ADVERTISEMENT

ಮೈತ್ರಿಕೂಟ ರಚನೆಗೆ ವೇದಿಕೆ ಸಿದ್ಧ

ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 6:30 IST
Last Updated 11 ಸೆಪ್ಟೆಂಬರ್ 2013, 6:30 IST

ಯಾದಗಿರಿ: ಕುತೂಹಲ ಕೆರಳಿಸಿರುವ ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ಬುಧವಾರ (ಸೆ.11) ನಡೆಯಲಿದ್ದು, ಯಾವುದೇ ಪಕ್ಷಕ್ಕೆ ಬಹುಮತವಿಲ್ಲದ ನಗರಸಭೆಯಲ್ಲಿ ಅಧಿಕಾರ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಯಾದಗಿರಿ ನಗರಸಭೆ ಒಟ್ಟು 31 ಸ್ಥಾನಗಳಲ್ಲಿ ಕಾಂಗ್ರೆಸ್‌ 11, ಜೆಡಿಎಸ್‌ 8, ಕೆಜೆಪಿ 6, ಬಿಎಸ್ಸಾರ್‌ ಕಾಂಗ್ರೆಸ್‌ 4, ಸ್ಥಾನಗಳನ್ನು ಹೊಂದಿವೆ. ಬಿಜೆಪಿ ಹಾಗೂ ಪಕ್ಷೇತರ ಒಬ್ಬ ಸದಸ್ಯ,   ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿರುವ ಕಾಂಗ್ರೆಸ್‌, ಅಧ್ಯಕ್ಷ ಸ್ಥಾನ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಕಾಂಗ್ರೆಸ್‌ನ ಕನಸನ್ನು ಛಿದ್ರಗೊಳಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ.

ಮೈತ್ರಿಗಾಗಿ ಕಾಂಗ್ರೆಸ್‌ ಮುಖಂಡರು, ಜೆಡಿಎಸ್‌ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಆದರೆ ಜೆಡಿಎಸ್‌ ನಾಯಕರು ಮಾತ್ರ ಅಧ್ಯಕ್ಷ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರವಿದ್ದು, ನಗರಸಭೆಯ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ ನೀಡುವಂತೆ ಮುಖಂಡರು ಮನವಿ ಮಾಡಿದ್ದರು.

ಯಾವುದೇ ಸ್ಪಷ್ಟ ಭರವಸೆ ನೀಡದ ಜೆಡಿಎಸ್‌ ನಾಯಕರು, ಇದೀಗ ಕಾಂಗ್ರೆಸ್ಸೇತರ ಮೈತ್ರಿಕೂಟ ರಚನೆಗೆ ಮುಂದಾಗಿದ್ದಾರೆ. ಅಧ್ಯಕ್ಷ ಸ್ಥಾನವನ್ನು ತಮಗೆ ಉಳಿಸಿಕೊಳ್ಳುವುದರ ಜೊತೆಗೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವ ತಂತ್ರದಲ್ಲಿ ತೊಡಗಿದ್ದಾರೆ.
ಜೆಡಿಎಸ್‌ ಪಕ್ಷದ ಉನ್ನತ ಮೂಲಗಳ ಪ್ರಕಾರ, ಜೆಡಿಎಸ್‌ನ 8, ಕೆಜೆಪಿಯ 6 ಹಾಗೂ ಬಿಎಸ್ಸಾರ್‌ ಕಾಂಗ್ರೆಸ್‌ ನಾಲ್ಕು ಸದಸ್ಯರು ಸೇರಿ ಅಧಿಕಾರ ಚುಕ್ಕಾಣಿ ಹಿಡಿಯಲು ನಿರ್ಧರಿಸಲಾಗಿದೆ. ಮೂರು ಪಕ್ಷಗಳ ನಾಯಕರು, ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ಹೊರಗಿಡುವ ಯೋಜನೆ ರೂಪಿಸಿದ್ದಾರೆ.

ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನ: ಜೆಡಿಎಸ್‌, ಕೆಜೆಪಿ ಹಾಗೂ ಬಿಎಸ್ಸಾರ್‌ ಕಾಂಗ್ರೆಸ್‌ ಪಕ್ಷದ ನಾಯಕರು ನಡೆಸಿದ ಮಾತುಕತೆಯ ಸಂದರ್ಭದಲ್ಲಿ ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಉಪಾಧ್ಯಕ್ಷ ಸ್ಥಾನವನ್ನು ಬಿಎಸ್ಸಾರ್‌ ಕಾಂಗ್ರೆಸ್‌ಗೆ ನೀಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಇನ್ನು ಕೆಜೆಪಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಇದರಿಂದಾಗಿ ಇತರೆ ಹಿಂದುಳಿದ ವರ್ಗಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಮಹ್ಮದ್‌ ಇಸಾಕ್‌ ಜಮಖಂಡಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಚಮ್ಮ ಅನಪೂರ ಆಯ್ಕೆ ಆಗಬಹುದು ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಜೆಡಿಎಸ್‌ ಮುಖಂಡರೊಬ್ಬರು ’ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕಾಂಗ್ರೆಸ್‌ ಸಿದ್ಧತೆ: ಇನ್ನೊಂದೆಡೆ ಸ್ಥಳೀಯ ಶಾಸಕ ಡಾ. ಎ.ಬಿ. ಮಾಲಕರಡ್ಡಿ ಕೂಡ ಅಧಿಕಾರವನ್ನು ಕಾಂಗ್ರೆಸ್‌ಗೆ ಪಡೆಯಲು ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಜೆಡಿಎಸ್‌, ಕೆಜೆಪಿ ಮುಖಂಡರ ಜೊತೆ ಮಾತುಕತೆ ನಡೆಸಿರುವ ಕಾಂಗ್ರೆಸ್‌ ಮುಖಂಡರು, ಈ ಬಾರಿಯಾದರೂ ನಗರಸಭೆಯಲ್ಲಿ ಅಧಿಕಾರ ನಡೆಸುವ ಸಿದ್ಧತೆ ಆರಂಭಿಸಿದ್ದಾರೆ. ಆದರೆ ಪಕ್ಷದ ಸದಸ್ಯರ ಸಂಖ್ಯೆ 11 ಇದ್ದು, ಇನ್ನೊಂದು ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇದು  ಪಕ್ಷದ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆದರೂ ಕೊನೆಯ ಕ್ಷಣದ ಬೆಳವಣಿಗೆಗಳಲ್ಲಿ ಕಾಂಗ್ರೆಸ್‌ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೂ ಅಚ್ಚರಿ ಪಡುವಂತಿಲ್ಲ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ.

ಬುಧವಾರ ಬೆಳಿಗ್ಗೆ ನಗರಸಭೆ ಸಭಾಂಗಣದಲ್ಲಿ ನಡೆಯಲಿರುವ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಯ ನಂತರವೇ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.