ADVERTISEMENT

ಮಳೆ ಶಾಲೆಯೊಳಗೆ ಬಂತು ಕೊಳೆ!

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 8:15 IST
Last Updated 5 ಜುಲೈ 2012, 8:15 IST

ಗುರುಮಠಕಲ್: ಬಿಸಿಲ ನಾಡಿನಲ್ಲಿ ಮಳೆಯನ್ನು ಅವಲಂಬಿಸಿ ಕೃಷಿ ಕೆಲಸ ಮಾಡುವವರೆ ಹೆಚ್ಚಾಗಿರುವ ಈ ಭಾಗದಲ್ಲಿ, ಮಳೆಗಾಗಿ ರೈತ ಕಾದು ಕುಳುತಿರುತ್ತಾನೆ. ಮಳೆ ಬಂತೆಂದರೆ ಸಾಕು ಖುಷಿಯಿಂದ ಕೃಷಿ ಚಟುವಟಿಕೆಗಲ್ಲಿ ತಲೀನನಾಗುತ್ತಾನೆ. ಆದರೆ ಇಲ್ಲಿ ಸಮೀಪದ ಸರಕಾರಿ ಶಾಲೆಯಲ್ಲಿ ಮಳೆ ಬಂತೆಂದರೆ ಸಾಕು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಶಾಲೆಯ ಕೋಣೆಗಳಲ್ಲಿ ತುಂಬಿರುವ ಹೊಲಸಿನಿಂದಾಗಿ ಗೋಳು ಅನುಭವಿಸುವಂತಾಗಿದೆ.

ಅಂತಹದೊಂದು ಶಾಲೆ ಇಲ್ಲಿದೆ ಅದುವೆ ಬಿ.ಎಂ.ಹಳ್ಳಿ (ಬೆಟ್ಟದಹಳ್ಳಿ)ಯ ಸರಕಾರಿ ಹಿರಿಯ ಪಾಥಮಿಕ ಶಾಲೆ. ಸೋಮವಾರ ಸಂಜೆಯಿಂದ ಸತತವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಶಾಲೆ ಆವರಣ ಸಂಪೂರ್ಣ ನೀರು ಆವರಿಸಿ ಶಾಲೆ ಒಳಗೆ ಸುಮಾರು ಒಂದು ಅಡಿಯಷ್ಟು ನೀರು ನಿಂತಿವೆ. ಇದರಿಂದಾಗಿ ಶಾಲೆಯ ಎಲ್ಲ ಕೋಣೆಗಳಲ್ಲಿ ಕೆಸರು ತುಂಬಿದ್ದು ತರಗತಿಗಳು ಕೆಸರು ಗದ್ದೆಗಳಾಗಿ ಪರಿಣಮಿಸಿವೆ.

ಶಾಲೆಯಲ್ಲಿ ಒಟ್ಟು 139 ದಾಖಲಾತಿಯಿದ್ದು ಕೇವಲ ನಾಲ್ಕು ಕೋಣೆಗಳಿವೆ. ಇನ್ನೊಂದು ಕೋಣೆ ನಿಮಾರ್ಣ ಹಂತದಲ್ಲಿದೆ. ನಾಲ್ಕು ಜನ ಶಿಕ್ಷಕರಿದ್ದಾರೆ ಅವರು ಎಲ್ಲರೂ ಸಾಮಾನ್ಯ ಕನ್ನಡ ಶಿಕ್ಷಕರು, ಇಲ್ಲಿ ವಿಷಯ ಶಿಕ್ಷಕರ ಕೊರತೆ ಇದೆ, ಅಡುಗೆ ಕೋಣೆ ಇ್ಲ್ಲಲ. ಅಡುಗೆ ಸಾಮಗ್ರಿಗಳು ತರಗತಿ ಕೋಣೆಯಲ್ಲಿಯೇ ಸಂಗ್ರಹಿಸಿ ಇಡಲಾಗುತ್ತಿದೆ.

ವಸ್ತುಗಳು ಹಾಳು: ಮಳೆಯ ನೀರು ಕೋಣೆಯೊಳಗೆ ಸುಮಾರು ಒಂದು ಅಡಿಯಷ್ಟು ನಿಂತಿರುವುದರಿಂದಾಗಿ ಕೋಣೆಯಲ್ಲಿನ ಅಡುಗೆ ಸಾಮಗ್ರಿಗಳು ನೀರಿನಲ್ಲಿ ತೇಲಾಡಿವೆ. ಬಿಸಿ ಊಟದ 50 ಕಿ.ಗ್ರಾಂ. ಬೇಳೆ, ಒಂದು ಕ್ವಿಂಟಲ್ ಅಕ್ಕಿ. ನಲಿ-ಕಲಿ ಕೋಣೆಯಲ್ಲಿನ ದಾಖಲೆಗಳು, ಬಿಸಿ ಊಟದ ಇತರೆ ಸಾಮಗ್ರಿಗಳು ಸಂಪೂರ್ಣವಾಗಿ ಹಾಳಾಗಿವೆ. ಇರುವ ನಾಲ್ಕು ತರಗತಿ ಕೊಣೆಗಳು ಎಲ್ಲವು ಕೆಸರು ತುಂಬಿವೆ. ವಿದ್ಯಾರ್ಥಿಗಳಿಗೆ ಕೂಡಲು ಸ್ಥಳ ಇಲ್ಲದೇ ಅಲೆದಾಡುವು ಪರಿಸ್ಥಿತಿ ಎದುರಾಗಿದೆ.

ಗ್ರಾಮ ಪಂಚಾಯತಿ ನಿರ್ಲಕ್ಷ್ಯ: ಶಾಲೆ ಎದುರುಗಡೆ ಹಳ್ಳ ಹರಿಯುತ್ತದೆ. 2011-12ನೇ ಸಾಲಿನ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ 2.5 ಲಕ್ಷ ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಭೀಮಶಪ್ಪ ಶಾಲೆಯ ಕಾಂಪೌಂಡ್ ಗೋಡೆ ನಿರ್ಮಿಸಿದರು. ನಿಮಾರ್ಣದ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಮುಖ್ಯಗುರುಗಳು ಕಾಂಪೌಂಡ್ ಗೋಡೆಯ ಬೆಸ್ ಮೆಂಟ್ ಎತ್ತರ ಮಾಡುವಂತೆ ತಿಳಿಸಿದರೂ ಕೇಳದ ಸದಸ್ಯರು ಹಾಗೆಯೇ ಕಾಮಗಾರಿಯನ್ನು ಪೂರ್ಣಗಳಿಸಿದರು.

ಕೆಳಮಟ್ಟಕ್ಕೆ ಇರುವುದು, ಕಾಂಪೌಂಡ್‌ಗೆ ಗೇಟ್ ಇಲ್ಲದಿರುವುದರಿಂದ ಮಳೆಯ ನೀರು ಕಾಂಪೌಂಡ್ ಒಳಗಡೆ ಸರಳವಾಗಿ ನುಗ್ಗಿ ಒಳಗಿನ ಶಾಲಾ ಆವರಣ ತುಂಬಿಕೊಳ್ಳುತ್ತದೆ. ತರಗತಿ ಕೋಣೆಗಳಲ್ಲಿಯು ಸುಮಾರು ಒಂದು ಅಡಿ ಎತ್ತರ ನೀರು ನಿಂತಿವೆ. ಕಾಂಪೌಡ್ ಕಟ್ಟುವಾಗ ತಿಳಿಸಿದರೂ ಪಂಚಾಯಿತಿಯವರು ನಿರ್ಲಕ್ಷ್ಯ ತೊರಿದ್ದಾರೆ ಎಂದು ಶಾಲೆಯ ಮುಖ್ಯಗುರು ಮತ್ತು ಸಿಬ್ಬಂದ್ದಿ ಆರೋಪಿಸಿದ್ದಾರೆ.  

ಕೊರತೆ: ಶಾಲೆಗೆ ವಿಷಯ ಶಿಕ್ಷಕರ ಅಗತ್ಯವಿದ್ದು, ಪ್ರತ್ಯೇಕ ಅಡುಗೆ ಕೋಣೆ ಮಾಡಬೇಕು, ಶಾಲೆಯ ಕಾಂಪೌಂಡ್ ಗೋಡೆಯನ್ನು ಸ್ವಲ್ಪ ಎತ್ತರ ಗೊಳಿಸಬೇಕಾಗಿದೆ, ಮತ್ತು ನೇರವಾಗಿರುವ ಗೇಟ್ ಈಶಾನ್ಯ ದಿಕ್ಕಿಗೆ ಬದಲಿಸಬೇಕಾಗಿದೆ.

ಇದನ್ನು ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಬಿ.ಜಗದೀಶ ಶಾಲೆಗೆ ಭೇಟಿ ನೀಡಿದ್ದು ಸಮಸ್ಯೆಯನ್ನು ಆಲಿಸಿ ಪರಿಹಾರಕ್ಕೆ ಪ್ರಯತ್ನಿಸುವೆ, ಶಿಕ್ಷಣ ಇಲಾಖೆಯವರು ಶಾಲೆಯತ್ತ ಗಮನ ಹರಿಸದೇ ಇರುವುದು ಮತ್ತು ಮೇಲಾಧಿಕಾರಿಗಳು ಗ್ರಾಮೀಣ ಭಾಗದ ಶಾಲೆಗಳಿಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಸಿದ್ದುನಾಯಕ, ಪಂಚಾಯಿತಿ ಸದಸ್ಯರಾದ ಭೀಮಶಪ್ಪ, ತಾರಿಬಾಯಿ ಹಾಗೂ ಸಾರ್ವಜನಿಕರಾದ ಕಿಶನ್. ಲಾಲ್ಯಾನಾಯಕ್, ಖಾಸಪ್ಪ ಕೊಂಕಲ್ ಸೇರಿದಂತೆ ಇತರರು ಭೇಟಿ ನೀಡಿದರು. ಮುಖ್ಯಗುರು ಕ್ರಿಷ್ಟಪ್ಪ, ಸಹ ಶಿಕ್ಷಕರಾದ ಬುಗ್ಗಪ್ಪ, ಉಮೇಶ, ಮಂಜುನಾಥ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.