ADVERTISEMENT

ಬೀದಿ ನಾಯಿಗಳ ಕಾಟ ತಪ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 5:56 IST
Last Updated 17 ಡಿಸೆಂಬರ್ 2013, 5:56 IST

ಯಾದಗಿರಿ: ಬಿಡಾಡಿ ನಾಯಿಗಳು ವಡಗೇರಾದ ಗ್ರಾಮದ ತುಂಬ ಓಡಾಡುತ್ತಿದ್ದು, ಜನರಿಗೆ ತೊಂದರೆ ಕೊಡುತ್ತವೆ ಎಂದು ಕರವೇ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಅಬ್ದುಲ್ ಚಿಗಾನೂರ ದೂರಿದ್ದಾರೆ.

ಗ್ರಾಮದಲ್ಲಿ ಅನೇಕ ಬೀದಿ ನಾಯಿಗಳಿವೆ. ರಾತ್ರಿ ಸಮಯದಲ್ಲಿ ಇವುಗಳ ಕಾಟ ವಿಪರೀತವಾಗಿದೆ. ಸಾರ್ವಜನಿಕರು ಮನೆಗೆ ಹೋಗ­ಬೇಕಾದರೆ ಅಡ್ಡಗಟ್ಟುವುದರ ಜೊತೆಗೆ ಅನೇಕ ಬಾರಿ, ಕಡಿದು ಗಾಯಗೊಳಿಸಿವೆ. ಚಿಕ್ಕ ಬಾಲಕರನ್ನು ಕಡಿದ ಉದಾಹರಣೆಗಳಿವೆ. ಇದರಿಂದಾಗಿ ಗ್ರಾಮಸ್ಥರು ಭಯ­ಭೀತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಮುಖ್ಯ ರಸ್ತೆಯ ಮೇಲೆ ಕಾದಾಡುತ್ತಾ ಬಂದು ಸಾರ್ವಜನಿಕರ ಮೇಲೆ ಬೀಳುವ ಈ ನಾಯಿಗಳು, ಹಲವರಿಗೆ ತೊಂದರೆ ನೀಡುತ್ತಿವೆ. ಅನೇಕ ಬಾರಿ ವಯೋವೃದ್ಧರು ಇವುಗಳಿಂದ ತಪ್ಪಿಸಿಕೊಳ್ಳಲು ಹೋಗಿ ಕೈ ಕಾಲುಗಳನ್ನು ಮುರಿದು­ಕೊಂಡಿದ್ದಾರೆ. ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗಿದ್ದಾರೆ. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ­ವಾಗಿಲ್ಲ ಎಂದು ಆರೋಪಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಬೀದಿ ನಾಯಿಗಳ ಕಾಟ ತಪ್ಪಿಸಸಬೇಕು. ಇಲ್ಲದಿದ್ದರೆ, ಗ್ರಾಮಸ್ಥರ ಜೊತೆಗೂಡಿ ಕಚೇರಿಯ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಹೋಬಳಿ ಘಟಕದ ಅಧ್ಯಕ್ಷ ಶಿವುಕುಮಾರ ಕೊಂಕಲ್, ರಫಿ ದೇವದುರ್ಗ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.