ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 8:38 IST
Last Updated 21 ಸೆಪ್ಟೆಂಬರ್ 2013, 8:38 IST

ಯಾದಗಿರಿ: ವಿವಿಧ ಬೇಡಿಕೆಗಳ ಇಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿ ಸದಸ್ಯರು ಶುಕ್ರವಾರ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಸಮಿತಿ ಕಾರ್ಯದರ್ಶಿ ಜೈಲಾಲ ತೋಟದಮನಿ ಮಾತನಾಡಿ, ಸರ್ಕಾರ ಬಜೆಟ್‌ನಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಬಿಡಿಗಾಸು ನೀಡದೇ ಕಾರ್ಮಿಕರನ್ನು ವಂಚಿಸಿದೆ ಎಂದು ಆರೋಪಿಸಿದರು.

ಮನೆ ಕೆಲಸಗಾರರು, ಬೀದಿ ವ್ಯಾಪಾರಿಗಳು, ಆಟೊ ಚಾಲಕರು ಸೇರಿದಂತೆ ಅಸಂಘಟಿತರಿಗೆ ಲಭ್ಯವಿರುವ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಪರಿಹಾರ ಬಿಡುಗಡೆ ಮಾಡುತ್ತಿಲ್ಲ ಎಂದು ದೂರಿದರು.

ಸರ್ಕಾರದ ವಿವಿಧ ಯೋಜನೆಗಳಡಿ ದುಡಿ­ಯುತ್ತಿರುವ ಅಂಗನವಾಡಿ ನೌಕರರು, ಬಿಸಿಯೂಟದ ನೌಕರರು, ಆಶಾ ಕಾರ್ಯಕರ್ತೆಯರು, ಕಂಪ್ಯೂಟರ್ ಆಪರೇಟರ್‌ಗಳನ್ನು ನೌಕರರೆಂದು ಪರಿಗಣಿಸಬೇಕು. ಗ್ರಾಮ ಪಂಚಾಯಿತಿ ನೌಕರರಿಗೆ ರೂ. 10 ಸಾವಿರ ವೇತನ ಹೆಚ್ಚಿಸಬೇಕು.

ಮುಖ್ಯಗುರು ಹಾಗೂ ಮುಖ್ಯ ಅಡುಗೆಯವರ ಜಂಟಿ ಬ್ಯಾಂಕ್‌ ಖಾತೆ ರದ್ದುಗೊಳಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು, ಜನಸಾಮಾನ್ಯರ ವಸ್ತುಗಳ ಮೇಲಿನ ದರ ಏರಿಕೆ ತಡೆಗಟ್ಟಬೇಕು. ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು.

ಕನಿಷ್ಠ ವೇತನ ರೂ. 10ಸಾವಿರ ನಿಗದಿಗೊಳಿಸಬೇಕು, ಅಂಗನವಾಡಿ, ಬಿಸಿಯೂಟ ಖಾಸಗೀಕರಣ ತಡೆಯಬೇಕು. ಕಟ್ಟಡ ಕಾರ್ಮಿಕರಿಗೆ ರೂ. 2 ಸಾವಿರ ಪಿಂಚಣಿ ನೀಡಬೇಕು. ಎಸ್ಮಾ ಕಾಯ್ದೆ ಮರು ಜಾರಿಗೊಳಿಸಬಾರದು. ಪ್ರತಿಭಟನೆ, ಮೆರವಣಿಗೆ, ಸಭೆ ನಿಗ್ರಹಿಸುವ 2009ರ ನಿಯಮ ರದ್ದು ಗೊಳಿಸಬೇಕು ಎಂದು ಒತ್ತಾಯಿಸಿದರು.

ಗುತ್ತಿಗೆ ನೌಕರರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಕಾರ್ಮಿಕರಿಗೆ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. 45ದಿನಗಳ ಒಳಗಾಗಿ ಕಾರ್ಮಿಕ ಸಂಘಟನೆಗಳ ಕಡ್ಡಾಯ ನೋಂದಣಿ ದೃಢೀಕರಿಸಬೇಕು ಎಂದು ಒತ್ತಾಯಿಸಿದರು.

ಕಲ್ಪನಾ ಗುರಸಣಗಿ, ಗೋವಿಂದ ರಾಠೋಡ, ಶ್ರೀದೇವಿ ಹುಣಸಗಿ, ನಿಂಗಪ್ಪ ವಟೂರ, ರಾಜು ಯಾದಗಿರಿ, ನಾಗನಗೌಡ ತಳಕ, ಸುನಂದಾ, ಬಸಮ್ಮ ತಡಬಿಡಿ, ಬಸಲಿಂಗಮ್ಮ ನಾಟೇಕರ್, ಬಸಮ್ಮ ಆಲ್ದಾಳ, ಸಿದ್ದಯ್ಯ ಹಿರೇಮಠ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.