ADVERTISEMENT

ಯಾದಗಿರಿ ಕೃಷಿ ಸಹಾಯಕ ನಿರ್ದೇಶಕ ವಿರುದ್ಧ ಆಕ್ರೋಶ, ಹಲ್ಲೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST
ಯಾದಗಿರಿ ಕೃಷಿ ಸಹಾಯಕ ನಿರ್ದೇಶಕ ವಿರುದ್ಧ ಆಕ್ರೋಶ, ಹಲ್ಲೆ
ಯಾದಗಿರಿ ಕೃಷಿ ಸಹಾಯಕ ನಿರ್ದೇಶಕ ವಿರುದ್ಧ ಆಕ್ರೋಶ, ಹಲ್ಲೆ   

ಯಾದಗಿರಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಗೈರುಹಾಜರಾಗಿದ್ದನ್ನು ಖಂಡಿಸಿದ ಸದಸ್ಯರು  ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ನುಗ್ಗಿ ಸಹಾಯಕ ಕೃಷಿ ನಿರ್ದೇಶಕ ರಾಜಣ್ಣ ಅವರನ್ನು ನೆಲಕ್ಕೆ ಕೆಡವಿ ಹೊಡೆದು, ಬಡಿದು, ಒದ್ದ ಘಟನೆ ಸೋಮವಾರ ನಡೆದಿದೆ.

ಈ ಸಂಬಂಧ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸದಾಶಿವ ರೆಡ್ಡಿ, ಶರಣಪ್ಪ ಮೋಟ್ನಳ್ಳಿ, ಹಣಮಂತ ಲಿಂಗೇರಿ ಎಂಬುವವರನ್ನು ಡಿಎಸ್ಪಿ ನೇತೃತ್ವದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕಚೇರಿಗೆ ನುಗ್ಗಿದ ಎಲ್ಲ ಸದಸ್ಯರು  ಸಿಬ್ಬಂದಿಯನ್ನು ಹೊರ ಹಾಕಿ, ಕಚೇರಿಗೆ ಬೀಗ ಹಾಕುವುದಾಗಿ ಪಟ್ಟು ಹಿಡಿದರು. ಆಗ ತಾ.ಪಂ.ಸದಸ್ಯರು ಹಾಗೂ ರಾಜಣ್ಣ ಮಧ್ಯೆ ಮಾತಿನ ಚಕಮಕಿ ನಡೆಯಿತು.  ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ತಾ.ಪಂ. ಸದಸ್ಯರು ರಾಜಣ್ಣ ಅವರ ಮೇಲೆ ಹಲ್ಲೆ ನಡೆಸಿದರು. ಕೈ-ಕಾಲುಗಳಿಂದ ರಾಜಣ್ಣ ಅವರ ಮೇಲೆ ಹಲ್ಲೆ ನಡೆಸಿದರು, ರಾಜಣ್ಣ ಅವರನ್ನು ನೆಲಕ್ಕೆ ತಳ್ಳಿ ಬಡಿದರು. ಮಧ್ಯ ಪ್ರವೇಶಿಸಿದ ಕಚೇರಿ ಸಿಬ್ಬಂದಿ ರಾಜಣ್ಣ ಅವರನ್ನು ಬಿಡಿಸಿ, ಹೊರಗೆ ಕರೆ ತಂದರು.

ನಂತರ ಕಚೇರಿಗೆ ಬೀಗ ಹಾಕಿದ ತಾ.ಪಂ. ಸದಸ್ಯರು, ಧರಣಿ ಆರಂಭಿಸಿದರು.

ವಿವರ: ಸೋಮವಾರ ತಾ.ಪಂ. ಸಭಾಂಗಣದಲ್ಲಿ ಸಾಮಾನ್ಯ ಸಭೆ ಕರೆಯಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರಾದ ಹಣಮಂತಪ್ಪ ಬಳಿಚಕ್ರ, ಶರಣಪ್ಪ ಮೋಟ್ನಳ್ಳಿ ಹಾಗೂ ಹಣಮಂತ ಲಿಂಗೇರಿ ಮಾತನಾಡಿ, ಹಲವು ಸಾಮಾನ್ಯ ಸಭೆಗಳಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಬರುತ್ತಿಲ್ಲ. ಇಲಾಖೆಯ ಯೋಜನೆಗಳ ಮಾಹಿತಿ ನೀಡಿಲ್ಲ. ಯಲ್ಹೇರಿ ಮೈಲಾರಲಿಂಗೇಶ್ವರ ಸಾವಯುವ ಕೃಷಿ ಪರಿವಾರದಲ್ಲಿ ಅಧ್ಯಕ್ಷರಿಗೆ ಮಾಹಿತಿ ನೀಡದೆ, ಸಂಚಾಲಕರ ಜೊತೆ ಸೇರಿ ಇನ್ನೊಬ್ಬ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೇ ರೂ. 3.30 ಲಕ್ಷ ಹಣವನ್ನು ಬ್ಯಾಂಕಿನಿಂದ ಪಡೆದಿದ್ದು, ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಸಹಾಯಕ ಕೃಷಿ ಅಧಿಕಾರಿಗಳು ಪದೇಪದೇ ಸಭೆಗೆ ಗೈರುಹಾಜರಾಗುತ್ತಿದ್ದು, ಸೂಕ್ತ ಉತ್ತರ ನೀಡುತ್ತಿಲ್ಲ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಶರಣಮ್ಮ ಕವಾಲ್ದಾರರನ್ನು ಒತ್ತಾಯಿಸಿದರು.

ಮಧ್ಯಪ್ರವೇಶಿಸಿದ ಕಾರ್ಯ ನಿರ್ವಾಹಕ ಅಧಿಕಾರಿ ಬಿರಾದಾರ, ಮೊಬೈಲ್‌ನಲ್ಲಿ ಕೃಷಿ ಅಧಿಕಾರಿಯನ್ನು ಸಂಪರ್ಕಿಸಿ ಸಭೆಗೆ ಬರುವಂತೆ ಸೂಚಿಸಿದರು. ಕಚೇರಿಗೆ ವಿತರಕರು ಬಂದಿದ್ದಾರೆ. ಅವರೊಂದಿಗೆ ಚರ್ಚಿಸುತ್ತಿದ್ದೇನೆ. ನಂತರ ಬರುವುದಾಗಿ ರಾಜಣ್ಣ ತಿಳಿಸಿದರು.

ಇದರಿಂದ ಕುಪಿತರಾದ ಸದಸ್ಯರು, ಕೃಷಿ ಅಧಿಕಾರಿ ಬರುವವರೆಗೆ ಸಭೆ ನಡೆಸದಂತೆ ಪಟ್ಟು ಹಿಡಿದರು. ಕೊನೆಗೆ ಸಭೆಯನ್ನು ಬಹಿಷ್ಕರಿಸಿ ಪಕ್ಕದ ಕೃಷಿ ಇಲಾಖೆ ಕಚೇರಿಗೆ ತೆರಳಿದರು. ಅಲ್ಲಿದ್ದ ಅಧಿಕಾರಿಯನ್ನು ನೋಡಿದ ಸದಸ್ಯರು, ಕಚೇರಿಗೆ ಬೀಗ ಹಾಕುತ್ತೇವೆ ಹೊರಗೆ ನಡೆಯಿರಿ ಎಂದು ಒತ್ತಾಯಿಸಿದರು.

ಅಧಿಕಾರಿ ಮತ್ತು ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲ ಸದಸ್ಯರು ಅವಾಚ್ಯ ಶಬ್ದಗಳಿಂದ ಅಧಿಕಾರಿಯನ್ನು ನಿಂದಿಸಿದರು. ಅಲ್ಲದೇ ರಾಜಣ್ಣರನ್ನು ಎಳೆದಾಡಿ ಚಪ್ಪಲಿ ಹಾಗೂ ಕೈಯಿಂದ ಬಡಿದರು. ಕೆಳಗೆ ಬಿದ್ದ ಅಧಿಕಾರಿ ನೋವು ತಾಳದೇ ಕೂಗಾಡಲು ಆರಂಭಿಸಿದರು.

ರಾಜಣ್ಣರನ್ನು ರಕ್ಷಿಸಲು ಬಂದ ಸಿಬ್ಬಂದಿ ಯಲ್ಲಪ್ಪ ಮೇಲೂ ಸದಸ್ಯರು ಹಲ್ಲೆ ಮಾಡಿದರು. ನಂತರ ಅಧಿಕಾರಿಯನ್ನು ಹೊರಗೆ ಕರೆತರಲಾಯಿತು.  

ಘಟನೆಯ ಕುರಿತು ರಾಜಣ್ಣ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು, ನಗರ ಠಾಣೆಯಲ್ಲಿ ದೂರು-  ಪ್ರತಿ ದೂರು ದಾಖಲಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.