರ ಕಂಡುಕೊಂಡು ಕುಡಿಯುವ ನೀರು ಸರಬರಾಜು ಮಾಡಬೇಕೆಬುಂದು ಸಾರ್ವಜನಿಕರ ಮನವಿಯಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.