ADVERTISEMENT

ಭಕ್ತ ಸಾಗರದ ಮಧ್ಯ ಮಲ್ಲಯ್ಯನ ಬಂಡಿ ಉತ್ಸವ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 10:04 IST
Last Updated 2 ಅಕ್ಟೋಬರ್ 2017, 10:04 IST

ಕೆಂಭಾವಿ: ಪಟ್ಟಣದ ಐತಿಹಾಸಿಕ ಮಲ್ಲಯ್ಯನ ಬಂಡಿ ಉತ್ಸವವು ವಿಜಯದಶಮಿಯ ಮಾರನೇ ದಿನವಾದ ಭಾನುವಾರ ಜನಸಾಗರದ ಮಧ್ಯೆ ಸಡಗರ ಸಂಭ್ರಮದಿಂದ ನೆರವೇರಿತು. ಬೆಳಿಗ್ಗೆ ದೇವಸ್ಥಾನದಲ್ಲಿ ಮಲ್ಲಯ್ಯನಿಗೆ ವಿಶೇಷ ಪೂಜೆ ನಡೆಯಿತು. ನಂತರ ಮಧ್ಯಾಹ್ನ 12 ಗಂಟೆಗೆ ಹೂವು ಹಾಗೂ ಭಂಡಾರದಿಂದ ಶೃಂಗಾರಗೊಳಿಸಿದ್ದ ಮಲ್ಲಯ್ಯನ ಕಟ್ಟಿಗೆಯ ಮೂರ್ತಿಯನ್ನು ಬಂಡಿಯಲ್ಲಿ ಕೂರಿಸಲಾಯಿತು. ಮಲ್ಲಯ್ಯನನ್ನು ಹೊತ್ತ ಬಂಡಿಯನ್ನು ದೇವಸ್ಥಾನದಲ್ಲಿ ಪಟ್ಟದ ದೇವರು ಮಲ್ಲಿಕಾರ್ಜುನ ಪೂಜಾರಿ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು.

ಐತಿಹಾಸಿಕ ಈ ಉತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರು ಪಾಲ್ಗೊಂಡು ಮಲ್ಯಯ್ಯನ ದರ್ಶನ ಪಡೆದರು. ಬಂಡಿ ಉತ್ಸವದಲ್ಲಿ ಡೊಳ್ಳು ಕುಣಿತ ಭಜನೆ ನೋಡುಗರ ಮನ ತಣಿಸಿತು.

ಮುಖ್ಯ ಬಜಾರ ರಸ್ತೆಯಲ್ಲಿ ಬಂಡಿಯನ್ನು ಹಿಂದೆ ಮುಂದೆ ಎಳೆಯುವ ಸಂದರ್ಭದಲ್ಲಿ ಯುವಕರು ಉತ್ಸಾಹದಿಂದ ‘ಏಳು ಕೋಟಿಗೆ ಏಳು ಕೋಟಿಗೋ’ ಎಂದು ಜಯ ಘೋಷಣೆ ಕೂಗುತ್ತಾ ಸಂಭ್ರಮಿಸಿದರು. ಒಂದುಗಂಟೆಗೂ ಹೆಚ್ಚುಕಾಲ ನಡೆದ ಈ ಬಂಡಿ ಜಗ್ಗಾಟವು ನೆರೆದಿದ್ದ ಭಕ್ತರ ಮನ ತಣಿಸಿತು. ನಂತರ ಸಾಯಂಕಾಲ ಬಂಡಿಯು ಮರಳಿ ದೇವಸ್ಥಾನಕ್ಕೆ ತರಲಾಯಿತು.

ADVERTISEMENT

ಇದೇ ಸಂದರ್ಭದಲ್ಲಿ ಶಿವಭಾರ ಮಲ್ಲಯ್ಯನ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸರಪಳಿ ಹರಿಯುವ ಕಾರ್ಯಕ್ರಮ ನಡೆಯಿತು. ಹಿರಿಯರು ಮಲ್ಲಯ್ಯನ ಬಂಡಿಗೆ ಕಾಯಿ ಒಡೆದು, ಬಂಡಾರ ಎರಚಿ ಹರಕೆ ತೀರಿಸಿದರು. ಮಕ್ಕಳು ಆಟಿಕೆ ಸಾಮಾನುಗಳ ಖರೀದಿಸಿ ಖುಷಿ ಪಟ್ಟರು. ಸಿಪಿಐ ಸಾಹೇಬಗೌಡ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.