ADVERTISEMENT

ಮತದಾನ ಜಾಗೃತಿ ಮೂಡಿಸಿದ ‘ಚಿತ್ರಕಲೆ’

ಗಾಜರಕೋಟ್ ಗ್ರಾಮದಲ್ಲಿ ಸ್ವೀಪ್ ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಮೇ 2018, 12:53 IST
Last Updated 4 ಮೇ 2018, 12:53 IST
ಯಾದಗಿರಿ ಸಮೀಪದ ಗಾಜರಕೋಟ್ ಗ್ರಾಮದಲ್ಲಿ ಬುಧವಾರ ಮತದಾನ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು
ಯಾದಗಿರಿ ಸಮೀಪದ ಗಾಜರಕೋಟ್ ಗ್ರಾಮದಲ್ಲಿ ಬುಧವಾರ ಮತದಾನ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು   

ಯಾದಗಿರಿ: ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಗಾಜರಕೋಟ್ ಗ್ರಾಮದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ಸಹಯೋಗದೊಂದಿಗೆ ಸಾರ್ವಜನಿಕರಲ್ಲಿ ಮತದಾನ ಜಾಗೃತಿಗಾಗಿ ಚಿತ್ರಕಲೆ ಸ್ಪರ್ಧೆ ಮತ್ತು ಮೇಣದ ಬತ್ತಿ ಜಾಥಾ ನಡೆಸಲಾಯಿತು.

ಗ್ರಾಮದ ರಾಚಪ್ಪಯ್ಯ ದೇವಸ್ಥಾನ ಮುಂಭಾಗದಿಂದ ಬಸವೇಶ್ವರ ವೃತ್ತದವರೆಗೆ ಮೇಣದಬತ್ತಿ ಜಾಥಾ ನಡೆಸಲಾಯಿತು. ದೇವಸ್ಥಾನದ ಎದುರು ಮಾನವ ಸರಪಳಿ ನಿರ್ಮಿಸಿ ‘ಮತದಾನ ಮಾಡೋಣ, ಪ್ರಜಾಪ್ರಭುತ್ವ ಯಶಸ್ವಿಗೊಳಿಸೋಣ’ ಎಂದು ಘೋಷಣೆ ಕೂಗುತ್ತಾ ಸಾರ್ವಜನಿಕರಲ್ಲಿ ಮತದಾನದ ಅರಿವು ಮೂಡಿಸಲಾಯಿತು. ನಂತರ ಕಡ್ಡಾಯವಾಗಿ ಮತದಾನ ಮಾಡಲು ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ ಮಾತನಾಡಿ,‘ಪ್ರಜಾಪ್ರಭುತ್ವ ರಾಪ್ಟ್ರದಲ್ಲಿ ಮತದಾನ ಒಂದು ಸರ್ವಶ್ರೇಷ್ಠ ದಾನವಾಗಿದೆ. ನಮ್ಮ ಮತ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ’ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮದಲ್ಲಿ ಗುರುಮಠಕಲ್ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವನಜಾಕ್ಷಿ ಬೆಂಡಿಗೇರಿ, ಮಹಿಳಾ ಮೇಲ್ವಿಚಾರಕಿಯರಾದ ಗಂಗಾಬಾಯಿ ಪತ್ತಾರ, ಕವಿತಾ ಕುಲಕರ್ಣಿ, ಕೆಂಪವ್ವ ಚಂದರಗಿ, ರೇಣುಕಾ ಯಲಗೋಡ, ಗೀತಾ, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಸ್ತ್ರೀಶಕ್ತಿ ಸಂಘದ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.