ADVERTISEMENT

ಬೆಟ್ಟದ ಮೇಲಿನ ಮನೆಗೂ ತಪ್ಪಿಲ್ಲ ತೆರವಿನ ಆತಂಕ

​ಪ್ರಜಾವಾಣಿ ವಾರ್ತೆ
Published 3 ಮೇ 2011, 9:55 IST
Last Updated 3 ಮೇ 2011, 9:55 IST

ಶಹಾಪುರ: ಪಟ್ಟಣದ ಪುರಸಭೆಯ ತೆಕ್ಕೆಯಲ್ಲಿರುವ ಬೆಟ್ಟ (ಗುಡ್ಡ) ಪ್ರದೇಶದ ಸರ್ವೇನಂಬರ 38ರ 96 ಎಕರೆ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ದೇವಸ್ಥಾನ, ಮನೆ, ಮಠ, ಮಂದಿರ, ಮಸೀದಿ, ಜ್ಞಾನದೇಗುಲವನ್ನು ತೆರವುಗೊಳಿಸುವುದಕ್ಕಾಗಿ ಜಿಲ್ಲಾಡಳಿತ ನೇತೃತ್ವದಲ್ಲಿ ಸಮೀಕ್ಷೆ ನಡೆದಿದೆ. ಈಗಾಗಲೇ ಹಲವು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಬಡ ಜನತೆ ಆತಂಕಗೊಡು ಮುಂದೇನು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.

ಪಟ್ಟಣದ ಚರಬಸವೇಶ್ವರ ರಸ್ತೆಯ ಅಕ್ಕಪಕ್ಕ ಹಾಗೂ ಭವ್ಯವಾಗಿ ನಿರ್ಮಿಸಲಾಗಿರುವ ಧಮ್ಮಗಿರಿಯ ಸುತ್ತಮುತ್ತ, ಮಾವಿನ ಕೆರೆಗೆ ತೆರಳುವ ರಸ್ತೆಯ ಪ್ರದೇಶದ ಬೆಟ್ಟವನ್ನು ಒತ್ತುವರಿ ಮಾಡಿಕೊಂಡು ಮನೆ ತಲೆ ಎತ್ತಲು ಪುರಸಭೆಗೆ ತೆರಿಗೆ ಪಾವತಿಸಿದ್ದಾರೆ. ಅಕ್ರಮ ಸಕ್ರಮದಲ್ಲಿ ನಿರ್ಮಿಸಲಾದ ಮನೆಗಳಿಗೆ   ನಂಬರ ನೀಡಲಾಗಿದೆ. ವಿದ್ಯುತ್, ನಲ್ಲಿ ಸಂಪರ್ಕವನ್ನು ಪಡೆದುಕೊಂಡು ಸುಮಾರು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ಜೀವಿಸುತ್ತಿದ್ದಾರೆ.

ಸ್ವತಃ ಪುರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ರಾಜಕೀಯ ಮುಖಂಡರು ತಮ್ಮ ರಾಜಕೀಯ ಪ್ರಭಾವದ ಸಾರ್ಮಥ್ಯಕ್ಕೆ ತಕ್ಕಂತೆ ಸೂರು ವಂಚಿತ ಬಡಜನತೆಯಿಂದ ಹಣವನ್ನು ವಸೂಲಿ ಮಾಡಿ ಬೆಟ್ಟದಲ್ಲಿ ಮನೆಗಳನ್ನು ನಿರ್ಮಿಸಲು ಅವಕಾಶ ಕೊಟ್ಟಿದ್ದಾರೆ. ಅಧಿಕಾರಿಗಳ ಮಾತು ಹಾಗೂ ಸ್ಥಳೀಯ ರಾಜಕೀಯ ಮುಖಂಡರ ಭರವಸೆಯ ಮೇಲೆ ಲಕ್ಷಾವಧಿ ರೂಪಾಯಿ ವೆಚ್ಚ ಮಾಡಿ ಮನೆ ನಿರ್ಮಿಸಿದ್ದಾರೆ. ಈಗ ಪುರಸಭೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಒತ್ತುವರಿ ಮಾಡಿಕೊಂಡ ಬೆಟ್ಟದ ಪ್ರದೇಶವನ್ನು ಸಮೀಕ್ಷೆ ಮಾಡುತ್ತಿರುವುದು ಅಲ್ಲಿನ ನಿವಾಸಿಗಳಿಗೆ ನಿದ್ದೆಗೇಡಿಸಿದೆ.

ಪರವಾನಿಗೆ ನೀಡಿದ ಪುರಸಭೆ ಅಧಿಕಾರಿಗಳು ಈಗ ಹಾರಿಕೆ ಉತ್ತರ ನೀಡಿ ವಂಚಿಸುತ್ತಿದ್ದಾರೆ. ಕೆಲ ದಿನಗಳಲ್ಲಿ ಒತ್ತುವರಿ ತೆರವುಗೊಳಿಸಲಗುವುದು. ಮೇಲಾಧಿಕಾರಿಗಳ ಆದೇಶ ಪಾಲನೆ ಮಾಡುವುದು ನಮ್ಮ ಕೆಲಸ ಎನ್ನುವ ಕಂದಾಯ ಹಾಗೂ ಪುರಸಭೆ ಸಿಬ್ಬಂದಿ ಅಂದು ಯಾಕೆ ನಮಗೆ ಮನೆ ಕಟ್ಟಲು ಅವಕಾಶ ನೀಡಿದಿರಿ ಎಂದು ಪ್ರಶ್ನಿಸುತ್ತಾರೆ ಅತಂತ್ರ ಸ್ಥಿಯಲ್ಲಿರುವ ಮನೆಯ ಮಾಲಿಕರೊಬ್ಬರು.

ವಿಶಾಲವಾದ ಬೆಟ್ಟದ ಪ್ರದೇಶದ ವ್ಯಾಪ್ತಿಯಲ್ಲಿ ಮೈಗಳ್ಳರು ಹಲವು ವರ್ಷಗಳಿಂದ ಧರ್ಮದ ಹಾಗೂ ಜಾತಿ ಟಚಪ್ ನೀಡಿ ಮಠ, ಮಂದಿರ, ಮಸೀದಿ, ದೇವಸ್ಥಾನಗಳನ್ನು ನಿರ್ಮಿಸಿ ಅದರ ಪಕ್ಕದಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಒತ್ತುವರಿ ತೆರವಿಗೆ ಮುಂದಾದರೆ ಸಾಕು ಧಾರ್ಮಿಕ ಭಾವನೆಗಳನ್ನು ಮುಂದಿಟ್ಟು ಸರ್ಕಾರಿ ಜಾಗವನ್ನು ಉಳಿಸಿಕೊಳ್ಳುವ ವಂಚನೆಯ ತಂತ್ರವನ್ನು ರೂಪಿಸಿದ್ದಾರೆ ಎನ್ನುತ್ತಾರೆ ನಾಗಪ್ಪ.

ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಪುಕ್ಕಟೆ ಬರುವ ಸರ್ಕಾರದ ಜಾಗವನ್ನು ಕಬಳಿಸುವ ದುರುದ್ದೇಶದಿಂದ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ರಾಜಕೀಯ ಪ್ರಭಾವದಿಂದ ಎರಡು, ಮೂರು ಎಕರೆ ಜಾಗವನ್ನು ಸಂಸ್ಥೆಯ ಹೆಸರಿಗೆ ಪಡೆದುಕೊಂಡಿದ್ದು ಗುಟ್ಟಾಗಿ ಉಳಿದಿಲ್ಲ.

ಕೋಟ್ಯಂತರ ಮೌಲ್ಯದ ಸರ್ಕಾರಿ ಜಾಗವನ್ನು ವಶಪಡಿಸಿಕೊಂಡು ಅರಣ್ಯ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು. ಮಾವಿನ ಕೆರೆಯ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಿ ಉದ್ಯಾನ ನಿರ್ಮಿಸುವ ಇರ್ಯಾದೆ ಜಿಲ್ಲಾಡಳಿತಕ್ಕೆ ಇದೆ. 

ಮಲಗಿದ ಬುದ್ದ ಪ್ರದೇಶ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಐದುಕೋಟಿ ಹಣ ಬಿಡುಗಡೆ ಮಾಡಿ ಹಲವು ತಿಂಗಳು ಗತಿಸಿವೆ. ಹಲವು ತಾಂತ್ರಿಕ ಕಾರಣಗಳಿಂದ ಇನ್ನೂ ಕಾರ್ಯಾರಂಭಕ್ಕೆ ಹಸಿರು ನಿಶಾನೆ ಬಿದ್ದಿಲ್ಲ. ಇದೇ ಸ್ಥಿತಿ ಕೆಲ ದಿನಗಳ ಕಾಲ ಸಾಗಿದರೆ ಹಣ ವಾಪಸ್ಸು ಹೋಗುವ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.